ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಜಾರಿಗೆ ವಿರೋಧ

Update: 2018-12-19 15:03 GMT

#ಸಾಹಿತಿ ಮತ್ತು ಹೋರಾಟಗಾರರ ಸಭೆಯಲ್ಲಿ ನಿರ್ಧಾರ

ಬೆಂಗಳೂರು, ಡಿ.19: ರಾಜ್ಯಾದ್ಯಂತ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಎಲ್ಲ ಸರಕಾರಿ ಶಾಲೆಗಳಲ್ಲಿ 1 ನೆ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸಲು ಮುಂದಾಗಿರುವ ಸರಕಾರದ ಕ್ರಮವನ್ನು ಹಿರಿಯ ಸಾಹಿತಿಗಳು ಹಾಗೂ ಹೋರಾಟಗಾರರ ವಿರೋಧಿಸಿದ್ದಾರೆ.

ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್, ಸಾಹಿತಿ ಡಾ. ಎಸ್.ಎಲ್.ಭೈರಪ್ಪ, ಡಾ. ಚಂದ್ರಶೇಖರ ಕಂಬಾರ, ಕವಿಗಳಾದ ಡಾ.ಸಿದ್ದಲಿಂಗಯ್ಯ, ಕೆ.ವಿ. ನಾರಾಯಣ, ಡಾ. ಕಾಳೇಗೌಡ ನಾಗವಾರ, ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್, ಬಿ.ಟಿ. ಲಲಿತಾ ನಾಯಕ್, ಕನ್ನಡಪರ ಹೋರಾಟಗಾರ ಟಿ.ಎ. ನಾರಾಯಣಗೌಡ ಸೇರಿದಂತೆ ಹಲವು ಸಾಹಿತಿಗಳು ಮತ್ತು ಹೋರಾಟಗಾರರು ಒಕ್ಕೊರಲಿನಿಂದ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.

ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಸಭೆ ನಡೆಸಿ ಕನ್ನಡಕ್ಕೆ ಮಾರಕವಾಗಿರುವ ಪ್ರಾಥಮಿಕ ಹಂತದಿಂದಲೇ ಆಂಗ್ಲ ಮಾಧ್ಯಮ ಶಾಲೆ ತೆರೆಯುವ ಸಮ್ಮಿಶ್ರ ಸರಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಗೋಕಾಕ್ ಮಾದರಿಯಲ್ಲಿ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಸಾಪ ಅಧ್ಯಕ್ಷ ಡಾ. ಮನುಬಳಿಗಾರ್, ‘ಮುಂದಿನ ವರ್ಷದಿಂದ ಪ್ರಾಥಮಿಕ ಹಂತದಿಂದಲೇ ಸಾವಿರ ಆಂಗ್ಲ ಮಾಧ್ಯಮ ಶಾಲೆ ತೆರೆಯುವ ಸರಕಾರದ ನಿಲುವಿಗೆ ನಮ್ಮ ವಿರೋಧವಿದೆ. ಈ ಕುರಿತು ಸಾಹಿತಿಗಳು ಇಂದು ಸಭೆ ನಡೆಸಿದ್ದು, ಮೂರು ನಿರ್ಣಯಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಸರಕಾರ ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭ ಮಾಡಬಾರದು. ಒಂದು ವಿಷಯವಾಗಿ ಕನ್ನಡ ಮಾಧ್ಯಮದಿಂದಲೇ ಇಂಗ್ಲಿಷ್ ಕಲಿಸಬಹುದು. ಅಂತೆಯೇ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲೂ ಕೂಡ ಕನ್ನಡವನ್ನು ಒಂದು ವಿಷಯವಾಗಿ ಕಲಿಸಬೇಕು. ಹಿಂದಿನ ಸರಕಾರ ನೀಡಿದ್ದ ಭರವಸೆಯಂತೆ ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸಲು ಮೈತ್ರಿ ಸರಕಾರ ಬದ್ಧವಾಗಿರಬೇಕು ಎಂಬ ನಿರ್ಣಯ ಕೈಗೊಂಡಿದ್ದೇವೆ ಎಂದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯನ್ನು ಸಾಹಿತಿ, ಹೋರಾಟಗಾರರ ನಿಯೋಗದೊಂದಿಗೆ ಭೇಟಿಯಾಗಿ ಪ್ರಸ್ತುತ ಕೈಗೊಂಡ ನಿರ್ಣಯಗಳ ಜಾರಿಗೆ ಆಗ್ರಹಿಸಬೇಕೆಂದು ತೀರ್ಮಾನಿಸಿರುವುದಾಗಿ ಹೇಳಿದರು.

ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್‌ಪಾಟೀಲ್ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡೇ ಮುಂದಿನ ಶೈಕ್ಷಣಿಕ ವರ್ಷದಿಂದ ಸಾವಿರ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುವ ಮಾತು ಹೇಳಿದ್ದಾರೆ. ಬಹುಶಃ ಬೆಳಗಾವಿ ಅಧಿವೇಶನದಲ್ಲೇ ಅದನ್ನು ಕಾಯ್ದೆಯಾಗಿ ಜಾರಿ ತಂದರೂ ಆಶ್ಚರ್ಯವಿಲ್ಲ. ಸರಕಾರದ ಈ ನಿರ್ಧಾರಕ್ಕೆ ಹೋರಾಟ ಪ್ರಾರಂಭ ಮಾಡುವುದು ಅನಿವಾರ್ಯ. ಅದಕ್ಕೆ ಮುಖ್ಯಮಂತ್ರಿಗಳೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.

ಕವಿ ಸಿದ್ದಲಿಂಗಯ್ಯ ಮಾತನಾಡಿ, ಸರಕಾರ ಶಿಕ್ಷಣ ಮಾಧ್ಯಮದ ಕುರಿತು ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿದೆ. ಶಿಕ್ಷಣ ಮಾಧ್ಯಮವನ್ನೇ ಇಂಗ್ಲಿಷ್ ಮಾಡುತ್ತೇನೆ ಎನ್ನುತ್ತಿರುವ ಸರಕಾರಕ್ಕೆ ಶೈಕ್ಷಣಿಕ ಪರಿಜ್ಞಾನ ಇಲ್ಲದಿರುವುದು ಕಾರಣ. ಈ ನಿಲುವಿನಿಂದ ಸರಕಾರ ಹಿಂದೆ ಸರಿಯದಿದ್ದರೆ ದೊಡ್ಡ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ, ಚಿಂತಕ ಕಾಳೇಗೌಡ ನಾಗವಾರ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News