ಹೆಣ್ಣು ದ್ವಿತೀಯ ದರ್ಜೆ ಪ್ರಜೆಯಲ್ಲ: ಡಾ.ಸುಧಾ ಕಾಮತ್

Update: 2018-12-22 16:09 GMT

ಬೆಂಗಳೂರು, ಡಿ.22: ಪ್ರಸ್ತುತ ಕಾಲಘಟ್ಟದಲ್ಲೂ ಹೆಣ್ಣನ್ನು ದ್ವಿತೀಯ ದರ್ಜೆ ಪ್ರಜೆಯಂತೆ ಬಿಂಬಿಸಲಾಗುತ್ತಿದೆ. ಆದರೆ, ಈ ವಾತಾವರಣ ಬದಲಿಸಿ, ಸಮಾನ ಸ್ಥಾನಮಾನ ಪಡೆಯಬೇಕಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ರಾಷ್ಟ್ರೀಯ ಉಪಾಧ್ಯಕ್ಷೆ ಡಾ.ಸುಧಾ ಕಾಮತ್ ತಿಳಿಸಿದರು.

ಶನಿವಾರ ನಗರದ ಗಾಂಧಿಭವನದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ, ಮಹಿಳೆಯ ಘನತೆ ಮತ್ತು ಭದ್ರತೆಗಾಗಿ 6ನೆ ಜಿಲ್ಲಾ ಮಹಿಳಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಹಿಂದೆ ಊಳಿಗಮಾನ್ಯ ವಿಚಾರಗಳು ಗಾಢವಾಗಿತ್ತು. ಆದ್ದರಿಂದಲೇ ಸತಿ ಸಹಗಮನ ಪದ್ಧತಿ, ವಿಧವಾ ಕೇಶಮುಂಡನ ಮುಂತಾದ ಅಮಾನವೀಯ ಆವರಣೆಗಳು ಚಾಲ್ತಿಯಲ್ಲಿತ್ತು. ಆದರೆ, ಇಂದಿಗೂ ಕೂಡ ಹೆಣ್ಣುಮಕ್ಕಳನ್ನು ಎರಡನೇ ದರ್ಜೆ ಪ್ರಜೆಯನ್ನಾಗಿ ಕಾಣಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಪ್ರಗತಿಗಾಗಿ ಶ್ರಮಿಸಿದ ವಿದ್ಯಾಸಾಗರ್, ಸಾವಿತ್ರಿಬಾಯಿ ಫುಲೆ ಸೇರಿದಂತೆ ಮುಂತಾದವರ ವಿಚಾರಗಳನ್ನು ಹೆಣ್ಣು ಮಕ್ಕಳಿಗೆ ತಲುಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು, ಸಮಾಜದ ಪ್ರಗತಿಗೆ ಅಳತೆಗೋಲು ಎಂದರೆ ಅದು ಹೆಣ್ಣಿಗೆ ನೀಡುವ ಸ್ಥಾನ-ಮಾನ ಎಂದು ಅವರು ಅಭಿಪ್ರಾಯಪಟ್ಟರು.

ಎಸ್‌ಯುಸಿಐ(ಸಿ) ಬೆಂಗಳೂರು ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ಮಾತನಾಡಿ, ನಿರ್ಭಯಾದಂತಹ ಪ್ರಕರಣಗಳು, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಗಂಭೀರ ಹಲ್ಲೆಗಳು ಮತ್ತೊಮ್ಮೆ ಮರುಕಳಿಸಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಶೋಭಾ, ಜಿಲ್ಲಾಧ್ಯಕ್ಷೆ ಹರಿಣಿ ಆಚಾರ್ಯ, ಕಾರ್ಯದರ್ಶಿ ಹೇಮಾವತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News