'ಹಿಂದೂಗಳು 5 ಮಕ್ಕಳನ್ನು ಹೊಂದಬೇಕು, ಎಲ್ಲರಿಗೂ ಶಸ್ತ್ರ ನೀಡಬೇಕು'

Update: 2018-12-17 07:33 GMT

ಜಮ್ಮು, ಡಿ. 17: ''ಹಿಂದೂಗಳು ಐದು ಮಕ್ಕಳನ್ನು ಹೊಂದಬೇಕು ಹಾಗೂ ಎಲ್ಲರಿಗೂ ಶಸ್ತ್ರ ನೀಡಬೇಕು'' ಎಂದು ಹೇಳಿ 2008ರ ಅಮರನಾಥ್ ಆಂದೋಲನದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದ ಮಹಂತ್ ದಿನೇಶ್ ಭಾರತಿ ವಿವಾದಕ್ಕೀಡಾಗಿದ್ದಾರೆ.

ರವಿವಾರ ಜಮ್ಮುವಿನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಧರ್ಮ ಸಭಾದ ವೇದಿಕೆಯಲ್ಲಿದ್ದ ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಹಾಗೂ ಮೂವರು ಮಾಜಿ ಬಿಜೆಪಿ ಸಚಿವರುಗಳ ಸಮ್ಮುಖದಲ್ಲಿಯೇ ದಿನೇಶ್ ಅವರ ಈ ಹೇಳಿಕೆ ವಿವಾದಕ್ಕೀಡಾಗಿದೆ.  ಸಭೆಯಲ್ಲಿ ಅಖಿಲ ಭಾರತ ಸಂತ್ ಸಮಿತಿ ಮುಖ್ಯಸ್ಥ ಸ್ವಾಮಿ ಜಗದ್ಗುರು ಹಂಸದೇವಾಚಾರ್ಯಜಿ ಮುಖ್ಯ ಅತಿಥಿಯಾಗಿದ್ದರೆ, ಮಾಜಿ ಸಚಿವರಾದ ಚಂದರ್ ಪ್ರಕಾಶ್ ಗಂಗಾ, ಶಾಮ್ ಚೌಧುರಿ ಹಾಗೂ ಸತ್ ಶರ್ಮ ಕೂಡ ಹಾಜರಿದ್ದರು.

ಹಿಂದೂ ವ್ಯಕ್ತಿಯೊಬ್ಬ 2039ರಲ್ಲಿ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದ ದಿನೇಶ್ ಭಾರತಿ, ''ನನ್ನದೊಂದು ಮನವಿ. ಪ್ರತಿಯೊಬ್ಬ ಹಿಂದೂವಿಗೆ ಐದು ಮಕ್ಕಳಿರಬೇಕು ಹಾಗೂ ಈ ಎಲ್ಲಾ ಐದು ಮಕ್ಕಳಿಗೂ ಶಸ್ತ್ರ ನೀಡಬೇಕು. ಯಾರಾದರೂ  ತಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಅವರ ಕಣ್ಣು ಕೀಳಬೇಕು ಎಂದು ಅವರು ಹೇಳಿದ್ದಾರೆ.

''ಅಯ್ಯೋಧ್ಯೆಯಲ್ಲಿ ಶ್ರೀ ರಾಮನಿಗೆ ಭವ್ಯ ಮಂದಿರ ನಿರ್ಮಿಸಲು ಹಿಂದೂಗಳು ಶ್ರಮಿಸಬೇಕು, ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜಗತ್ತಿನ ಯಾವುದೇ ಶಕ್ತಿ ತಡೆ ಹೇರಲು ಸಾಧ್ಯವಿಲ್ಲ'' ಎಂದು ಹೇಳಿದರು.

ಈ ವಿವಾದಿತ ಭಾಷಣದ ಕುರಿತಾಗಿ ಪ್ರತಿಕ್ರಿಯಿಸಿದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರ ಸಲಹೆಗಾರ ಕೆ ವಿಜಯ್ ಕುಮಾರ್ ''ನಾವು ಭಾಷಣಗಳನ್ನುಪರಿಶೀಲಿಸುತ್ತಿದ್ದೇವೆ, ಕಾನೂನು ತಜ್ಞರ ಅಭಿಪ್ರಾಯ ಕೇಳುತ್ತೇವೆ. ಕಾನೂನು ಉಲ್ಲಂಘಿಸಲಾಗಿದೆಯೆಂದು ಕಂಡು ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News