ಕ್ಷಿಪಣಿ ಪರೀಕ್ಷೆಗೆ ಅಮೆರಿಕಕ್ಕೆ ಅವಕಾಶ ನೀಡುವುದಿಲ್ಲ: ರಶ್ಯ

Update: 2018-12-20 14:24 GMT

ಮಾಸ್ಕೋ, ಡಿ. 20: ಅಮೆರಿಕ ಮತ್ತು ರಶ್ಯಗಳ ನಡುವಿನ ಶಸ್ತ್ರಾಸ್ತ್ರ ಒಪ್ಪಂದ ವಿವಾದದ ಕೇಂದ್ರ ಬಿಂದುವಾಗಿರುವ ನೂತನ ಕ್ರೂಸ್ ಕ್ಷಿಪಣಿಯನ್ನು ತಪಾಸಣೆ ಮಾಡಲು ಅಮೆರಿಕಕ್ಕೆ ಅವಕಾಶ ನೀಡುವುದಿಲ್ಲ ಎಂದು ರಶ್ಯ ಬುಧವಾರ ಹೇಳಿದೆ.

ಈ ವಿವಾದವು ಉಭಯ ದೇಶಗಳ ನಡುವಿನ ಪ್ರಮುಖ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಕ್ಕೆ ಬೆದರಿಕೆಯಾಗಿದೆ ಹಾಗೂ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಶ್ಯದ ಪರಮಾಣು ಸಾಮರ್ಥ್ಯ ಹೊಂದಿರುವ ನೂತನ ಕ್ಷಿಪಣಿ ‘ನೊವೇಟರ್ 9ಎಂ729’ (ಇದನ್ನು ನ್ಯಾಟೊ ಎಸ್‌ಎಸ್‌ಸಿ-8 ಎಂಬುದಾಗಿ ಕರೆಯುತ್ತಿದೆ) 1987ರ ಮಧ್ಯಮ ವ್ಯಾಪ್ತಿಯ ಪರಮಾಣು ಶಸ್ತ್ರಗಳ ಒಪ್ಪಂದ (ಐಎನ್‌ಎಫ್)ವನ್ನು ಉಲ್ಲಂಘಿಸುತ್ತದೆ ಎಂದು ಅಮೆರಿಕ ಆರೋಪಿಸಿದೆ.

ಎರಡೂ ದೇಶಗಳು ಕಿರು ಅಥವಾ ಮಧ್ಯಮ ವ್ಯಾಪ್ತಿಯ ಹಾಗೂ ಭೂಮಿಯ ಮೇಲಿನಿಂದ ಉಡಾಯಿಸುವ ಕ್ಷಿಪಣಿಗಳನ್ನು ಯುರೋಪ್‌ನಲ್ಲಿ ಇರಿಸುವುದನ್ನು ಒಪ್ಪಂದವು ನಿಷೇಧಿಸುತ್ತದೆ.

ಈ ಕ್ಷಿಪಣಿಯ ವ್ಯಾಪ್ತಿಯು ಒಪ್ಪಂದದ ಚೌಕಟ್ಟಿಗೆ ಬರುವುದಿಲ್ಲ ಹಾಗೂ ಕ್ಷಿಪಣಿಯು ವಾಶಿಂಗ್ಟನ್ ಆರೋಪಿಸುವಷ್ಟು ಉದ್ದವಾಗಿಲ್ಲ ಎಂದು ರಶ್ಯ ಹೇಳುತ್ತದೆ. ಈ ಕ್ಷಿಪಣಿಯು ಒಪ್ಪಂದಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಅದು ವಾದಿಸುತ್ತದೆ.

ನೂತನ ಕ್ಷಿಪಣಿಯನ್ನು ತಪಾಸಿಸಲು ಅಮೆರಿಕದ ಪರಿಶೀಲಕರಿಗೆ ಅವಕಾಶ ನೀಡುವುದಿಲ್ಲ ಎಂದು ರಶ್ಯ ಬುಧವಾರ ಹೇಳಿದೆ. ಈ ಕ್ಷಿಪಣಿಯ ಪರೀಕ್ಷೆಯನ್ನು ವಾಶಿಂಗ್ಟನ್ ಆರೋಪಿಸುವಂತೆ ದೀರ್ಘ ವ್ಯಾಪ್ತಿಯ ಉಡಾವಣಾ ಕೇಂದ್ರದಲ್ಲಿ ಮಾಡಲಾಗಿಲ್ಲ ಎಂದು ರಶ್ಯದ ಉಪ ವಿದೇಶ ಸಚಿವ ಸರ್ಗೀ ರಯಬಕೊವ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News