ತಂದೆಗೆ ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ: ಸಂಸದೀಯ ಕಾರ್ಯದರ್ಶಿ ಹುದ್ದೆ ನಿರಾಕರಿಸಿದ ಸೌಮ್ಯಾ ರೆಡ್ಡಿ

Update: 2018-12-22 05:40 GMT

ಬೆಂಗಳೂರು, ಡಿ.22: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧಗೊಂಡಿರುವಂತೆಯೇ ಅವಕಾಶ ವಂಚಿತರ ಅಮಾಧಾನ ಸ್ಫೋಟಗೊಳ್ಳಲಾರಂಭಿಸಿದೆ. ಮಾಜಿ ಸಚಿವ ರಾಮಲಿಂಗಾರೆಡ್ಡಿಯವರ ಪುತ್ರಿ, ಶಾಸಕಿ ಸೌಮ್ಯಾ ರೆಡ್ಡಿ ಕೂಡಾ ಈ ಸಾಲಿನಲ್ಲಿ ಸೇರಿದ್ದಾರೆ.

ತಂದೆಗೆ ಸಚಿವ ಸ್ಥಾನ ಸಿಗದ ಕಾರಣವನ್ನು ಮುಂದಿಟ್ಟು ತನಗೆ ನೀಡಲಾದ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ಸೌಮ್ಯಾ ರೆಡ್ಡಿ ನಿರಾಕರಿಸಿದ್ದಾರೆ.

ಈ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಸೌಮ್ಯಾ ರೆಡ್ಡಿ, ನನ್ನ ತಂದೆ ಎರಡು ಬಾರಿ ಡಿಸಿಸಿ ಅಧ್ಯಕ್ಷರಾಗಿ, ಏಳು ಬಾರಿ ಶಾಸಕರಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಕೇವಲ ಒಂದು ಶಾಸಕರಿದ್ದ ಬೆಂಗಳೂರಿನಲ್ಲಿ ಸದ್ಯ 15ಕ್ಕೂ ಶಾಸಕರಿದ್ದಾರೆ. ಇದರಲ್ಲಿ ತಂದೆಯವರ ಶ್ರಮ ಇದೆ. ನಾನು ಅವರನ್ನು ಮಂತ್ರಿಯಾಗಿ ನೋಡಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ಪಕ್ಷಕ್ಕಾಗಿ ದುಡಿದವರಿಗೆ ಕಾಂಗ್ರೆಸ್‌ನಲ್ಲಿ ಸ್ವಲ್ಪ ಹಿನ್ನಡೆ ಆಗುತ್ತಿದ್ದು, ಇದು ರಾಜಕೀಯದ ಒಂದು ಭಾಗ ಎಂದು ಹೇಳಬಹುದು. ಆದರೂ ಪಕ್ಷನಿಷ್ಠರಿಗೆ ಸೂಕ್ತ ಸ್ಥಾನಮಾನ ನೀಡಲು ಈ ರೀತಿ ಹಿಂದೇಟು ಹಾಕಿದರೆ ಬೇಸರವಾಗುತ್ತದೆ ಎಂದು ಸೌಮ್ಯಾ ರೆಡ್ಡಿ ಪಕ್ಷದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.

ನಾನು ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದು, ನನ್ನ ಕ್ಷೇತ್ರದಲ್ಲಿ ಹಲವಾರು ಕೆಲಸಗಳನ್ನು ಮಾಡಲು ಬಹಳಷ್ಟು ಸಮಯ ಬೇಕಾಗಿದೆ. ಆದ್ದರಿಂದ ನನಗೆ ಸಂಸದೀಯ ಕಾರ್ಯದರ್ಶಿ ಸ್ಥಾನಮಾನ ಸದ್ಯ ಬೇಡ, ಅದನ್ನು ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ನೀಡಿ ಎಂದು ಸೌಮ್ಯಾ ರೆಡ್ಡಿ ಪಕ್ಷಕ್ಕೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News