ಬುಲಂದ್ ಶಹರ್ ಹಿಂಸಾಚಾರ: ಆದಿತ್ಯನಾಥ್ ರಾಜೀನಾಮೆಗೆ 80 ನಿವೃತ್ತ ಅಧಿಕಾರಿಗಳ ಬಹಿರಂಗ ಪತ್ರ

Update: 2018-12-19 16:51 GMT

ಹೊಸದಿಲ್ಲಿ,ಡಿ.19: ಎರಡು ವಾರಗಳ ಹಿಂದೆ ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಗುಂಪು ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಹತ್ಯೆಯ ಕುರಿತು 80ಕ್ಕೂ ಅಧಿಕ ನಿವೃತ್ತ ನಾಗರಿಕ ಸೇವೆಗಳ ಅಧಿಕಾರಿಗಳು ಕಟುವಾದ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ಮಾಜಿ ವಿದೇಶಾಂಗ ಕಾರ್ಯದರ್ಶಿಗಳಾದ ಶ್ಯಾಮ ಸರನ್ ಮತ್ತು ಸುಜಾತಾ ಸಿಂಗ್,ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಸೇರಿದಂತೆ ನಿವೃತ್ತ ಐಎಎಸ್,ಐಎಫ್‌ಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸಹಿ ಹಾಕಿರುವ ಈ ಪತ್ರವು ‘ತನ್ನ ಮತಾಂಧತೆಯನ್ನು ಬಹಿರಂಗವಾಗಿ ಸಾರುತ್ತಿರುವ ’ ಮುಖ್ಯಮಂತ್ರಿ ಆದಿತ್ಯನಾಥ್ ಅವರ ರಾಜೀನಾಮೆಗೆ ಆಗ್ರಹಿಸಿದೆ.

ಬುಲಂದಶಹರ್‌ನಲ್ಲಿ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆಗೆ ಕಾರಣಾದ ಗುಂಪು ಹಿಂಸಾಚಾರವು ಇತ್ತೀಚಿನ ದಿನಗಳಲ್ಲಿ ದ್ವೇಷ ರಾಜಕೀಯವು ಸಾಗುತ್ತಿರುವ ದಿಕ್ಕಿನಲ್ಲಿ ಇನ್ನೊಂದು ಅತ್ಯಂತ ಅಪಾಯಕಾರಿ ತಿರುವನ್ನು ಸೂಚಿಸುತ್ತಿದೆ ಎಂದು ಈ ಮಾಜಿ ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.ರಾಜ್ಯ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಅವರು, ಉತ್ತರ ಪ್ರದೇಶದಲ್ಲಿ ಆಡಳಿತದ ಮೂಲಭೂತ ತತ್ವಗಳು,ಸಾಂವಿಧಾನಿಕ ನೀತಿಗಳು ಮತ್ತು ಮಾನವೀಯ ಸಾಮಾಜಿಕ ನಡವಳಿಕೆಗಳು ಅಡ್ಡದಾರಿ ಹಿಡಿದಿವೆ. ಮುಖ್ಯಮಂತ್ರಿಗಳು ಮತಾಂಧತೆ ಕಾರ್ಯಸೂಚಿಯ ಮುಖ್ಯಸ್ಥರಂತೆ ವರ್ತಿಸುತ್ತಿದ್ದಾರೆ. ಗೂಂಡಾಗಿರಿ ಮತ್ತು ಕೊಲೆಗಡುಕತನ ಆಡಳಿತದ ಮುಖ್ಯವಾಹಿನಿಯಲ್ಲಿ ಸೇರಿಕೊಂಡಿವೆ. ಸುಬೋಧ್ ಕುಮಾರ ಹತ್ಯೆಯು ಬಹುಸಂಖ್ಯಾತರ ತೋಳ್ಬಲವನ್ನು ಪ್ರದರ್ಶಿಸುವ ಮತ್ತು ಪ್ರದೇಶದಲ್ಲಿಯ ಮುಸ್ಲಿಂ ಸಮುದಾಯಗಳಿಗೆ ಸಂದೇಶವನ್ನು ರವಾನಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿತ್ತು ಎಂದು ಝಾಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News