ಅತ್ಯಾಚಾರ, ದೌರ್ಜನ್ಯಕ್ಕೊಳಗಾದವರು ಎದೆಗುಂದಬಾರದು: ಹಿರಿಯ ಸಾಹಿತಿ ಡಾ.ವಿಜಯಾ

Update: 2018-12-16 13:44 GMT

ಬೆಂಗಳೂರು, ಡಿ.16: ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದವರು ಏನೋ ಕಳೆದುಕೊಂಡುಬಿಟ್ಟೆವು ಎಂದು ಎದೆಗುಂದಬಾರದು. ಇದರಲ್ಲಿ ಅವರದೇನೂ ತಪ್ಪಿರುವುದಿಲ್ಲ. ಅದರ ವಿರುದ್ಧ ಹೋರಾಡುವ ಮೂಲಕ ದೌರ್ಜನ್ಯಗಳು ಆಗದಂತೆ ತಡೆಯಬೇಕು ಎಂದು ಹಿರಿಯ ಸಾಹಿತಿ ಡಾ.ವಿಜಯಾ ಹೇಳಿದ್ದಾರೆ.

ರವಿವಾರ ನಗರದ ಗಾಂಧೀ ಭವನದಲ್ಲಿ ಮಹಿಳಾ ಮುನ್ನಡೆ ಮತ್ತು ಲೈಂಗಿಕ ದೌರ್ಜನ್ಯ ವಿರೋಧಿ ಜನಚಳವಳಿ ಸಂಘಟನೆಗಳ ವತಿಯಿಂದ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರದ ವಿರುದ್ಧ ‘ಮಹಿಳಾ ನ್ಯಾಯಾಲಯ’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಅವರು ಮಾತನಾಡಿದರು.

ಈಗ ಯಾರೋ ಹಾಕಿಕೊಟ್ಟ ಚೌಕಟ್ಟಿನಲ್ಲಿ ನಿಂತು ಯೋಚಿಸುವುದನ್ನು ಬಿಟ್ಟು ಹೊಸ ರೀತಿಯಲ್ಲಿ ನಮ್ಮ ಮಕ್ಕಳು ಆಲೋಚಿಸುವುದನ್ನು ಕಲಿಸಬೇಕಿದೆ. ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವುದು ಕೇವಲ ಶೇ.26ರಷ್ಟು ಮಾತ್ರ. ಲೈಂಗಿಕ ಹಿಂಸಾಚಾರಕ್ಕೆ ಗುರಿಯಾದವರಿಗೆ ತುರ್ತು ನೆರವು ಬೆಂಬಲ ಪರಿಹಾರ ಮತ್ತು ಪುನರ್ವಸತಿ ಹಾಗೂ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು. ಮಹಿಳಾ ಪರವಾದ ಸಕಾರಾತ್ಮಕ ಚಿತ್ರಣವಿರುವ ಸಿನಿಮಾ ಜಾಹೀರಾತು ಟಿವಿ ಕಾರ್ಯಕ್ರಮಗಳು ಹೆಚ್ಚು ಮಾಡಲು ಪ್ರಜ್ಞಾಪೂರ್ವಕ ಪ್ರಯತ್ನ ನಡೆಯಬೇಕು.  ಇದಕ್ಕಾಗಿ ಬಜೆಟ್ ಮೀಸಲಿಡಬೇಕು. ಪೋಕ್ಸೋ ಕಾಯ್ದೆಯ ಸೆಕ್ಷನ್ 3 ನ್ನು ತಿದ್ದುಪಡಿ ಮಾಡಿ 10 ವರ್ಷದ ಒಳಗಿನ ಮಕ್ಕಳನ್ನು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ಲೈಂಗಿಕ ಹಿಂಸೆ ವಿರೋಧಿ ಚಳವಳಿ ಸದಸ್ಯೆ ಡಾ. ಸ್ವಾತಿ ಶುಕ್ಲ ಮಾತನಾಡಿ, ರಾಜ್ಯಾದ್ಯಂತ ಎಲ್ಲ ಕಡೆ ಸುತ್ತಾಡಿ, ಹಲವು ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿದ್ದೇವೆ. ಪೊಲೀಸ್ ಠಾಣೆ, ನ್ಯಾಯಾಲಯ, ಮಹಿಳಾ ಅಭಿವೃದ್ಧಿ ಇಲಾಖೆ ಸೇರಿದಂತೆ ಅನೇಕ ಸಂಸ್ಥೆ ಮತ್ತು ಇಲಾಖೆಗಳಲ್ಲಿ ಅಧ್ಯಯನ ಮಾಡಿದೆವು. ನಾವು ಅಧ್ಯಯನ ನಡೆಸಿದ 31 ಪ್ರಕರಣಗಳಲ್ಲಿ 14 ತಿಂಗಳ ಮಗುವಿನಿಂದ 35 ವರ್ಷದವರೆಗಿನ ಮಹಿಳೆಯರಿದ್ದಾರೆ. ಮಕ್ಕಳಿಗೆ ನೀವು ಎಂಥದ್ದೋ ಬಟ್ಟೆ ಹಾಕಿದ್ದಕ್ಕೆ ಅತ್ಯಾಚಾರಗಳು ನಡೆಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದನ್ನು ಇದರಿಂದ ಅರಿಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸತ್ಯಶೋಧನಾ ವರದಿಯ ಕುರಿತಾದ ‘ವಿ ವೋಂಟ್ ಸರ್ರೆಂಡರ್’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಎನ್‌ಫೋಲ್ಡ್ ಸಂಸ್ಥೆಯ ಸಂಸ್ಥಾಪಕರಾದ ಡಾ.ಶೋಯಿಬಾ ಸಲ್ಡಾನಾ, ಸದಸ್ಯರಾದ ಗೌರಿ ಮತ್ತ ರೂಮಿ ಹರೀಶ್ ಪಾಲ್ಗೊಂಡಿದ್ದರು.

ಅತ್ಯಾಚಾರದ ನಂತರ ಪೋಲೀಸ್ ಠಾಣೆಗೆ ನನ್ನ ಮಗುವಿನೊಂದಿಗೆ ಹೋಗಿದ್ದೆ. ಕಂಪ್ಲೈಂಟ್ ತಗೊಳ್ಳಲು 2 ಗಂಟೆ ಕಾಯಿಸಿದರು. ನಂತರ ಘಟನೆ ಬಗ್ಗೆ ಹೇಳಿದರೆ ಓಹ್ ಇಷ್ಟೆನಾ ಕಾಯಿರಿ ಎಂದರು. ನಾವು ಮಗು ಅಂದರೆ ಬೊಂಬೆನಾ ನೀವು ಅಷ್ಟು ಸುಲಭ ಎಂದು ತಿಳಿಯಲು ಎಂದು ಜೋರು ಮಾಡಿದೆವು. ಆಗ ಕೇಸು ದಾಖಲಿಸಿಕೊಂಡರು. ಇನ್ನು ಆಸ್ಪತ್ರೆಗೆ ಹೋದರೆ ಅಲ್ಲಿ ಡಾಕ್ಟರ್ ನಿಮಗೇನು ಟೈಮ್ ಇಲ್ವಾ? ಯಾವಾಗ ಬೇಕು ಆವಾಗ ಬರ್ತಿರಲ್ಲ, ಈ ಮಗು ಹೇಳೋದು ನಿಜವೆ ಎಂದರು. ಇದು ನಮ್ಮನ್ನು ನೋವು ಸಂಕಟಕ್ಕೆ ದೂಡಿತು. ಇದು ನಮ್ಮ ತಪ್ಪಲ್ಲ. ನಮ್ಮ ಮಗು ಯಾಕೆ ಸುಳ್ಳು ಹೇಳುತ್ತದೆ ಎಂದು ನೋವು ತೋಡಿಕೊಂಡೆವು ಎಂದು ಸಂತ್ರಸ್ಥೆಯ ತಾಯಿಯೊಬ್ಬರು ವಿವರಿಸಿದರು.

ನನ್ನ ಮಗಳ ಮೇಲಿನ ಅತ್ಯಾಚಾರ ಹಾಗೂ ಕೊಲೆಯಾಗಿ ಡಿ.19 ಕ್ಕೆ ಒಂದು ವರ್ಷವಾಗುತ್ತದೆ. ಆದರೆ, ಇದುವರೆಗೂ ನನ್ನ ಮಗಳ ಸಾವಿಗೆ ನ್ಯಾಯ ಸಿಕ್ಕಿಲ್ಲ. ಸರಕಾರದಿಂದಲೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಅಲ್ಲದೆ, ನನ್ನ ಮಗಳ ಸಾವಿಗೆ ಕಾರಣರಾದ ಆರೋಪಿಗಳು ಆರಾಮವಾಗಿ ಓಡಾಡುತ್ತಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆಯಾಗಬೇಕು ಹಾಗೂ ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಅಷ್ಟೇ ನನ್ನ ಬೇಡಿಕೆ.

-ಹನುಮಂತ ಶಹಾಪುರ, ಸಂತ್ರಸ್ಥೆ ಮಗಳ ತಂದೆ, ಬಿಜಾಪುರ

ನಮ್ಮ ಪಾಪುಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ನಮ್ಮ ಪಾಪುಗೆ ಆದ ಅತ್ಯಾಚಾರದಿಂದ ಇಡೀ ಆ ಶಾಲೆಯ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಆ ಶಾಲೆಯೇ ಮುಚ್ಚಿ ಹೋಗುವ ಅಪಾಯವಿದೆ.

-ಮೊಬಿನಾ, ಸಂತ್ರಸ್ಥೆಯ ತಾಯಿ, ಕೆ.ಆರ್. ಪೇಟೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News