ಭೂಪೇಶ್ ಬಘೇಲ್ ಛತ್ತೀಸ್‌ಗಢ ನೂತನ ಸಿಎಂ ?

Update: 2018-12-16 03:41 GMT

ರಾಯಪುರ, ಡಿ. 16: ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣರಾಗಿದ್ದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲ್ ಅವರನ್ನು ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸೇರಿ ಅಧಿಕೃತವಾಗಿ ನಾಯಕನನ್ನು ಘೋಷಿಸಲಿದೆ. ಡಿ. 17ರಂದು ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಛತ್ತೀಸ್‌ಗಢದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ, ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ಹೋಲಿಸಿದರೆ ವಿಳಂಬವಾಗಿದ್ದು, ಪಕ್ಷದ ಮುಖಂಡರಲ್ಲಿನ ಭಿನ್ನಾಭಿಪ್ರಾಯ ಇದಕ್ಕೆ ಕಾರಣ ಎಂದು ಮತ್ತೊಬ್ಬ ಮುಖಂಡರು ಒಪ್ಪಿಕೊಂಡಿದ್ದಾರೆ. 90 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 68 ಸ್ಥಾನಗಳನ್ನು ಗೆದ್ದಿದ್ದು, ಕೇವಲ 15 ಸ್ಥಾನಗಳನ್ನು ಗೆದ್ದ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ತಾಮ್ರಧ್ವಜ್ ಸಾಹು ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಲು ಪಕ್ಷದ ಮುಖಂಡರು ನಿರ್ಧರಿಸಿದ್ದರು. ಆದರೆ ಇದಕ್ಕೆ ಬಘೇಲ್ ಹಾಗೂ ಮಾಜಿ ಸಿಎಲ್‌ಪಿ ನಾಯಕ ಟಿ.ಎಸ್. ಸಿಂಗ್‌ದೇವ್ ಅವರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೈಕಮಾಂಡ್ ತನ್ನ ನಿರ್ಧಾರ ಬದಲಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಭರ್ಜರಿ ಬಹುಮತ ಗಳಿಸಿದ್ದರೂ, ಸಂಭಾವ್ಯ ಬಂಡಾಯ ತಡೆಯುವ ನಿಟ್ಟಿನಲ್ಲಿ ಮ್ಯಾರಥಾನ್ ಸಭೆ ನಡೆಸಿದ ಬಳಿಕ ಪಕ್ಷದ ಮುಖಂಡರು ತಮ್ಮ ನಿರ್ಧಾರ ಬದಲಿಸಿದ್ದು, ಎಲ್ಲರಿಗೂ ಸ್ವೀಕಾರಾರ್ಹ ಪರಿಹಾರ ಸೂತ್ರ ಕಂಡುಹಿಡಿದಿದ್ದಾರೆ ಎನ್ನಲಾಗಿದೆ.

ಆದರೆ ಉಭಯ ಮುಖಂಡರು ಐದು ವರ್ಷಗಳ ಅಧಿಕಾರಾವಧಿಯಲ್ಲಿ ತಲಾ ಎರಡೂವರೆ ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ ಎಂಬ ವದಂತಿಯನ್ನು ಪಕ್ಷದ ಮೂಲಗಳು ನಿರಾಕರಿಸಿವೆ. ರಾಹುಲ್‌ಗಾಂಧಿಯವರ ನಿವಾಸದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿ ಮುಖಂಡರ ಜತೆ ಸುಧೀರ್ಘ ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News