ಕೈದಿಗಳಿಗೆ ಗಾಂಜಾ ಪೂರೈಕೆ: ಪ್ರಥಮ ದರ್ಜೆ ಬೋಧಕನ ಸೆರೆ

Update: 2018-12-20 14:20 GMT

ಬೆಂಗಳೂರು, ಡಿ.20: ಕೈದಿಗಳಿಗೆ ಅಕ್ರಮವಾಗಿ ಗಾಂಜಾ ಪೂರೈಸಿ ತಲೆಮರೆಸಿಕೊಂಡಿದ್ದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಪ್ರಥಮ ದರ್ಜೆ ಬೋಧಕನನ್ನು ಇಲ್ಲಿನ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪರಪ್ಪನ ಅಗ್ರಹಾರ ವಸತಿ ನಿಲಯದ 5ನೇ ಬ್ಲಾಕ್‌ನ ಕುಮಾರಸ್ವಾಮಿ (32) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಸಜಾ ಬಂಧಿಗಳ ಹಣದ ಆಮಿಷಕ್ಕೆ ಒಳಗಾಗಿ ಕಾರಾಗೃಹದ ಕೆಲವು ಸಿಬ್ಬಂದಿಯ ಸಹಕಾರದಿಂದ ಗಾಂಜಾ ಪೂರೈಕೆಯಾಗುತ್ತಿರುವ ಶಂಕೆ ಬಲವಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ಬಂಧಿತ ಆರೋಪಿ ಕೇಂದ್ರ ಕಾರಾಗೃಹದಲ್ಲಿ ಪ್ರಥಮ ದರ್ಜೆ ಬೋಧಕನಾಗಿ ಹಲವು ವಷರ್ಗಳಿಂದ ಕೆಲಸ ಮಾಡುತ್ತಿದ್ದು, ಗಾಂಜಾ ಎಲ್ಲಿಂದ ತಂದು ಪೂರೈಕೆ ಮಾಡುತ್ತಿದ್ದ ಎನ್ನುವುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದರು.

ಆರೋಪಿಯು ಆ.21 ರಂದು ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ತಪಾಸಣೆಗೊಳಗಾಗದೆ ಕರ್ತವ್ಯಕ್ಕೆ ಹಾಜರಾಗಿ ಕಂಪ್ಯೂಟರ್ ಸರ್ವರ್ ಕೊಠಡಿಯಲ್ಲಿ ಸಜಾಬಂಧಿ ಮಂಜುನಾಥ್‌ಗೆ 100 ಗ್ರಾಂ ತೂಕದ 4 ಪಾಕೆಟ್ ಗಾಂಜಾ ನೀಡಿದ್ದ. ಈ ಸಂಬಂಧ ಕಾರಾಗೃಹದ ಮುಖ್ಯ ಅಧೀಕ್ಷಕರು ನೀಡಿದ್ದ ದೂರು ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿ ಅನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News