ದೇಶದಲ್ಲಿ ನಮ್ಮನ್ನೂ ಬದುಕಲು ಬಿಡಿ: ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ

Update: 2018-12-20 16:02 GMT

ಬೆಂಗಳೂರು, ಡಿ.20: ಟ್ರಾನ್ಸಜಂಡರ್ ಪರ್ಸನ್ ಮಸೂದೆ ಹಾಗೂ ಟ್ರಾಫಿಕಿಂಗ್ ಆಫ್ ಪರ್ಸನ್ಸ್ ಮಸೂದೆ- 2018 ರ ವಿರುದ್ಧ ಕಳವಳ ವ್ಯಕ್ತಪಡಿಸುವ ಮೂಲಕ ದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಬದುಕಲು ಬಿಡಿ ಎಂದು ಲೈಂಗಿಕ ಕಾರ್ಯಕರ್ತರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟ ತೀವ್ರ ಆತಂಕ ವ್ಯಕ್ತಪಡಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸದಸ್ಯೆ ಸುಮಿತ್ರಾ, ಎರಡು ಮಸೂದೆಗಳಿಗೆ ಯಾವುದೇ ಲೈಂಗಿಕ ಅಲ್ಪಸಂಖ್ಯಾತರ ಸಲಹೆ, ಬೇಕು- ಬೇಡಗಳನ್ನು ಆಲಿಸದೆ ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡಿರುವುದು ಆತಂಕಕಾರಿಯಾಗಿದೆ. ಅಲ್ಲದೆ, ಪ್ರಸ್ತುತ ರಾಜ್ಯಸಭೆಯಲ್ಲಿ ಮಂಡನೆಯಾಗುವುದು ಬಾಕಿಯಿದ್ದು, ರಾಜ್ಯಸಭೆಯಲ್ಲಿ ಮಂಡಿಸದೆ, ರಾಜ್ಯ ಸಭೆಯ ವಿಶೇಷ ಸಮಿತಿಯೊಂದಕ್ಕೆ ವಹಿಸಿಕೊಡಬೇಕೆಂದು ಆಗ್ರಹಿಸಿದರು.

ಮಸೂದೆ ಹೇಳುವಂತೆ ಮೂರನೇ ವ್ಯಕ್ತಿ ತೃತೀಯ ಲಿಂಗಿಯೆಂದು ಸ್ಪಷ್ಟೀಕರಣ ನೀಡುವುದು ಎಷ್ಟು ಸರಿ. ಮುಖ್ಯವಾಗಿ ಸಮುದಾಯಕ್ಕೆ ಆರೋಗ್ಯ, ಶಿಕ್ಷಣ, ಉದ್ಯೋಗವನ್ನು ನೀಡಬೇಕು. ಸಮಾಜದಲ್ಲಿ ಘನತೆ ತರುವಂತಹ ಯೋಜನೆಗಳನ್ನು ರೂಪಿಸಬೇಕು. ಅದನ್ನು ಬಿಟ್ಟು ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದಿಂದ ದೂರವಿಡುವ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದರು.

ಇಡೀ ಸಮುದಾಯದಲ್ಲೇ ರಾಜ್ಯದಲ್ಲಿ ಉದ್ಯೋಗ ಗಳಿಸಿರುವುದು ಅನುಶ್ರೀ ಹಾಗೂ ಮೋನಿಕಾ ಮಾತ್ರ. ಬೇರೆಯವರಿಗೆ ಶಿಕ್ಷಣವೂ ಇಲ್ಲ, ಉದ್ಯೋಗವೂ ಇಲ್ಲ ಇದರ ಕಡೆ ಸರಕಾರ ಗಮನವರಿಸಬೇಕು. ನಮ್ಮನ್ನು ನಡು ರಸ್ತೆಯಲ್ಲಿ ಬಿಟ್ಟು ಬದುಕಿ ಎಂದು ಹೇಳಿದರೆ ನಾವು ಜೀವನ ನಡೆಸುವುದಾದರೂ ಹೇಗೆ? ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಶಿಕ್ಷಣ, ಉದ್ಯೋಗ ಹಾಗೂ ಸರಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿರುವ ಸಮುದಾಯದವರು, ತಮ್ಮ ಹೊಟ್ಟೆ ಪಾಡು ಹಾಗೂ ಜೀವನ ನಿರ್ವಹಣೆಗಾಗಿ ಅಪ್ಪ-ಅಮ್ಮ, ಅಕ್ಕ-ಅತ್ತಿಗೆ, ಅಣ್ಣ-ತಮ್ಮ ಎಂದು ಭಿಕ್ಷೆ ಬೇಡುವುದು ಸರಿಯಲ್ಲ. ಆದರೆ, ರಾಜಕೀಯ ವ್ಯಕ್ತಿಗಳು ಕೋಟಿ- ಕೋಟಿ ಹಣವನ್ನು ಜನರ ಹೆಸರಿನಲ್ಲಿ ಲೂಟಿ ಮಾಡುತ್ತಿರುವುದು ಸರಿಯಾದ ನಡೆಯಾಗಿ ಸರಕಾರದ ಕಣ್ಣಿಗೆ ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಟ್ರಾನ್ಸ್‌ಜೆಂಡರ್ ಪರ್ಸನ್ ಮಸೂದೆ- 2018

* ವಿವಿಧ ಹಂತಗಳಲ್ಲಿ ನಡೆಯುವ ಹಿಂಸೆಯ ಹೊಣೆಗಾರಿಕೆ ಸರಿಯಲ್ಲ.

* ಭಿಕ್ಷಾಟನೆ ಅಪರಾಧೀಕರಣವನ್ನು ಎತ್ತಿಹಿಡಿಯುತ್ತದೆ.

* ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸೇವೆಗಳಿಲ್ಲ.

* ಲಿಂಗ ಪರಿವರ್ತಿತರ ರಕ್ಷಣೆ ಪೂರ್ಣ ಪ್ರಮಾಣದಲ್ಲಿ ಭದ್ರವಾಗಿಲ್ಲ.

* ಲೈಂಗಿಕ ಅಲ್ಪಸಂಖ್ಯಾತರು ಪೋಷಕರೊಂದಿಗೆ ವಾಸಿಸಬೇಕು ಅಥವಾ ನ್ಯಾಯಾಲಯದ ಮೊರೆ ಹೋಗಬೇಕು.

* ಲಿಂಗಪರಿವರ್ತಿತರ ಮೇಲಿನ ತಾರತಮ್ಯ ಹಾಗೂ ಹಲ್ಲೆಗಳಿಗೆ ಕಡಿಮೆ ಪ್ರಮಾಣದ ಶಿಕ್ಷೆ.

ಟ್ರಾಫಿಕಿಂಗ್ ಆಫ್ ಪರ್ಸನ್ಸ್ ಮಸೂದೆ- 2018

* ಅಪರಾಧ ನ್ಯಾಯದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ.

* ಅಸ್ತಿತ್ವದಲ್ಲಿರುವ ಆಶ್ರಯ ಗೃಹಗಳ ವೈಫಲ್ಯಗಳನ್ನು ಕಡೆಗಣಿಸುತ್ತದೆ.

* ಅಂತರ್‌ರಾಷ್ಟ್ರೀಯ ಕಾನೂನು ನಿಯಮಗಳಿಗೆ ವಿರುದ್ಧವಾಗಿದೆ.

* ಲೈಂಗಿಕ ಅಲ್ಪಸಂಖ್ಯಾತರ ಅನೌಪಚಾರಿಕ ಕೆಲಸಗಳ ಮೇಲಿನ ಪರಿಣಾಮಗಳ ಬಗ್ಗೆ ಸಮಾಲೋಚಿಸಿಲ್ಲ.

* ಹಾರ್ಮೋನುಗಳು ಹಾಗೂ ಔಷಧಗಳನ್ನು ನೀಡುವುದನ್ನು ಅಪರಾಧೀಕರಿಸುತ್ತದೆ.

* ಸ್ವ-ಇಚ್ಛೆ ಲೈಂಗಿಕ ವೃತ್ತಿ ಹಾಗೂ ಕಳ್ಳ ಸಾಗಾಣಿಕೆಯ ನಡುವಿನ ವ್ಯತ್ಯಾಸ ಅರಿವಿಲ್ಲ.

* ಲಿಂಗ ನಿರ್ಧರಿಸುವ ಹಾರ್ಮೋನ್ ಚಿಕಿತ್ಸೆಯ ವಿಷಯದಲ್ಲಿ ಬಲವಂತ ಹಾಗೂ ಸಹಾಯ ಮಾಡುವುದರ ನಡುವಿನ ವ್ಯತ್ಯಾಸ ಗುರುತಿಸಿಲ್ಲ.

ನಮ್ಮ ದೇಹವನ್ನು ಪರಿಶೀಲಿಸೋಕೆ ಯಾರು ಅಧಿಕಾರ ಕೊಟ್ಟವರು. ಒಬ್ಬ ವ್ಯಕ್ತಿಯ ದೇಹ ಪರಿಶೀಲನೆಗೆ ಇಷ್ಟು ಹೇಯವಾದಂತಹ ಮಸೂದೆ ಸಹಕಾರಿಯಾದರೆ ಹೇಗೆ? ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳಿಗೆ ಬೆಲೆಯೇ ಇಲ್ಲವೇ?

-ಸುಮಿತ್ರಾ, ಲೈಂಗಿಕ ಅಲ್ಪಸಂಖ್ಯಾತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News