ನಿಮ್ಮ ಕ್ರೆಡಿಟ್ ಕಾರ್ಡ್ ವಿವರ 71 ರೂ. ಗೆ ಮಾರಾಟಕ್ಕಿದೆ!

Update: 2018-12-17 16:48 GMT

ಹೊಸದಿಲ್ಲಿ, ಡಿ.17: ನಿಮ್ಮ ವೈಯಕ್ತಿಕ ಮಾಹಿತಿಯನ್ನು ‘ಡಾರ್ಕ್ ವೆಬ್’ನಲ್ಲಿ ಕೇವಲ 71 ರೂ. ಪಾವತಿಸಿ ಯಾರು ಬೇಕಾದರೂ ಪಡೆಯಬಹುದಾಗಿದೆ ಎಂದು ಸಂಸ್ಥೆಯೊಂದರ ತನಿಖಾ ವರದಿ ತಿಳಿಸಿದೆ. ಉಬರ್ ವೆಬ್‌ಸೈಟ್, ಗೇಮ್(ಆಟವಾಡುವ ) ಆಡುವ ಸೈಟ್‌ಗಳು, ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ನಿಂದ ವ್ಯಕ್ತಿಯೊಬ್ಬನ ಕ್ರೆಡಿಟ್ ಕಾರ್ಡ್ ವಿವರ, ಬ್ಯಾಂಕಿಂಗ್ ವ್ಯವಹಾರದ ಮಾಹಿತಿ, ಸಾಮಾಜಿಕ ಮಾಧ್ಯಮಗಳಲ್ಲಿ ಹೊಂದಿರುವ ಖಾತೆಗಳ ಮಾಹಿತಿಯನ್ನು ಕದ್ದು ಮಾರಲಾಗುತ್ತದೆ ಎಂದು ಸೈಬರ್‌ಭದ್ರತೆಯ ಸಂಸ್ಥೆ  ‘ಕ್ಯಾಸ್ಪರ್‌ಸ್ಕೈ ಲ್ಯಾಬ್’ ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ.

 ಸೈಬರ್ ವಂಚಕರು ವ್ಯಕಿಯೊಬ್ಬನ ಬಗ್ಗೆ ಸಂಪೂರ್ಣ ಮಾಹಿತಿಗೆ 3,500 ರೂ, ಒಂದು ಮಾಹಿತಿಗೆ 71 ರೂ. ಶುಲ್ಕ ವಿಧಿಸುತ್ತಾರೆ ಎಂದು ತನಿಖಾ ವರದಿ ತಿಳಿಸಿದೆ. ಸಾಮಾಜಿಕ ಮಾಧ್ಯಮ(ಫೇಸ್‌ಬುಕ್, ವಾಟ್ಸಾಪ್)ಗಳಲ್ಲಿರುವ ನಿಮ್ಮ ಖಾತೆಗಳಿಂದ ಕದ್ದಿರುವ ಮಾಹಿತಿ, ಬ್ಯಾಂಕಿಂಗ್ ವ್ಯವಹಾರದ ವಿವರ, ನಿಮ್ಮ ಕಂಪ್ಯೂಟರ್ ಹಾಗೂ ಸರ್ವರ್‌ಗಳಿಂದಲೂ ಮಾಹಿತಿ ಕದಿಯಲಾಗುತ್ತದೆ. ಸೇವೆ ಒದಗಿಸುವ ಜನಪ್ರಿಯ ವೆಬ್‌ಸೈಟ್‌ಗಳಾದ ಉಬರ್, ನೆಟ್‌ಫ್ಲಿಕ್ಸ್, ಸ್ಪೋಟಿಫೈ, ಗೇಮಿಂಗ್ ವೆಬ್‌ಸೈಟ್‌ಗಳಿಂದ, ಡೇಟಿಂಗ್ ಮಾಡುವ ಆ್ಯಪ್‌ಗಳಿಂದ, ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ಗಳಿಂದ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕದಿಯಲಾಗುತ್ತದೆ . ಹ್ಯಾಕ್ ಮಾಡಲಾದ ಒಂದು ವಿವರ (ಉದಾಹರಣೆಗೆ: ಬ್ಯಾಂಕಿಂಗ್ ವ್ಯವಹಾರ)ದ ಮಾಹಿತಿಗೆ ಸೈಬರ್ ವಂಚಕರು ಕೇವಲ 1 ಡಾಲರ್(71 ರೂಪಾಯಿ) ಮಾತ್ರ ಪಡೆಯುತ್ತಾರೆ. ಅಲ್ಲದೆ ಸಗಟು ಖರೀದಿಗೆ (ಬೃಹತ್ ಖರೀದಿಗೆ) ಡಿಸ್ಕೌಂಟ್ ಕೊಡುಗೆ ಕೂಡಾ ನೀಡಲಾಗುತ್ತದೆ ಎಂದು ಕ್ಯಾಸ್ಪರ್‌ಸ್ಕೈ ಲ್ಯಾಬ್‌ನ ತನಿಖಾ ತಂಡ ತಿಳಿಸಿದೆ.

ಮಾಹಿತಿ ಹ್ಯಾಕ್ ಮಾಡುವುದು ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಬಹುದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಹೀಗೆ ಕದಿಯುವ ಮಾಹಿತಿಗಳಿಂದ ಪಡೆದ ಹಣ ಸಮಾಜ ಕಂಟಕ ಕಾರ್ಯಗಳಿಗೆ ಬಳಕೆಯಾಗುತ್ತದೆ ಎಂದು ಕ್ಯಾಸ್ಪರ್‌ಸ್ಕೈ ಲ್ಯಾಬ್‌ನ ಹಿರಿಯ ಭದ್ರತಾ ಸಂಶೋಧಕ ಡೇವಿಡ್ ಜಾಕೊಬಿ ಹೇಳಿದ್ದಾರೆ. ವೈಯಕ್ತಿಕವಾಗಿ ಹಲವು ನಷ್ಟ ಉಂಟಾಗಬಹುದು. ವ್ಯಕ್ತಿಯ ಹಣ ನಷ್ಟವಾಗಬಹುದು, ಸಮಾಜದಲ್ಲಿ ಗೌರವವಕ್ಕೆ ಚ್ಯುತಿ ಬರಬಹುದು. ವಂಚಕರು ನಡೆಸುವ ಅಪರಾಧ ಕೃತ್ಯಗಳಿಗೆ ಇವರು ಬಲಿಪಶುಗಳಾಗಬಹುದು. ಮಾಹಿತಿ ಕದಿಯುವವರು ಸಾಮಾನ್ಯವಾಗಿ ಬಳಸುವ ಮಾರ್ಗವೆಂದರೆ, ಬಳಕೆದಾರರ ಆ್ಯಪ್‌ನಲ್ಲಿರುವ ಸಾಫ್ಟ್‌ವೇರ್‌ನಲ್ಲಿರುವ ಭದ್ರತಾ ದುರ್ಬಲತೆಯನ್ನು ಬಳಸಿಕೊಳ್ಳುವುದು. ಹೀಗೆ ಸಾಫ್ಟ್‌ವೇರ್ ಮೇಲೆ ಆಕ್ರಮಣ ನಡೆಸುವ ಕ್ರಿಮಿನಲ್‌ಗಳು ‘ಪಾಸ್‌ವರ್ಡ್ ರಾಶಿ’ಯನ್ನು ಕೈವಶ ಮಾಡಿಕೊಳ್ಳುತ್ತಾರೆ.(ಇ-ಮೇಲ್ ಮತ್ತು ಪಾಸ್‌ವರ್ಡ್‌ಗಳ ಸಂಯೋಜನೆ). ಕೆಲವು ವ್ಯಕ್ತಿಗಳು ಒಂದೇ ಪಾಸ್‌ವರ್ಡ್ ಅನ್ನು ಹಲವು ಖಾತೆಗಳಿಗೆ ಬಳಸುತ್ತಾರೆ. ಇದು ಹ್ಯಾಕರ್‌ಗಳ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುತ್ತದೆ ಎಂದು ತನಿಖಾ ವರದಿ ತಿಳಿಸಿದೆ.

ಕೆಲವು ಕ್ರಿಮಿನಲ್‌ಗಳು ಮಾಹಿತಿ ಖರೀದಿಗಾರರಿಗೆ ‘ಜೀವಮಾನದ ಖಾತರಿ’ ಒದಗಿಸುತ್ತಾರೆ. ಅಂದರೆ ಗ್ರಾಹಕನ ಒಂದು ಖಾತೆ ಸ್ಥಗಿತಗೊಂಡರೆ, ಖರೀದಿಗಾರರು ಹೊಸ ಖಾತೆಯ ವಿವರವನ್ನು ಉಚಿತವಾಗಿ ಪಡೆಯುವ ಕೊಡುಗೆ ಇದು. ಈ ವಂಚನೆಯನ್ನು ತಡೆಯಲು ಸೈಬರ್ ಭದ್ರತೆ ಸಾಫ್ಟ್‌ವೇರ್‌ಗಳನ್ನು ಬಳಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬಹುದು. ಅಲ್ಲದೆ ಬಹಿರಂಗವಾಗಿ ಲಭ್ಯವಾಗುವ ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿಯನ್ನು ಒದಗಿಸದೆ ಎಚ್ಚರ ವಹಿಸಿದರೆ ಇಂತಹ ವಂಚನೆಗಳನ್ನು ತಡೆಯಬಹುದು ಎಂದು ವರದಿ ತಿಳಿಸಿದೆ.

ಡಾರ್ಕ್ ವೆಬ್ ಅಥವಾ ಡಾರ್ಕ್ ನೆಟ್

   ಡಾರ್ಕ್ ನೆಟ್ ಎಂದೂ ಕರೆಯಲಾಗುವ ಡಾರ್ಕ್ ವೆಬ್ ಎಂಬುದು ಇಂಟರ್‌ನೆಟ್ ಸೇವೆಯ ಗೂಢಲಿಪೀಕರಣ ಮಾಡುವ ವ್ಯವಸ್ಥೆಯಾಗಿದ್ದು, ಇದು ಸರ್ಚ್ ಎಂಜಿನ್‌ನ ವಿಷಯ ಸೂಚಿಯಲ್ಲಿ ಕಾಣುವುದಿಲ್ಲ. ಭದ್ರತೆಯ ಕುರಿತು ಬಳಕೆದಾರರ ಅಜಾಗರೂಕತೆಯಿಂದಾಗಿ ಅವರ ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತದೆ. ಈ ಮಾಹಿತಿಗೆ ಸೀಮಿತ ಮರುಮಾರಾಟ ಮೌಲ್ಯ ಇರಬಹುದು. ಆದರೆ ಈ ಮಾಹಿತಿಯನ್ನು ಬಳಸಿ ಹಲವು ಪ್ರಯೋಜನ ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News