285 ಕೋಟಿ ರೂ. ಮೌಲ್ಯದ ಆಸ್ತಿಗಾಗಿ ಮೃತ ತಾಯಿ ಬದುಕಿದ್ದಾಳೆಂದು ದಾಖಲೆ ಸಿದ್ಧಪಡಿಸಿದ ಪುತ್ರ

Update: 2018-12-19 10:55 GMT

ನೋಯ್ಡಾ, ಡಿ.19: ತಾಯಿ ಸತ್ತಿದ್ದರೂ ಆಕೆ ಜೀವಂತವಾಗಿದ್ದಾಳೆಂದು ಸಾಬೀತುಪಡಿಸುವ ದಾಖಲೆಗಳನ್ನು ಸಿದ್ಧಪಡಿಸಿ 285 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಲಪಟಾಯಿಸುವ ಸಂಚು ಹೂಡಿದ್ದ ಮುಂಬೈ ಮೂಲದ ವ್ಯಕ್ತಿ, ಆತನ ಪತ್ನಿ ಮತ್ತು ಪುತ್ರನನ್ನು ನೊಯ್ಡಾ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ.

ಆರೋಪಿಗಳನ್ನು ಸುನಿಲ್ ಗುಪ್ತಾ, ಆತನ  ಪತ್ನಿ ರಾಧಾ ಹಾಗೂ ಪುತ್ರ ಅಭಿಷೇಕ್ ಎಂದು ಗುರುತಿಸಲಾಗಿದೆ. ಮುಂಬೈಯ ಪೊವಲ್ ಪ್ರದೇಶದಲ್ಲಿನ ಹಿರಾನಂದಾನಿ ಗಾರ್ಡನ್ಸ್ ನಲ್ಲಿನ ಮನೆಯಿಂದ ಅವರನ್ನು ಬಂಧಿಸಿ ನಂತರ ನೊಯ್ಡಾದ ನ್ಯಾಯಾಲಯದೆದುರು ಹಾಜರು ಪಡಿಸಲಾಗಿದೆ.

ಆರೋಪಿಯ  ಹಿರಿಯ ಸಹೋದರ ವಿಜಯ್ ಗುಪ್ತಾ ಜಿಲ್ಲಾ ನ್ಯಾಯಾಲಯದ ಮೊರೆ ಹೋದ ನಂತರ ಕೋರ್ಟ್ ಆದೇಶದ ಮೇರೆಗೆ ನೋಯ್ಡಾದ ಪೊಲೀಸರು ಈ ಬಂಧನ ನಡೆಸಿದ್ದಾರೆ. ಸುನಿಲ್ ಗುಪ್ತಾನ ತಾಯಿ ಕಮಲೇಶ್ ರಾಣಿ ಮಾರ್ಚ್ 7, 2011ರಂದು ನಿಧನ ಹೊಂದಿದ್ದರು. ಅವರ ಹೆಸರಿನಲ್ಲಿ ಮುಂಬೈಯಲ್ಲಿ ಕ್ಯಾಂಡಲ್ ಫ್ಯಾಕ್ಟರಿ, ನೊಯ್ಡಾದಲ್ಲಿ ಅದರ ಕಚೇರಿ ಸಹಿತ ರೂ 285 ಕೋಟಿ ಮೌಲ್ಯದ ಆಸ್ತಿಯಿತ್ತೆನ್ನಲಾಗಿದೆ. ಆಕೆ ತನ್ನ ವೀಲುನಾಮೆಯಲ್ಲಿ ತನ್ನ ಆಸ್ತಿಯನ್ನು ತನ್ನಿಬ್ಬರು ಪುತ್ರರ ನಡುವೆ ಹಂಚಿಕೆಯಾಗಬೇಕೆಂದು ಬರೆದಿದ್ದರೆನ್ನಲಾಗಿದೆ. ಆಕೆಯ ಸಾವಿನ ನಂತರ  ಆಕೆ  ಬದುಕಿದ್ದಾಳೆನ್ನುವ ದಾಖಲೆ ಸಿದ್ಧಪಡಿಸಿ ಕಂಪೆನಿಯನ್ನು ವಂಚನೆಯಿಂದ ತನ್ನ ಹಾಗೂ ತನ್ನ ಕುಟುಂಬದ ಹೆಸರಿಗೆ  ವರ್ಗಾಯಿಸಿ  ವಿಜಯ್ ಗುಪ್ತಾಗೆ ಆತ ನಷ್ಟವುಂಟು ಮಾಡಿದ್ದಾನೆಂದು ದೂರು ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ಮೃತ ಪಟ್ಟ ಕೆಲವೇ ದಿನಗಳಲ್ಲಿ ಸುನಿಲ್ ಕಂಪೆನಿ ಮುಖಾಂತರ 29 ಕೋಟಿ ರೂ. ಮೌಲ್ಯದ ವಹಿವಾಟನ್ನು ತನ್ನನ್ನು  ಸಂಪರ್ಕಿಸದೆಯೇ ನಡೆಸಿದ್ದನೆಂದೂ ವಿಜಯ್ ಗುಪ್ತಾ ಆರೋಪಿಸಿದ್ದರು. ಸುನಿಲ್ ವಂಚನೆಯನ್ನು ವಿರೋಧಿಸಿದ್ದಕ್ಕಾಗಿ ಮೂವರು ಆಗಂತುಕರು ತನ್ನ ಮೇಲೆ ಹಲ್ಲೆಗೈದು ಕೊಲೆ ಬೆದರಿಕೆಯೊಡ್ಡಿದ್ದರು  ಎಂದೂ ಆತ ತಮ್ಮ ದೂರಿನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News