ಪತ್ರಕರ್ತರ ಮೇಲೆ ದಾಳಿ: ಕೇಂದ್ರ ಸರ್ಕಾರದ ಬಳಿ ಮಾಹಿತಿಯೇ ಇಲ್ಲ!

Update: 2018-12-21 10:26 GMT

ಹೊಸದಿಲ್ಲಿ: ದೇಶದಲ್ಲಿ 2014ರಿಂದೀಚೆಗೆ ಎಷ್ಟು ಮಂದಿ ಪತ್ರಕರ್ತರ ಹತ್ಯೆಯಾಗಿದೆ ಹಾಗೂ ಎಷ್ಟು ಮಂದಿ ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ ಎಂಬ ಅಂಕಿ ಅಂಶ ಸರ್ಕಾರದ ಬಳಿ ಇಲ್ಲ!

ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೊ ಅಪರಾಧ ದಾಖಲೆಗಳನ್ನು ವೃತ್ತಿಗೆ ಅನುಗುಣವಾಗಿ ಸಂಗ್ರಹಿಸಿ ಇಡುವುದಿಲ್ಲವಾದ್ದರಿಂದ ಪತ್ರಕರ್ತರ ಮೇಲಿನ ಹಲ್ಲೆ ಹಾಗೂ ಪತ್ರಕರ್ತರ ಹತ್ಯೆ ಬಗ್ಗೆ ವಿವರಗಳಿಲ್ಲ ಎಂದು ಮಾಹಿತಿ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಗುರುವಾರ ಲೋಕಸಭೆಗೆ ತಿಳಿಸಿದರು. ಈ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯನ್ನು ಸರ್ಕಾರ ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ತೃಣಮೂಲ ಕಾಂಗ್ರೆಸ್ ಮುಖಂಡ ದಿನೇಶ್ ತ್ರಿವೇದಿಯವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು.

ಪತ್ರಕರ್ತರ ಮೇಲಿನ ದಾಳಿಯ ಹೊರತಾಗಿ ತ್ರಿವೇದಿಯವರು, ವಿಶ್ವಮಟ್ಟದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 138ನೇ ಸ್ಥಾನದಲ್ಲಿರುವ ಬಗ್ಗೆ ಅರಿವು ಇದೆಯೇ ಎಂದು ಪ್ರಶ್ನಿಸಿದರು. ರಿಪೋಟರ್ಸ್ ವಿದೌಟ್ ಬಾರ್ಡರ್ ಎಂಬ ಸ್ವಯಂಸೇವಾ ಸಂಸ್ಥೆ ಪ್ರಕಟಿಸಿದ ಸೂಚ್ಯಂಕದಲ್ಲಿ ಭಾರತ 138ನೇ ಸ್ಥಾನದಲ್ಲಿದೆ. ಭಾರತದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಕುಸಿತದ ಬಗ್ಗೆ ಅಧ್ಯಯನ ಕೈಗೊಳ್ಳಲು ಭಾರತದ ಪತ್ರಿಕಾ ಮಂಡಳಿ ಪರಿಶೀಲಿಸುತ್ತಿದೆಯೇ ಎಂದೂ ಅವರು ಪ್ರಶ್ನಿಸಿದರು.

ಭಾರತದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿದ್ದೇನೆ. ಆದರೆ ಈ ಸೂಚ್ಯಂಕದ ಅಧಿಕೃತತೆ ಬಗ್ಗೆ ಪತ್ರಿಕಾ ಮಂಡಳಿಗೆ ಸಂದೇಹವಿದೆ ಎಂದು ಸಚಿವರು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News