ಆರ್ ಬಿಐ ಸ್ವಾಯತ್ತತೆ ಅಪಾಯದಲ್ಲಿ, ನೋಟ್ ಬ್ಯಾನ್ ಅತೀ ದೊಡ್ಡ ಬ್ಯಾಂಕಿಂಗ್ ಹಗರಣ

Update: 2018-12-22 16:41 GMT

ಹೊಸದಿಲ್ಲಿ, ಡಿ.22: ದೇಶದ ಅರ್ಥವ್ಯವಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸುವರ್ಣಾವಕಾಶವನ್ನು ಮೋದಿ ಹಾಳುಗೆಡವಿದರು. ‘ಮೇಕ್ ಇನ್ ಇಂಡಿಯಾ’ ಯೋಜನೆ ಮೋದಿ ಸರಕಾರದ ಅತೀ ದೊಡ್ಡ ವೈಫಲ್ಯವಾಗಿದೆ. ಮೋದಿ ಭಾರತವನ್ನು ನಾಶಪಡಿಸಿದರು ಎಂದು ತಾನು ಬರೆದಿರುವ ಹೊಸ ಪುಸ್ತಕದಲ್ಲಿ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರದ ಬಗ್ಗೆ ಅವರು ಬರೆದಿರುವ ‘ಇಂಡಿಯಾ ಅನ್‌ಮೇಡ್: ಹೌ ದಿ ಮೋದಿ ಗವರ್ನ್‌ಮೆಂಟ್ ಬ್ರೋಕ್ ದಿ ಇಕಾನಮಿ’ ಎಂಬ ಕೃತಿಯಲ್ಲಿ ಎನ್‌ ಡಿಎ ಸರಕಾರ ಆರ್ಥಿಕ ಕ್ಷೇತ್ರವನ್ನು ನಿರ್ವಹಿಸಿದ ರೀತಿಯನ್ನು ಕಟುವಾಗಿ ಟೀಕಿಸಿರುವ ಸಿನ್ಹ, ಜಿಡಿಪಿ ಸಂಖ್ಯೆಗಳು ದಾರಿ ತಪ್ಪಿಸುವಂತಿವೆ. ಆರ್‌ಬಿಐಯ ಸ್ವಾಯತ್ತತೆಗೆ ಗಂಭೀರ ಅಪಾಯ ಎದುರಾಗಿದೆ . ನೋಟು ರದ್ದತಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಹಗರಣವಾಗಿದೆ ಎಂದಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡರಾಗಿದ್ದ ಯಶವಂತ್ ಸಿನ್ಹ ಮೋದಿ ಮತ್ತು ಬಿಜೆಪಿ ಸರಕಾರದ ಕಟು ಟೀಕಾಕಾರನಾಗಿದ್ದು, ಎಪ್ರಿಲ್‌ನಲ್ಲಿ ಬಿಜೆಪಿ ತೊರೆದಿದ್ದರು. ಮೋದಿ ಯುಪಿಎಯ ಪರಂಪರೆ ವಿಷಯಗಳನ್ನು ಪರಿಹರಿಸಿ ದೇಶವನ್ನು ಬಡರಾಷ್ಟ್ರದ ಸ್ಥಿತಿಯಿಂದ ಮಧ್ಯಮ ಆದಾಯದ ದೇಶ ಎಂಬ ಮಟ್ಟಕ್ಕೆ ಎತ್ತರಿಸಬಹುದಿತ್ತು. ಆದರೆ ಈ ಅವಕಾಶವನ್ನೂ ಅವರು ವ್ಯರ್ಥವಾಗಿಸಿಕೊಂಡರು. 2016ರ ನವೆಂಬರ್ 8ರಂದು ಘೋಷಿಸಿದ ಅಧಿಕ ಮೌಲ್ಯದ ನೋಟುಗಳ ರದ್ದತಿ ಎಂಬ ದುರಂತವು ಮೋದಿ ಸರಕಾರ ದೇಶದ ಜನತೆಗೆ ಬಿಟ್ಟುಹೋಗುವ ಶಾಶ್ವತ ‘ಆಸ್ತಿ’ಯಾಗಿದೆ ಎಂದು ಸಿನ್ಹಾ ಟೀಕಿಸಿದ್ದಾರೆ.

ನೋಟು ರದ್ದತಿ ಹುಚ್ಚಾಟದ, ತಿಕ್ಕಲುತನದ ನಿರ್ಧಾರವಾಗಿದ್ದು, ಇದರಿಂದ ಏನನ್ನೂ ಸಾಧಿಸಲಾಗಿಲ್ಲ. ಆದರೆ , ತಾನು ಶ್ರೀಮಂತ ಭ್ರಷ್ಟಾಚಾರಿಗಳನ್ನು ನಿಗ್ರಹಿಸಲು ಯಾವುದೇ ಕಠಿಣ ಕ್ರಮ ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎಂಬ ಜನಪ್ರಿಯ ಪ್ರಚಾರ ಪಡೆದುಕೊಳ್ಳಲು ಮೋದಿಗೆ ಅನುಕೂಲವಾಯಿತು. ಈ ಕಾರಣಕ್ಕಾಗಿಯೇ 2017ರಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಪಡೆಯಿತು. ಆದರೆ ಆಡಳಿತಾತ್ಮಕ ದೃಷ್ಟಿಯಿಂದ ಹೇಳುವುದಾದರೆ ನೋಟು ರದ್ದತಿ ನಿರ್ಧಾರದಿಂದ ಶೂನ್ಯ ಸಾಧನೆಯಾಗಿದೆ ಎಂದು ಸಿನ್ಹಾ ಹೇಳಿದ್ದಾರೆ.

ಮೋದಿ ಸರಕಾರದ ಪ್ರಮುಖ ಯೋಜನೆಯಾಗಿರುವ ‘ಮೇಕ್ ಇನ್ ಇಂಡಿಯಾ’ದ ಬಗ್ಗೆ ಪ್ರಸ್ತಾಪಿಸಿರುವ ಅವರು, ಈ ಯೋಜನೆಯ ಕಲ್ಪನೆ ಮೋದಿ ಸರಕಾರದ್ದಲ್ಲ. 2004ರಲ್ಲಿ ಯುಪಿಎ ಸರಕಾರ ರೂಪಿಸಿದ್ದ ‘ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಕಾಂಪಿಟೀಟಿವ್‌ನೆಸ್ ಕೌನ್ಸಿಲ್’ (ವಿ.ಕೃಷ್ಣಮೂರ್ತಿ ಇದರ ಪ್ರಥಮ ಅಧ್ಯಕ್ಷರಾಗಿದ್ದರು) ಯೋಜನೆಯನ್ನು ಮೋದಿ ಸರಕಾರ ನಕಲು ಮಾಡಿದೆ. ಮೇಕ್ ಇನ್ ಇಂಡಿಯಾ ಯೋಜನೆ ಮೋದಿ ಆಡಳಿತದ ಸಂದರ್ಭದಲ್ಲಿ ದೇಶದ ಉದ್ದಿಮೆಕ್ಷೇತ್ರದ ಸ್ಥಿತಿಗತಿಗೆ ಕನ್ನಡಿ ಹಿಡಿದಿದೆ ಎಂದಿದ್ದಾರೆ.

ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಅವಕಾಶ ಮೋದಿ ಸರಕಾರಕ್ಕೆ ದೊರಕಿತ್ತು. ಆದರೆ ತನಗೆ ದೊರೆತ ಜನಾದೇಶವನ್ನು ಸರಕಾರ ವ್ಯರ್ಥವಾಗಿಸಿತು. ಕಳೆದ ನಾಲ್ಕು ವರ್ಷಗಳಲ್ಲಿ ಸರಾಸರಿ ಅಭಿವೃದ್ಧಿ ದರ ಶೇ.7.35ರಷ್ಟಿದೆ. ಸರಕಾರದ ಆರ್ಥಿಕ ನಿರ್ವಹಣೆಯನ್ನು ಉತ್ಪ್ರೇಕ್ಷಿತವಾಗಿ ತಿಳಿಸುವ ರೀತಿಯಲ್ಲಿ ಅಭಿವೃದ್ಧಿ ದರವನ್ನು ತೋರಿಸುತ್ತಿರಬಹುದು ಎಂದು ಸಿನ್ಹ ಹೇಳಿದ್ದಾರೆ.

ಜಿಎಸ್‌ಟಿ ಬಗ್ಗೆ ಪ್ರಸ್ತಾವಿಸಿರುವ ಅವರು, ಇದೊಂದು ಉತ್ತಮ ತೆರಿಗೆ ಪದ್ದತಿಯಾಗಿದೆ. ಆದರೆ ಮೋದಿ ಮತ್ತು ಜೇಟ್ಲಿ ಸೇರಿಕೊಂಡು ಇದನ್ನು ಅವ್ಯವಸ್ಥೆಯ ಗೂಡಾಗಿಸಿದರು. 200 ಬಾರಿ ಇದನ್ನು ಮಾರ್ಪಡಿಸಲಾಗಿದೆ, 400 ಅಧಿಸೂಚನೆ, 100 ಸುತ್ತೋಲೆ, ಎಫ್‌ಎಕ್ಯೂ(ಫ್ರೀಕ್ವೆಂಟ್ಲಿ ಆಸ್ಕ್‌ಡ್ ಕ್ವೆಶ್ಚನ್ಸ್)ಗಳನ್ನು ಪ್ರಕಟಿಸಲಾಗಿದೆ. ಇದು ಮೋದಿ-ಜೇಟ್ಲಿ ತಂಡದ ಅವಿವೇಕತನಕ್ಕೆ ಸೂಕ್ತ ಪುರಾವೆಯಾಗಿದೆ ಎಂದಿದ್ದಾರೆ.

ಯುಪಿಎ ಸರಕಾರವನ್ನೂ ಸಿನ್ಹ ಪುಸ್ತಕದಲ್ಲಿ ಟೀಕಿಸಿದ್ದಾರೆ. ಯುಪಿಎ ಆಡಳಿತದ ಸಂದರ್ಭದಲ್ಲೂ ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಶೋಚನೀಯ ಮಟ್ಟಕ್ಕೆ ಕುಸಿದಿತ್ತು ಎಂದಿದ್ದಾರೆ.

ಪತ್ರಕರ್ತ ಆದಿತ್ಯ ಸಿನ್ಹರ ಜೊತೆಗೂಡಿ ಯಶವಂತ್ ಸಿನ್ಹ ಬರೆದಿರುವ ಈ ಕೃತಿಯನ್ನು ‘ಜಗ್ಗರ್‌ನಾಟ್’ ಸಂಸ್ಥೆ ಪ್ರಕಟಿಸಿದೆ.

ಮೋದಿಗೆ ಮತ್ತೊಮ್ಮೆ ಅವಕಾಶ ಸಿಕ್ಕರೆ ಒಂದು ದಶಕ ವ್ಯರ್ಥವಾಗುತ್ತದೆ

ಮೋದಿ ಸರಕಾರದ ಆಡಳಿತ ನಿರ್ವಹಣೆಯನ್ನು ಕಾರ್ಯಕ್ರಮ ನಿರ್ವಹಿಸುವ ‘ಈವೆಂಟ್ ಮ್ಯಾನೇಜ್‌ಮೆಂಟ್’ಗೆ ಹೋಲಿಸಬಹುದು. ತಪ್ಪು ಅಭಿಪ್ರಾಯ ಮೂಡಿಸುವಲ್ಲಿ ಮೋದಿಯನ್ನು ಬಿಟ್ಟರೆ ಮತ್ತೊಬ್ಬರಿಲ್ಲ. ಈ ಪ್ರಕ್ರಿಯೆಯಲ್ಲಿ ಇದುವರೆಗೆ(ಐದು ವರ್ಷದ ಆಡಳಿತದಲ್ಲಿ) ದೇಶದ ಅರ್ಧ ದಶಕವನ್ನು ಅವರು ವ್ಯರ್ಥವಾಗಿಸಿದ್ದಾರೆ. ಮತ್ತೊಮ್ಮೆ ಮೋದಿಗೆ ಅವಕಾಶ ಸಿಕ್ಕರೆ 2024ರಲ್ಲಿ ಒಂದು ದಶಕ ವ್ಯರ್ಥವಾದಂತೆ ಆಗುತ್ತದೆ ಎಂದು ಸಿನ್ಹ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News