ಟ್ರಿಲ್ಲರ್ ಕಂಪನಿಯೊಂದಿಗೆ ಜಿಕೆವಿಕೆ ಒಪ್ಪಂದ: ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್

Update: 2018-12-19 18:48 GMT

ಬೆಂಗಳೂರು, ಡಿ.19: ರೈತರು, ಕೃಷಿ ವಿದ್ಯಾರ್ಥಿಗಳು ಹಾಗೂ ತಂತ್ರಜ್ಞರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಚನಾತ್ಮಕ ತರಬೇತಿ ನೀಡಲು ಹಾಗೂ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಸಲುವಾಗಿ ವಿಎಸ್‌ಟಿ ಟ್ರಿಲ್ಲರ್ ಮತ್ತು ಟ್ರಾಕ್ಟರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

ಬುಧವಾರ ನಗರದ ಜಿಕೆವಿಕೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಯಾಂತ್ರೀಕರಣ ಕೌಶಲ್ಯ ಅಭಿವೃದ್ಧಿ ಉತ್ಕೃಷ್ಠತಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರಕ್ಕೆ ಅಗತ್ಯವಾದ ಟ್ರಿಲ್ಲರ್, ಟ್ರಾಕ್ಟರ್, ಕೊಯ್ಲು, ನಾಟಿ ಯಂತ್ರಗಳು ಸೇರಿ ಇನ್ನಿತರ ಸಲಕರಣೆಗಳನ್ನೊಳಗೊಂಡ ಕೌಶಲ್ಯ ಉತ್ಕೃಷ್ಠತಾ ಕೇಂದ್ರ ತೆರೆಯಲಾಗಿದೆ ಎಂದರು.

ಅತ್ಯಾಧುನಿಕ ಕೃಷಿ ಸಲಕರಣೆಗಳು ಹಾಗೂ ತಂತ್ರಜ್ಞಾನ ಬಳಸಿಕೊಂಡು ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಉತ್ಪಾದನೆ ಮಾಡಿ ಲಾಭ ಪಡೆಯಬಹುದಾಗಿದೆ. ಟ್ರಿಲ್ಲರ್, ಟಾಕ್ಟರ್ ಸೇರಿದಂತೆ ಬೀಜ ಬಿತ್ತನೆ, ಸಸಿ ನಾಟಿ, ಔಷಧ ಸಿಂಪಡಣೆ, ಸಲಕರಣೆಗಳು ಮಹತ್ತರ ಪಾತ್ರವಹಿಸುತ್ತವೆ ಎಂದ ಅವರು, ಶಿಕ್ಷಣ, ಸಂಶೋಧನೆ ಮೂಲಕ ಸಮಗ್ರ ಕೃಷಿ ವಿಜ್ಞಾನವನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವುದು ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಕೌಶಲ್ಯ ಅಭಿವದ್ಧಿ ಉತ್ಕೃಷ್ಠತಾ ಕೇದ್ರದಿಂದ ರೈತರಿಗೆ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿ, ಆಹಾರ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ, ಕೃಷಿಯಲ್ಲಿ ಮಹಿಳೆಯರು ಕೆಲದ ಹೊರೆಯನ್ನು ಸಹ ಕಡಿಮೆಗೊಳಿಸುತ್ತದೆ. ಹೀಗಾಗಿ ಈ ಕೇಂದ್ರ ರೈತರ ಕೆಲಸಗಳನ್ನು ಕಡಿಮೆಗೊಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿಕೆವಿಕೆ ಡೀನ್ ಡಾ.ಜಿ.ಎನ್.ನಾಗರಾಜ, ವಿಎಸ್‌ಟಿ ಟ್ರಿಲ್ಲರ್ ಮತ್ತು ಟ್ರಾಕ್ಟರ್ ಕಂಪನಿ ಉಪಾಧ್ಯಕ್ಷ ವಿ.ಪಿ.ಮಹೇಂದ್ರ, ಬಿ.ಸಿ.ಶ್ರೀ ನಿವಾಸ ಐಯ್ಯಂಗಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News