ಹೊರ ರಾಜ್ಯದ ಕನ್ನಡಿಗರಿಗೆ ಶೇ.5 ರಷ್ಟು ಮೀಸಲಾತಿ ಕಲ್ಪಿಸಲು ಸೂಚನೆ

Update: 2018-12-19 18:54 GMT

ಬೆಂಗಳೂರು, ಡಿ.19 : ಹೊರ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರೌಢಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿನ ಉನ್ನತ ಶಿಕ್ಷಣದ ಕೋರ್ಸ್‌ಗಳ ಪ್ರವೇಶದಲ್ಲಿ ಶೇ.5 ರಷ್ಟು ಮೀಸಲಾತಿ ಕಲ್ಪಿಸಿ ಕಡ್ಡಾಯ ಮಾಡಲು ಸುತ್ತೋಲೆ ಹೊರಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಎಲ್ಲ ವಿವಿಗಳ ಕುಲಸಚಿವರಿಗೆ ಸೂಚಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರದ ಗಡಿ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ರಾಜ್ಯದ ಬಳ್ಳಾರಿ ಜಿಲ್ಲೆಗೆ ಉನ್ನತ ಶಿಕ್ಷಣಕ್ಕಾಗಿ ಬರುತ್ತಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ, ವೈದ್ಯಕೀಯ, ವೃತ್ತಿಪರ, ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿದಂತೆ ಮತ್ತಿತರೆ ಕೋರ್ಸ್‌ಗಳಿಗೆ ಪ್ರವೇಶ ಸಿಗುತ್ತಿಲ್ಲ ಎಂದು ಗಡಿನಾಡ ಕನ್ನಡ ಸಾಂಸ್ಕೃತಿಕ ಸಂಘ ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ನಿರ್ದೇಶನ ನೀಡಿದ್ದಾರೆ.

ಅನ್ಯ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಪ್ರವೇಶ ಕಲ್ಪಿಸಬೇಕಾದ ಕರ್ತವ್ಯ ನಮ್ಮದಾಗಿದೆ. ಶಿಕ್ಷಣದಲ್ಲಿ ರಾಜ್ಯಭಾಷೆ ಉಳಿದರೆ ಕನ್ನಡ ಉಳಿದು ಬೆಳೆದರೆ ಆಡಳಿತದಲ್ಲಿ ಕನ್ನಡ ಭಾಷೆ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಅನೇಕ ಸುತ್ತೋಲೆ, ಅಧಿಸೂಚನೆಗಳನ್ನು ಹೊರಡಿಸಿದ್ದರೂ ಕೆಲ ಶಿಕ್ಷಣ ಸಂಸ್ಥೆಗಳು ಪ್ರವೇಶ ನೀಡಲು ಮೀನಾಮೇಷ ಎಣಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಟೀಕಿಸಿದ್ದಾರೆ.

ಕಾಲೇಜುಗಳ ಆಡಳಿತ ವರ್ಗದವರ ಈ ಧೋರಣೆಯಿಂದ ಬಳ್ಳಾರಿ ಜಿಲ್ಲೆಯ ಅನಂತಪುರ ಗಡಿ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ’ಕೆಂಚಗೊಂಡ ಶಾರದೆ’ ಎಂಬ ಹೆಣ್ಣು ಮಗು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿಯೂ ಉನ್ನತ ಶಿಕ್ಷಣಕ್ಕೆ ಪ್ರವೇಶ ಸಿಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈ ಸಮಸ್ಯೆಯ ತೀವ್ರತೆಯನ್ನು ಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲ ವಿವಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ವಿವಿಗಳಲ್ಲಿ ಶೇ.5 ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಏಳು ದಿನಗಳಲ್ಲಿ ಸುತ್ತೋಲೆ ಹೊರಡಿಸಬೇಕು. ತಮ್ಮ ಅಧೀನದ ಎಲ್ಲ ಕಾಲೇಜುಗಳಿಗೆ ಆದೇಶ ಪಾಲಿಸಲು ನಿರ್ದೇಶಿಸಬೇಕು. ಅಲ್ಲದೆ, ಸುತ್ತೋಲೆ ಪ್ರತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News