2019 ಲೋಕಸಭೆ ಚುನಾವಣೆಯಲ್ಲಿ ಮೈತ್ರಿ: ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದು ಹೀಗೆ

Update: 2018-12-22 14:53 GMT

ಹೊಸದಿಲ್ಲಿ, ಡಿ. 22: 2019ರ ಲೋಕಸಭೆ ಚುನಾವಣೆಯಲ್ಲಿ ಮಕ್ಕಳ್ ನೀದಿ ಮೈಯಂ ಪಕ್ಷ ನಿಶ್ಚಿತವಾಗಿ ಸ್ಪರ್ಧಿಸಲಿದೆ ಎಂದು ಕಮಲ್ ಹಾಸನ್ ಶನಿವಾರ ಹೇಳಿದ್ದಾರೆ. ಚೆನ್ನೈಯಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆ ಬಳಿಕ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ರೂಪಿಸಲು ಪಕ್ಷ ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಚೆನ್ನೈಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ‘‘ಸಮಾನ ಮನಸ್ಕ ಪಕ್ಷಗಳೊಂದಿಗೆ ಕೈಜೋಡಿಸಲು ನಾವು ಸಿದ್ಧರಾಗಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾವು ಸಮಿತಿ ರೂಪಿಸಲಿದ್ದೇವೆ. ಅಲ್ಲದೆ, ನಾವು ಈ ಬಾರಿ ಸಾರ್ವತ್ರಿಕ ಚುನಾವಣೆ ಎದುರಿಸಲಿದ್ದೇವೆ’’ ಎಂದರು. ಎಂಎನ್‌ಎಂನ ಆಯ್ಕೆ ಬಗ್ಗೆ ಪ್ರಶ್ನಿಸಿದಾಗ ಕಮಲ್, ತಮಿಳುನಾಡಿ ಡಿಎನ್‌ಎಯನ್ನು ಬದಲಾಯಿಸಲು ಪ್ರಯತ್ನಿಸುವ ಪಕ್ಷಗಳ ಜೊತೆ ಎಂದಿಗೂ ಕೈಜೋಡಿಸುವುದಿಲ್ಲ ಎಂದು ಹೇಳಿದರು.

ಚುನಾವಣೆ ಸಂದರ್ಭ ನಾವು ಮೈತ್ರಿ ಬಗ್ಗೆ ನಿರ್ಧರಿಸಲಿದ್ದೇವೆ. ನಮ್ಮ ಚುನಾವಣಾ ಪ್ರಚಾರ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಲಿದೆ ಎಂದರು.

‘‘ಮೈತ್ರಿ ಮಾಡಿಕೊಳ್ಳಲು ನಾನು ಮುಕ್ತವಾಗಿದ್ದೇನೆ. ನಾನು ಮೈತ್ರಿಯ ಕೇಂದ್ರವಾಗುತ್ತೇನೋ ಅಥವಾ ಕೆಲವು ಇತರ ನಾಯಕರ ನೇತೃತ್ವದ ಮೈತ್ರಿಯಲ್ಲಿ ಸೇರುತ್ತೇನೋ ಎಂದು ಈಗ ಹೇಳಲು ಸಾಧ್ಯವಿಲ್ಲ. ಪಕ್ಷಗಳು ಮಾತುಕತೆಗೆ ಬಂದ ಸಂದರ್ಭ ಅದನ್ನು ನಿರ್ಧರಿಸಲಾಗುವುದು’’ ಎಂದು ಕಮಲ್ ಹೇಳಿದರು.

ಕಮಲ್ ಹಾಸನ್ ಫೆಬ್ರವರಿ ತನ್ನ ಪಕ್ಷವನ್ನು ಆರಂಭಿಸಿದ್ದರು. ಪಕ್ಷದ ನೋಂದಣಿಗೆ ದಿಲ್ಲಿಗೆ ತೆರಳಿದ್ದಾಗ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News