ದೇಶದಲ್ಲಿ ಪರ್ಯಾಯ ರಾಜಕೀಯ ಚಿಂತನೆ ಬೆಳೆಸಬೇಕು: ಯೋಗೇಂದ್ರ ಯಾದವ್

Update: 2018-12-22 16:07 GMT

ಬೆಂಗಳೂರು, ಡಿ.22: ರಾಜಕೀಯ ಪಕ್ಷಗಳು ದೇಶದಲ್ಲಿರುವ ವಿವಿಧ ಸಮಸ್ಯೆಗಳನ್ನು ಚರ್ಚಿಸದೆ, ಬೇಡವಾದ ಚರ್ಚೆಗಳಿಗೆ ವೇದಿಕೆಯಾಗಿದ್ದು, ದೇಶದಲ್ಲಿ ಪರ್ಯಾಯ ರಾಜಕೀಯ ಚಿಂತನೆಯ ಅರಿವು ಬೆಳೆಸಬೇಕಾಗಿದೆ ಎಂದು ಐ ಕ್ಯಾನ್-19 ಅಭಿಯಾನಕ್ಕೆ ಸ್ವರಾಜ್ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಕರೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ನಡುವೆ ಕೋಮು ಸೌಹಾರ್ದತೆಯನ್ನು ಬಿಟ್ಟು 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಬೇಕಾಗಿಲ್ಲ. ನರೇಂದ್ರ ಮೋದಿಯಿರಲಿ ರಾಹುಲ್ ಗಾಂಧಿಯಿರಲಿ ದೇಶದ ಒಳಿತಿಗಾಗಿ ಶ್ರಮಿಸುವುದಿಲ್ಲ. ದೇಶದಲ್ಲಿ ಪ್ರಸ್ತುತ ರೈತರ ಸಮಸ್ಯೆ ಹಾಗೂ ನಿರುದ್ಯೋಗ ಸಮಸ್ಯೆ ಅಧಿಕವಾಗಿದ್ದು, ಈ ಸಮಸ್ಯೆಗಳ ಗಂಭೀರತೆಯನ್ನು ಪರಿಗಣಿಸಿ, ಇದರ ನಿವಾರಣೆಗೆ ಸ್ವರಾಜ್ಯ ಭಾರತ ಪಕ್ಷ ಶ್ರಮವಹಿಸಲಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ನಾಗರಿಕನೂ ದೇಶಕ್ಕಾಗಿ ಕೊಡುಗೆಯನ್ನು ನೀಡಲು ಸಿದ್ಧರಾಗಿದ್ದಾರೆ. ಆದರೆ, ರಾಷ್ಟ್ರದ ನಾಯಕರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿಲ್ಲ. ಹೀಗಾಗಿ, ನಾನು ಆರು ವರ್ಷಗಳಿಂದ ದೇಶದ ಪ್ರತಿ ಮೂಲೆ ಮೂಲೆಗಳಲ್ಲಿ ಪ್ರಯಾಣಿಸುತ್ತಿದ್ದೇನೆ, ಲೆಕ್ಕವಿಲ್ಲದಷ್ಟು ನಾಗರಿಕರನ್ನು ಭೇಟಿ ಮಾಡಿದ್ದೇನೆ. ದೇಶವನ್ನು ಬದಲಿಸಲು ನಾನು ವಿವಿಧ ಮಾರ್ಗಗಳನ್ನು ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಅನನ್ಯ ಶಕ್ತಿಯಿದೆ. ಈ ಶಕ್ತಿ ಅಸಹಾಯಕವಾಗಿದೆ. ರಾಷ್ಟ್ರದ ಬಗ್ಗೆ ಆಸಕ್ತಿಯನ್ನು ಹೊಂದಿರುವ ಲಕ್ಷಾಂತರ ಸ್ವಯಂ ಸೇವಕರು ತಮ್ಮ ಸ್ವ-ಶಕ್ತಿ ಮತ್ತು ಸ್ವ-ಆಸಕ್ತಿಯಿಂದ ರಚನಾತ್ಮಕವಾಗಿ ಕೆಲಸ ನಿರ್ವಹಿಸಲು ಸಿದ್ಧರಿದ್ದಾರೆ. ಆದರೆ ಜಾತಿ ಮತ್ತು ಧರ್ಮದ ಮುಂದೆ ದೇಶ ಇದೆ. ಚಿಂತಕರು ಪ್ರಸ್ತುತ ಸ್ಥಿತಿ ಕುರಿತು ಯೋಚಿಸಬೇಕಾದ ಅಗತ್ಯವಿದೆ ಎಂದು ನುಡಿದರು.

ಇಂದು ಸತ್ಯದ ಹಾದಿಯಲ್ಲಿ ನಡೆಯುವ ಪ್ರತಿಯೊಬ್ಬ ವ್ಯಕ್ತಿಯೂ ಏಕಾಂಗಿಯಾಗಿದ್ದಾನೆ. ಸಾಮಾಜಿಕ ಸುಧಾರಣೆಗಳ ಸಂಘಟನೆಗಳು ಕೇವಲ ಅಂಗಡಿಗಳಾಗಿ ಮಾರ್ಪಟ್ಟಿವೆ. ರಾಜಕೀಯ ಪಕ್ಷಗಳು ಕೇವಲ ಗಲಭೆ ಗುಂಪುಗಳಾಗಿ ಮಾರ್ಪಟ್ಟಿವೆ. ಸಿದ್ಧಾಂತಗಳು ಕೇವಲ ಮನಸ್ಸಿನ ಕಾರಾಗೃಹಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ದೇಶದ ನಾಗರಿಕರ ಶಕ್ತಿಯನ್ನು ಸಂಪರ್ಕಿಸುವ ಯಾವುದೇ ವೇದಿಕೆಯೂ ಇಲ್ಲ, ಅವರ ಕನಸುಗಳಿಗೆ ಸರಿ ಹೊಂದುವ ಯಾವುದೇ ಸಿದ್ಧಾಂತವೂ ಇಲ್ಲ. ದೇಶದ ನಾಗರಿಕರ ಶಕ್ತಿಯನ್ನು ಸಂಪರ್ಕಿಸುವ ಪ್ರಸ್ತಾವನೆಯು ಕೆಲವು ಜನರಿಗೆ ವಿಚಿತ್ರವಾಗಿ ಕಾಣಿಸಬಹುದು ಎಂದು ಯೋಗೇಂದ್ರ ಯಾದವ್ ಹೇಳಿದರು.

ಸ್ವರಾಜ್ ಭಾರತ ಪಕ್ಷಕ್ಕೆ ಸೇರಲಿಚ್ಛಿಸುವ ಸದಸ್ಯರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.swarajindia.org ಅನ್ನು ಹಾಗೂ ಮೊಬೈಲ್ ಸಂಖ್ಯೆ: 94489 05393 ಅನ್ನು ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಸದಸ್ಯೆ ಕಾವೇರಿ ಬೋಪಯ್ಯ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News