ಸ್ವಚ್ಛ ಭಾರತ ಉಪತೆರಿಗೆ ರದ್ದಾದರೂ ತೆರಿಗೆದಾರರಿಂದ ವಸೂಲಿ ನಿಲ್ಲಿಸದ ಸರಕಾರ!

Update: 2018-12-18 16:35 GMT

ಹೊಸದಿಲ್ಲಿ,ಡಿ.18: ಸ್ವಚ್ಛ ಭಾರತ ಸೆಸ್ ಅಥವಾ ಉಪತೆರಿಗೆಯನ್ನು ರದ್ದುಗೊಳಿಸಿದ ಬಳಿಕವೂ ಸರಕಾರವು ತೆರಿಗೆದಾರರಿಂದ ಅದನ್ನು ಸಂಗ್ರಹಿಸಿದೆ. ಸುದ್ದಿ ಜಾಲತಾಣ ‘ದಿ ವೈರ್’ ಸಲ್ಲಿಸಿದ್ದ ಆರ್‌ಟಿಐ ಅರ್ಜಿ ಈ ವಿಷಯವನ್ನು ಬೆಳಕಿಗೆ ತಂದಿದೆ.

ಜಿಎಸ್‌ಟಿ ಜಾರಿಯ ಅಂಗವಾಗಿ ವಿತ್ತ ಸಚಿವಾಲಯವು ವಿವಿಧ ಇತರ ತೆರಿಗೆಗಳು ಮತ್ತು ಉಪತೆರಿಗೆಗಳನ್ನು ತೆಗೆದುಹಾಕಿತ್ತು. ಅದರಂತೆ ಸ್ವಚ್ಛ ಭಾರತ ಉಪತೆರಿಗೆಯನ್ನು 2017,ಜು.1ರಿಂದ ರದ್ದುಗೊಳಿಸಲಾಗಿತ್ತು. ಆದರೆ ಆ ಬಳಿಕವೂ ಈ ಉಪತೆರಿಗೆಯನ್ನು ಸಂಗ್ರಹಿಸಿದ್ದನ್ನು ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ವಿತ್ತ ಸಚಿವಾಲಯವು ಬಹಿರಂಗಗೊಳಿಸಿದೆ.

2015ರಲ್ಲಿ ಮೊದಲ ಬಾರಿಗೆ ಎಲ್ಲ ಸೇವೆಗಳ ಮೇಲೆ ಶೇ.0.5ರಷ್ಟು ಸ್ವಚ್ಛ ಭಾರತ ಉಪತೆರಿಗೆಯನ್ನು ಜಾರಿಗೊಳಿಸಲಾಗಿತ್ತು. ಹಣಕಾಸು ಕಾಯ್ದೆ 2015ರ ಕಲಂ 119ರಂತೆ ಸ್ವಚ್ಛ ಭಾರತ ಅಭಿಯಾನಕ್ಕೆ ಹಣವನ್ನೊದಗಿಸಲು ಮತ್ತು ಅದನ್ನು ಉತ್ತೇಜಿಸಲು ಈ ಉಪತೆರಿಗೆಯನ್ನು ವಿಧಿಸಲಾಗಿತ್ತು.

ವಿತ್ತ ಸಚಿವಾಲಯದ ಕಂದಾಯ ಇಲಾಖೆಯು ತಿಳಿಸಿರುವಂತೆ 2017 ಮತ್ತು 2018,ಸೆ.30ರ ನಡುವಿನ ಅವಧಿಯಲ್ಲಿ 4,391.47 ಕೋ.ರೂ.ಸ್ವಚ್ಛ ಭಾರತ ಉಪತೆರಿಗೆಯನ್ನು ಸಂಗ್ರಹಿಸಲಾಗಿದೆ.

ಸ್ವಚ್ಛ ಭಾರತ ಮತ್ತು ಕೃಷಿ ಕಲ್ಯಾಣ ಉಪತೆರಿಗೆಗಳನ್ನು 2017,ಜು.1ರಿಂದ ರದ್ದುಗೊಳಿಸಲಾಗಿದೆ ಎಂದು ಸಹಾಯಕ ವಿತ್ತ ಸಚಿವ ಶಿವಪ್ರತಾಪ ಶುಕ್ಲಾ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಿಳಿಸಿದ್ದರು. ಜಿಎಸ್‌ಟಿಯ ಸುಗಮ ಅನುಷ್ಠಾನಕ್ಕಾಗಿ 2017,ಜು.1ರಿಂದ ವಿವಿಧ ತೆರಿಗೆಗಳೊಂದಿಗೆ ಸ್ವಚ್ಛ ಭಾರತ ಉಪತೆರಿಗೆಯನ್ನೂ ರದ್ದುಗೊಳಿಸಲಾಗುವುದು ಎಂದು ವಿತ್ತ ಸಚಿವಾಲಯದ 2017,ಜೂನ್ 7ರ ಪತ್ರಿಕಾ ಹೇಳಿಕೆಯೂ ತಿಳಿಸಿತ್ತು.

ಆರ್‌ಟಿಐ ಅರ್ಜಿಗೆ ಲಭಿಸಿರುವ ಉತ್ತರದಲ್ಲಿ ನೀಡಲಾಗಿರುವ ಮಾಹಿತಿಗಳಂತೆ 2015 ಮತ್ತು 2018,ಸೆ.30ರ ನಡುವಿನ ಅವಧಿಯಲ್ಲಿ ಒಟ್ಟು 20,600 ಕೋ.ರೂ.ಸ್ವಚ್ಛ ಭಾರತ ಉಪತೆರಿಗೆಯನ್ನು ಸಂಗ್ರಹಿಸಲಾಗಿದೆ.

ಸ್ವಚ್ಛ ಭಾರತ ಉಪತೆರಿಗೆಯ ರೂಪದಲ್ಲಿ ಸಂಗ್ರಹಿತ ಹಣವನ್ನು ಸ್ವಚ್ಛ ಭಾರತ ಅಭಿಯಾನ(ಗ್ರಾಮೀಣ)ದಡಿ ಶೌಚಾಲಯಗಳು,ಸಮುದಾಯ ನೈರ್ಮಲ್ಯ ಸಂಕೀರ್ಣಗಳು,ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣ ಹಾಗೂ ಶಿಕ್ಷಣ,ಸಂವಹನ ಮತ್ತು ಆಡಳಿತಾತ್ಮಕ ವೆಚ್ಚಗಳಿಗಾಗಿ ಬಳಸಲಾಗುತ್ತಿದೆ ಎಂದು ಸರಕಾರವು ಹೇಳಿದೆ.

ಈ ಕಾರ್ಯಕ್ರಮಗಳು ಮತ್ತು ಯೋಜನೆಗಳ ಅನುಷ್ಠಾನ ಹಾಗೂ ಯಶಸ್ವಿ ಕಾಮಗಾರಿಯ ಪುರಾವೆ ಸಲ್ಲಿಕೆ ರಾಜ್ಯ ಸರಕಾರಗಳ ಹೊಣೆಗಾರಿಕೆಯಾಗಿದೆ.

ಖರ್ಚಿನ ವಿವರ ನೀಡದ ಸರಕಾರ

ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ಸ್ವಚ್ಛ ಭಾರತ ಉಪತೆರಿಗೆಯ ರೂಪದಲ್ಲಿ ಸಂಗ್ರಹಿಸಲಾದ ಹಣವನ್ನು ಯಾವುದಕ್ಕೆ ಮತ್ತು ಹೇಗೆ ವೆಚ್ಚ ಮಾಡಲಾಗಿದೆ ಎಂಬ ವಿವರಗಳನ್ನು ಬಹಿರಂಗಗೊಳಿಸಿಲ್ಲ.

ಈ ಬಗ್ಗೆ ಪ್ರಶ್ನೆಗೆ ಉತ್ತರಿಸಿರುವ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು,ಸಚಿವಾಲಯಕ್ಕೆ ಎಷ್ಟು ಹಣವನ್ನು ಬಿಡುಗಡೆಗೊಳಿಸಲಾಗಿತ್ತು ಮತ್ತು ಎಷ್ಟು ಹಣವನ್ನು ವೆಚ್ಚ ಮಾಡಲಾಗಿತ್ತು ಎಂಬ ಮಾಹಿತಿಯನ್ನಷ್ಟೇ ಒದಗಿಸಿದೆ.

2015-16ರಿಂದ 2017-18ರವರೆಗೆ ಒಟ್ಟು 16,300 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗಿತ್ತು ಮತ್ತು ಅಷ್ಟೂ ಹಣವನ್ನು ಖರ್ಚು ಮಾಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ. ಆದರೆ ಯಾವ ಕಾರ್ಯಕ್ರಮಗಳು ಅಥವಾ ಉಪಕ್ರಮಗಳಿಗಾಗಿ ಈ ಹಣವನ್ನು ವೆಚ್ಚ ಮಾಡಲಾಗಿದೆ ಎಂಬ ಬಗ್ಗೆ ಸಚಿವಾಲಯವು ಚಕಾರವೆತ್ತಿಲ್ಲ.

 ಕಾನೂನಿನಂತೆ ಸ್ವಚ್ಛ ಭಾರತ ಉಪತೆರಿಗೆಯಡಿ ಸಂಗ್ರಹಿಸಲಾದ ಹಣವನ್ನು ಭಾರತದ ಸಂಚಿತ ನಿಧಿ(ಸಿಎಫ್‌ಐ)ಗೆ ಜಮೆ ಮಾಡಬೇಕು ಮತ್ತು ಸಿಎಫ್‌ಐನಿಂದ ಹಣವು ಸ್ವಚ್ಛ ಭಾರತ ಕೋಶ್‌ಗೆ ವರ್ಗಾವಣೆಗೊಳ್ಳಬೇಕು. ಅಲ್ಲಿಂದ ಈ ಹಣವು ಸ್ವಚ್ಛ ಭಾರತ ಅಭಿಯಾನದ ವಿವಿಧ ಕಾರ್ಯಕ್ರಮಗಳು ಮತ್ತು ಉಪಕ್ರಮಗಳಿಗೆ ಹಂಚಿಕೆಯಾಗುತ್ತದೆ.

ಸಂಗ್ರಹಿಸಲಾದ ಸ್ವಚ್ಛ ಭಾರತ ಉಪತೆರಿಗೆ ಮೊತ್ತದ ನಾಲ್ಕನೇ ಒಂದು ಭಾಗವನ್ನು ತನಗಿನ್ನೂ ಬಿಡುಗಡೆಗೊಳಿಸಲಾಗಿಲ್ಲ ಎಂದು ನೈರ್ಮಲ್ಯ ಸಚಿವಾಲಯವು ನೀಡಿರುವ ಮಾಹಿತಿಯು ತಿಳಿಸಿದೆ. ಒಟ್ಟು ಸಂಗ್ರಹಿತ 20,600 ಕೋ.ರೂ.ಗಳ ಪೈಕಿ ಕೇವಲ 16,300 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗಿದ್ದು,4,300 ಕೋ.ರೂ.ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅಂದರೆ ಈ ಹಣ ಇನ್ನೂ ವೆಚ್ಚವಾಗಿಲ್ಲ. 4,300 ಕೋ.ರೂ.ಗಳ ಬಿಡುಗಡೆ ಬಾಕಿಯಿದೆ ಎನ್ನುವುದನ್ನು 2017ರ ಸಿಎಜಿ ವರದಿಯೂ ದೃಢಪಡಿಸಿದೆ.

ವರದಿಯ ಪ್ರಕಟಣೆಯ ದಿನಾಂಕಕ್ಕೆ ಇದ್ದಂತೆ ಒಟ್ಟು 16,401 ಕೋ.ರೂ.ಸಂಗ್ರಹವಾಗಿದ್ದು,ಈ ಪೈಕಿ 12,400 ಕೋ.ರೂ.ಗಳನ್ನು(ಶೇ.75) ಮಾತ್ರ ರಾಷ್ಟ್ರೀಯ ಭದ್ರತಾ ನಿಧಿಗೆ ಜಮಾ ಮಾಡಲಾಗಿದೆ ಮತ್ತು ಬಳಕೆಯಾಗಿದೆ ಎಂದು ಸಿಎಜಿ ತಿಳಿಸಿದೆ.

ಉಳಿದ 4,000 ಕೋ.ರೂ.ಇನ್ನೂ ಈ ನಿಧಿಗೆ ಸೇರಿಲ್ಲ. ದಿ ವೈರ್ ಇದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳ ಯಾದಿಯನ್ನು ವಿತ್ತ ಸಚಿವಾಲಯಕ್ಕೆ ಸಲ್ಲಿಸಿದ್ದರೂ ಅದು ಇನ್ನೂ ಉತ್ತರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News