ಬೇಲಿಯೇ ಹೊಲ ಮೇಯ್ದರೆ?

Update: 2018-12-18 04:27 GMT

 ದೇಶದ ಸದ್ಯದ ಹಿಂಸಾತ್ಮಕ ವಾತಾವರಣಗಳಿಗೆ ಯಾರನ್ನು ಹೊಣೆಯಾಗಿಸಬೇಕು? ಕೋಮು ದುಷ್ಕರ್ಮಿಗಳನ್ನೋ ಅಥವಾ ಇವರನ್ನು ಹದ್ದುಬಸ್ತಿನಲ್ಲಿಡಲು ವಿಫಲವಾಗುತ್ತಿರುವ ಪೊಲೀಸ್ ಇಲಾಖೆಯನ್ನೋ? ಈ ದೇಶದಲ್ಲಿ ನಡೆದಿರುವ ಕೋಮುಹತ್ಯಾಕಾಂಡಗಳನ್ನು ಗಮನಿಸಿದಾಗ, ಪೊಲೀಸ್ ವ್ಯವಸ್ಥೆ ಆ ಹತ್ಯಾಕಾಂಡಕ್ಕೆ ಸಹಕರಿಸಿರುವುದು ಗಮನಕ್ಕೆ ಬರುತ್ತದೆ. ಪೊಲೀಸ್ ವ್ಯವಸ್ಥೆಯ ಸಹಕಾರವಿಲ್ಲದೆ ಯಾವ ಗಲಭೆಗಳೂ ನಡೆಯಲಾರವು. ಬಹುಶಃ ರಾಜಕಾರಣ ಪೊಲೀಸ್ ಇಲಾಖೆಯನ್ನು ಹೈಜಾಕ್ ಮಾಡಿರುವುದೂ ಇದಕ್ಕೆ ಪರೋಕ್ಷ ಕಾರಣವಿರಬಹುದು. ಜೊತೆಗೆ ಪೊಲೀಸ್ ಇಲಾಖೆಯೊಳಗೇ ಕೋಮು ದುಷ್ಕರ್ಮಿಗಳು ಖಾಕಿ ದಿರಿಸು ಹಾಕಿ ನುಗ್ಗಿರುವುದು ಇನ್ನೊಂದು ಕಾರಣ. ಆದುದರಿಂದ ಮೊದಲು ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳುವ ವ್ಯಕ್ತಿಗಳನ್ನು ತಿದ್ದುವ ಕೆಲಸ ನಡೆಯಬೇಕಾಗಿದೆ. ಆ ಬಳಿಕವಷ್ಟೇ ನಾವು ಕೋಮುವೇಷದಲ್ಲಿ ಕ್ರಿಮಿನಲ್ ಕೃತ್ಯಗಳನ್ನು ಎಸಗುವ ಗೂಂಡಾಗಳಿಗೆ ಕಡಿವಾಣ ತೊಡಿಸಬೇಕು.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಐಪಿಎಸ್ ಅಧಿಕಾರಿಯಾಗಿರುವ ಭಾಗ್ಯಶ್ರೀ ನವ್‌ಟಾಕೆ ತಾವು ಹೇಗೆ ದಲಿತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ, ಮುಸ್ಲಿಮರಿಗೆ ಕಿರುಕುಳ ನೀಡಿ ಮರಾಠರನ್ನು ರಕ್ಷಿಸುತ್ತಿದ್ದೇನೆ ಎಂದು ಕೊಚ್ಚಿಕೊಳ್ಳುತ್ತಿದ್ದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಲ್ಲಿ ವಿಸ್ತೃತವಾಗಿ ಹಂಚಿಕೆಯಾಗಿ ವೈರಲ್ ಆಗಿಬಿಟ್ಟಿತು. ಇದನ್ನು ತನ್ನ ಸಾಧನೆಯೆಂಬಂತೆ ಆಕೆ ಆಡಿಕೊಂಡಿದ್ದಾರೆೆ. ತಕ್ಷಣವೇ ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಯಿತು. ಆಕೆಗೆ ಸರಕಾರ ನೀಡಿದ ಶಿಕ್ಷೆಯಾದರೂ ಏನು? ಬರೇ ವರ್ಗಾವಣೆ. ಅಪರಾಧಿಗಳ ಜೊತೆಗೆ ಶಾಮೀಲಾಗಿರುವುದನ್ನು ನೇರವಾಗಿ ಒಪ್ಪಿಕೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡುವುದರಿಂದ ಏನು ಬದಲಾವಣೆಯಾಯಿತು? ಒಂದು ಅಪರಾಧವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಮಾಡಿದಂತಾಯಿತು ಅಷ್ಟೇ. ಇದು ಸಾರ್ವಜನಿಕರ ಕಣ್ಣೊರೆಸುವ ತಂತ್ರವಲ್ಲದೆ ಇನ್ನೇನೂ ಅಲ್ಲ. ಕೆಲವು ತಿಂಗಳ ಬಳಿಕ ಆಕೆ ಮತ್ತೆ ಅದೇ ಸ್ಥಳಕ್ಕೆ ಸದ್ದುಗದಲವಿಲ್ಲದೆ ಆಕೆಯ ಮರು ನೇಮಕವಾಗುತ್ತದೆ. ಇಂದು ಕೋಮು ದುಷ್ಕರ್ಮಿಗಳು ಮತ್ತು ಪೊಲೀಸ್ ಇಲಾಖೆಯ ನಡುವೆ ಅನೈತಿಕ ಸಂಬಂಧಗಳು ಸೃಷ್ಟಿಯಾಗಿವೆೆ. ದೇಶಾದ್ಯಂತ ಗುಂಪು ಹತ್ಯೆಗಳು ಹೆಚ್ಚುತ್ತಿರುವುದು ಈ ಪೊಲೀಸರ ಪರೋಕ್ಷ ಬೆಂಬಲದಿಂದ. ಮೊದಲು ದುಷ್ಕರ್ಮಿಗಳು ಕೊಲೆಗಳನ್ನು ನಡೆಸುತ್ತಾರೆ. ಪೊಲೀಸರು ಅದನ್ನು ವೌನವಾಗಿ ವೀಕ್ಷಿಸುತ್ತಾರೆ. ಬಳಿಕ ಒತ್ತಡ ಬಂದಾಗ ದುರ್ಬಲ ಪ್ರಕರಣಗಳನ್ನು ದಾಖಲಿಸಿ ಪ್ರಮುಖ ಆರೋಪಿಗಳನ್ನು ರಕ್ಷಿಸುತ್ತಾರೆ. ಇದು ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಪೊಲೀಸ್ ಪಡೆಗಳೂ ಸಹ ಜಾತಿ, ಕೋಮುವಾದಗಳಿಂದ ಕೂಡಿದ ಆಳುವ ಸಿದ್ಧಾಂತಗಳಿಂದ ಪ್ರಭಾವಿತವಾಗುತ್ತಿರುವುದನ್ನು ಇದು ಹೇಳುತ್ತಿದೆ. ಇತ್ತೀಚಿನ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡೇ ಹೇಳುವುದಾದರೆ, 2006ರಲ್ಲಿನ ಖೈರ್ಲಾಂಜಿ ಹತ್ಯಾಕಾಂಡದಿಂದ ಹಿಡಿದು ಭೀಮಾ-ಕೋರೆಗಾಂವ್ ಹಿಂಸಾಚಾರದವರೆಗೆ ರಾಜ್ಯದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳ ಘಟನೆಗಳನ್ನು ಗಮನಿಸಿದರೆ ಪೊಲೀಸರ ದಲಿತ ವಿರೋಧಿ ಮನೋಭಾವ ಬೆಳಕಿಗೆ ಬರುತ್ತದೆ. ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯಲು ರಚಿತವಾದ 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಮರಾಠಾ ಸಮುದಾಯವು 2016ರಲ್ಲಿ ನಡೆಸಿದ ಮೂಕಮೋರ್ಚಾಗಳ ಸಂದರ್ಭದಲ್ಲಿ ದಲಿತ ಸಮುದಾಯದ ಮೇಲೆ ನಡೆಸಲಾದ ಹಿಂಸಾಚಾರ ಮತ್ತು ಆಸ್ತಿಪಾಸ್ತಿ ದಹನದಂಥ ದಾಳಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ನಿಷ್ಕ್ರಿಯರಾಗಿದ್ದ ಬಗ್ಗೆ ಹಲವಾರು ದೂರುಗಳು ಕೇಳಿಬಂದವಲ್ಲದೆ ಇದರ ಬಗ್ಗೆ ಬಾಂಬೆ ಹೈಕೋರ್ಟಿನಲ್ಲಿ ಒಂದು ಮೊಕದ್ದಮೆಯನ್ನೂ ಹೂಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಉತ್ತರಪ್ರದೇಶದ ಪೊಲೀಸರು ಆರೋಪಿಗಳು ಯಾವ ಧಾರ್ಮಿಕ ಸಮುದಾಯಕ್ಕೆ ಸೇರಿದವರೆಂಬುದನ್ನು ಆಧರಿಸಿ ಆಕ್ರಮಣಕಾರಿಯಾಗಿಯೂ ಇಲ್ಲವೇ ನಿಷ್ಕ್ರಿಯರಾಗಿಯೂ ಇರುವಷ್ಟು ಕುಖ್ಯಾತರಾಗಿಬಿಟ್ಟಿದ್ದಾರೆ. ಎನ್‌ಕೌಂಟರ್ ಹೆಸರಿನಲ್ಲಿ ಗುಂಡಿಟ್ಟು ಕೊಂದುಹಾಕುವುದು, ರೋಮಿಯೊ ಸ್ಕ್ವಾಡ್ ಹೆಸರಿನಲ್ಲಿ ಯುವ ಜೋಡಿಗಳನ್ನು ಅದರಲ್ಲೂ ನಿರ್ದಿಷ್ಟವಾಗಿ ಹಿಂದೂ-ಮುಸ್ಲಿಂ ಜೋಡಿಗಳನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುವುದು, ಲವ್ ಜಿಹಾದ್ ಬಗ್ಗೆ ನಂಜಿನ ಹಾಗೂ ದ್ವೇಷಪೂರಿತ ಪ್ರಚಾರ ನಡೆಸುತ್ತಿರುವುದು ಮತ್ತು ಹಸುಗಳ್ಳರೆಂಬ ನೆಪದಲ್ಲಿ ಆರೋಪಿತರನ್ನು ಗುಂಪುಗೂಡಿ ಕೊಂದುಹಾಕುತ್ತಿರುವುದೆಲ್ಲವೂ ಆ ರಾಜ್ಯದ ಪೊಲೀಸರು ಸಮಾಜದಲ್ಲಿನ ಪೂರ್ವಗ್ರಹ ಮತ್ತು ಪಕ್ಷಪಾತಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿರುವುದನ್ನು ಸಾಬೀತುಪಡಿಸುತ್ತದೆ. ವಾಸ್ತವವಾಗಿ, ಇತ್ತೀಚೆಗೆ ಲಕ್ನೌನಲ್ಲಿ ಕಾರ್ಪೊರೇಟ್ ಕಂಪೆನಿಯೊಂದರ ನಿರಾಯುಧ ಅಧಿಕಾರಿಯನ್ನು ವಿನಾಕಾರಣ ಕೊಂದಿದ್ದಕ್ಕೆ ತಮ್ಮ ಮೇಲೆ ಕ್ರಮತೆಗೆದುಕೊಂಡಿದ್ದನ್ನು ವಿರೋಧಿಸಿ ಪೊಲೀಸರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದರು. ದೆಹಲಿ ಹೈಕೋರ್ಟು ಇತ್ತೀಚೆಗೆ ಹಾಶಿಂಪುರ ಘಟನೆಯ ಬಗ್ಗೆ ನೀಡಿದ ತೀರ್ಮಾನಕ್ಕೂ ಈ ರಾಜ್ಯ ಸಾಕ್ಷಿಯಾಗಿದೆ. ಉತ್ತರಪ್ರದೇಶದ ಪ್ರಾಂತೀಯ ಸಶಸ್ತ್ರ ಪೊಲೀಸ್ ಪ್ಪಡೆಗೆ ಸೇರಿದ್ದ ಪೊಲೀಸರು ಉದ್ದೇಶಪೂರ್ವಕವಾಗಿ ಹಾಶಿಂಪುರದಲ್ಲಿ 42 ಮುಸ್ಲಿಮರನ್ನು ಕೊಂದು ದೇಹಗಳನ್ನು ಹತ್ತಿರದ ಕಾಲುವೆಗೆ ಎಸೆದಿದ್ದರು. ಈ ಪ್ರಕರಣದಲ್ಲಿ 31 ವರ್ಷಗಳ ನಂತರ ನ್ಯಾಯತೀರ್ಮಾನವನ್ನು ಕೋರ್ಟು ನೀಡಿತು ಹಾಗೂ ತನ್ನ ತೀರ್ಮಾನದಲ್ಲಿ ಅದು ಈ ಹತ್ಯಾಕಾಂಡವು ಕಾನೂನನ್ನು ಜಾರಿಗೊಳಿಸಬೇಕಾದ ಸಂಸ್ಥೆಯಲ್ಲಿ ಬೇರುಬಿಟ್ಟಿರುವ ಸಾಂಸ್ಥಿಕ ಪೂರ್ವಗ್ರಹಗಳನ್ನು ಬಯಲು ಮಾಡಿದೆ ಎಂದು ಹೇಳಿದೆ. ಪೊಲೀಸ್ ಸುಧಾರಣೆಗಳ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದರೂ ಯಾವ ರಾಜ್ಯ ಸರಕಾರಗಳೂ ಅದನ್ನು ಅನುಷ್ಠಾನಕ್ಕೆ ತರುವ ಕಾಳಜಿಯನ್ನು ವಹಿಸಿಲ್ಲ. 1978ರ ರಾಷ್ಟ್ರೀಯ ಪೊಲೀಸ್ ಸಮಿತಿಯಿಂದ ಮೊದಲುಗೊಂಡು, ಉತ್ತರಪ್ರದೇಶದ ಮಾಜಿ ಪೊಲೀಸ್ ಮಹಾ ನಿರ್ದೇಶಕರು 1995ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಅದರ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ), 1998ರ ಜೂಲಿಯಸ್ ರಿಬೇರೊ ಸಮಿತಿ, ತದನಂತರದ ಪದ್ಮನಾಭಯ್ಯ, ಮಳೀಮಠ್ ಮತ್ತು ಸೋಲಿ ಸೊರಾಬ್ಜಿ ಸಮಿತಿಗಳು ಈ ಬಗ್ಗೆ ಸಾಕಷ್ಟು ಸಲಹೆಗಳನ್ನು ಕೊಟ್ಟಿವೆ. 2006ರಲ್ಲಿ ಸುಪ್ರೀಂಕೋರ್ಟು ಈ ಬಗ್ಗೆ ಆರು ನಿರ್ದೇಶನಗಳನ್ನು ನೀಡಿತ್ತು. ಅದರಲ್ಲಿ ನಾಲ್ಕನೆಯ ನಿರ್ಣಯವು: ಭಾರತದಂಥ ಬಹುತ್ವವುಳ್ಳ ಸಮಾಜದಲ್ಲಿ ತಮ್ಮ ಕೆಲಸ ಮಾಡಬೇಕಾದರೆ ಅನುಸರಿಸಬೇಕಾದ ಪ್ರಜಾತಾಂತ್ರಿಕ ಸೂತ್ರಗಳ ಬಗ್ಗೆ ಪೊಲೀಸರನ್ನು ಸಂವೇದನಾಶೀಲರನ್ನಾಗಿಸುವ ರೀತಿಯಲ್ಲಿ ತರಬೇತಿಯು ವಿನ್ಯಾಸಗೊಳ್ಳಬೇಕು ಎಂದು ನಿರ್ದೇಶಿಸುತ್ತದೆ. ದೇಶದಲ್ಲಿ ಸಮಾಜದ ದುರ್ಬಲ ಸಮುದಾಯಗಳ ಮೇಲೆ ನಡೆದ ಮತ್ತು ನಡೆಯುತ್ತಿರುವ ಹಲವಾರು ಪೊಲೀಸ್ ತಾರತಮ್ಯದ ಪ್ರಕರಣದಲ್ಲಿ ಭಾಗಿಗಳಾಗಿರುವ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯ ವಿಷಯದಲ್ಲಿ ಈ ತರಬೇತಿಯು ವಿಫಲವಾಗಿರುವುದು ಸ್ಪಷ್ಟವಾಗಿದೆ. ಮಹಾರಾಷ್ಟ್ರವನ್ನೂ ಒಳಗೊಂಡಂತೆ ಹಲವಾರು ರಾಜ್ಯಗಳು ಜಾರಿಗೆ ತಂದಿರುವ ಮಾದರಿ ಪೊಲೀಸ್ ಕಾಯ್ದೆಯಿಂದ ಅಲ್ಪಸ್ವಲ್ಪ ಸುಧಾರಣೆಯಾಗಿದೆ. ಆದರೆ ಸಮಗ್ರ ಸುಧಾರಣೆಯ ಭಾಗವಾಗದ ಬಿಡಿಬಿಡಿ ಮತ್ತು ಪ್ರತ್ಯೇಕವಾದ ಕ್ರಮಗಳಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಒಟ್ಟಾರೆ ಸಮಾಜದಲ್ಲಿರುವ ಪೂರ್ವಗ್ರಹಗಳು ಮತ್ತು ಪಕ್ಷಪಾತಗಳು ನಿವಾರಣೆಯಾಗಲು ತುಂಬಾ ಸಮಯ ಬೇಕಾಗುತ್ತದೆ. ಆದರೆ ಅಂತಹ ಸಾಮಾಜಿಕ ಪಕ್ಷಪಾತದ ವಿರುದ್ಧ ಪೊಲೀಸರಿಗೆ ತರಬೇತಿ ನೀಡಬೇಕಿರುವುದು ಹಿಂದೆಂದಿಗಿಂತಲೂ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News