ಪಕ್ಷದ ಶಿಸ್ತು ಉಲ್ಲಂಘಿಸಿದರೆ ಸೂಕ್ತ ಕ್ರಮ: ದಿನೇಶ್ ಗುಂಡೂರಾವ್ ಎಚ್ಚರಿಕೆ

Update: 2018-12-22 13:13 GMT

ಬೆಂಗಳೂರು, ಡಿ.22: ಸಚಿವ ಸ್ಥಾನದಿಂದ ವಂಚಿತರಾಗಿರುವ ಶಾಸಕರು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಭಿನ್ನಮತೀಯ ಕಾರ್ಯಚಟುವಟಿಕೆಗಳಲ್ಲಿ ತೊಡಗಬಾರದು. ಒಂದು ವೇಳೆ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿದರೆ, ಸೂಕ್ತ ಪ್ರತಿಫಲವನ್ನು ಎದುರಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸದ್ಯ ಸಚಿವ ಸ್ಥಾನದಿಂದ ವಂಚಿತರಾಗಿರುವ ಶಾಸಕರು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಭಿನ್ನಮತೀಯ ಕಾರ್ಯಚಟುವಟಿಕೆಗಳಲ್ಲಿ ತೊಡಗಬಾರದು. ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಅಭಿವೃದ್ದಿಗೆ ದುಡಿಯಬೇಕಾಗಿದೆ. ಒಂದು ವೇಳೆ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿದರೆ, ಸೂಕ್ತ ಪ್ರತಿಫಲವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಈಗ ವಂಚಿತರಾಗಿರುವ ಶಾಸಕರು ಎಲ್ಲ ರೀತಿಯಿಂದಲೂ ಅರ್ಹರಾಗಿದ್ದಾರೆ. ಆದರೆ, ಜಿಲ್ಲಾವಾರು, ಜಾತಿವಾರು ಹಾಗೂ ಪ್ರಾಂತ್ಯವಾರು ಪ್ರಾತಿನಿಧ್ಯ ನೀಡಬೇಕೆಂಬ ಉದ್ದೇಶದಿಂದಾಗಿ ಸಚಿವ ಸಂಪುಟಕ್ಕೆ ಕೆಲವರನ್ನು ಸೇರಿಸಿ, ಕೆಲವರನ್ನು ಕೈಬಿಡಲಾಗಿದೆ ಎಂದರು.

ಕಾಂಗ್ರೆಸ್‌ನ ಎಲ್ಲ ಶಾಸಕರಿಗೂ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಈಗಾಗಲೆ ಸಚಿವ ಸ್ಥಾನವನ್ನು ಹೊರತು ಪಡಿಸಿ 19 ಶಾಸಕರಿಗೆ ನಿಗಮ ಮಂಡಳಿ, 9 ಮಂದಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ರಾಷ್ಟ್ರಮಟ್ಟದಲ್ಲಿ ಹೊಂದಾಣಿಕೆಗಳು ನಡೆಯುತ್ತಿವೆ. ನಮ್ಮದು ಹೊಂದಾಣಿಕೆ ಸರಕಾರವಾಗಿರುವುದರಿಂದ, ಇದಕ್ಕಾಗಿ ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರು ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಯಾವುದೆ ಭಿನ್ನಮತೀಯ ಧೋರಣೆಗೆ ಅವಕಾಶ ಕೊಡಬಾರದೆಂದು ಅವರು ಹೇಳಿದರು.

ರಮೇಶ್‌ ಜಾರಕಿಹೊಳಿ ವೈಯಕ್ತಿಕ ಕಾರಣಗಳಿಗಾಗಿ ತಮ್ಮ ಸಚಿವ ಸ್ಥಾನವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲವೆಂದು ಪಕ್ಷದ ಹಲವು ಮುಖಂಡರ ಬಳಿ ಹಂಚಿಕೊಂಡಿದ್ದರು. ಹಾಗೂ ಅರಣ್ಯ ಸಚಿವರಾಗಿದ್ದ ಆರ್.ಶಂಕರ್ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಉದ್ದೇಶದಿಂದ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಅವರು ಕಾಂಗ್ರೆಸ್‌ನಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಹೀಗಾಗಿ ಅವರಿಬ್ಬರನ್ನು ಕೈ ಬಿಡಲಾಗಿದೆ.

-ದಿನೇಶ್‌ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News