ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯ

Update: 2018-12-22 16:31 GMT

ಬೆಂಗಳೂರು, ಡಿ.22: ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂದು ತುಳು ಎಂಟನೇ ಪರಿಚ್ಛೇದ ಹೋರಾಟ ಸಮಿತಿ ಒತ್ತಾಯಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಅಲೋಕ್ ರೈ, ತುಳು ಭಾಷೆಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದ್ದು, ತುಳುವರ ಸಾಧನೆ ಇಡೀ ಜಗತ್ಪ್ರಸಿದ್ಧವಾಗಿದೆ. ಈ ಭಾಷೆ 8ನೇ ಪರಿಚ್ಛೇದಕ್ಕೆ ಸೇರದಿರುವುದು ದುರಂತ. ರಾಜ್ಯದಲ್ಲಿ ತೆಲುಗು ವಿಶ್ವವಿದ್ಯಾಲಯ ಇದೆ. ತುಳು ವಿಶ್ವವಿದ್ಯಾಲಯ ನಿರ್ಮಾಣ ಏಕಿಲ್ಲ. ಇದಕ್ಕೆಲ್ಲಾ ಕಾರಣ ಸಂವಿಧಾನದಲ್ಲಿ ಮಾನ್ಯತೆ ಸಿಗದಿರುವುದು ಎಂದು ಬೇಸರ ವ್ಯಕ್ತಪಡಿಸಿದರು.

ತುಳು ಭಾಷೆಯ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಹಾಗೂ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡುತ್ತಿಲ್ಲ. ಏಕೆಂದರೆ ಪರಿಚ್ಛೇದಕ್ಕೆ ಸೇರಿಸಿಲ್ಲ ಎಂಬ ಕಾರಣಕ್ಕೆ. ಕನ್ನಡದಂತೆ ತುಳು ಪ್ರಾಧಿಕಾರ ರಚಿಸಬೇಕು. ಸರಕಾರದ ವ್ಯವಹಾರಗಳಲ್ಲೂ ಅಧಿಕೃತ ಭಾಷೆಯಾಗಿ ಘೋಷಿಸಬೇಕು. ಇದರಿಂದ ತುಳುವ ಸಾಂಸ್ಕೃತಿಕ, ಪ್ರಾಚೀನ ಮಧ್ಯ ಮತ್ತು ಸಮಕಾಲೀನ ಸಾಹಿತ್ಯ ಅನಾವರಣವಾಗಲಿದೆ ಎಂದು ಹೇಳಿದರು.

ದೇಶದ ಎಷ್ಟೋ ಭಾಷೆಗಳಿಗೆ ಇತಿಹಾಸವೇ ಇಲ್ಲ, ಅವುಗಳಿಗೆ ಸಂವಿಧಾನದಲ್ಲಿ ಮಾನ್ಯತೆ ದೊರೆಯುವುದಾದರೆ, 2000 ವರ್ಷ ಇತಿಹಾಸ ಉಳ್ಳ ತುಳು ಭಾಷೆಗೆ ಮಾನ್ಯತೆ ಏಕಿಲ್ಲ. ನಮಗೂ ಎಲ್ಲ ಸವಲತ್ತು ಬೇಕು. ಆದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೌನಕ್ಕೆ ಜಾರಿರುವುದು ಬೇಸರದ ಸಂಗತಿ ಎಂದರು.

ಪೋಸ್ಟ್ ಕಾರ್ಡ್‌ನಲ್ಲಿ ಅಭಿಯಾನ: ರಾಜ್ಯ ಹಾಗೂ ದೇಶ-ವಿದೇಶದ ಎಲ್ಲ ತುಳು ಸಂಘಟನೆಗಳು, ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ವಿನೂತನ ರೀತಿಯ ಪೋಸ್ಟ್ ಕಾರ್ಡ್ ಚಳುವಳಿ ಅಭಿಯಾನಕ್ಕೆ ಸಿದ್ಧತೆ ನಡೆಸಲಾಗಿದ್ದು, ಜನವರಿ ತಿಂಗಳಾದ್ಯಂತ ಎಲ್ಲ ಜನಪ್ರತಿನಿಧಿಗಳಿಗೆ ಪೋಸ್ಟ್ ಕಾರ್ಡ್‌ನಲ್ಲಿ ಅವರ ಮನೆ ವಿಳಾಸಕ್ಕೆ ಮತ್ತು ಕಾರ್ಯಾಲಯಕ್ಕೆ ‘ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಿ ಮತ್ತು ತುಳು ಭಾಷೆಯನ್ನು ಉಳಿಸಿ’ ಎಂದು ಬರೆದು ಅವರಲ್ಲಿ ಜಾಗೃತಿ ಮೂಡಿಸಲು ಚಿಂತನೆ ಮಾಡಲಾಗಿದೆ.

ಬೇಡಿಕೆಗಳು:

* ಕನ್ನಡ ಭಾಷೆಯಂತೆ ತುಳುವಿಗೂ ಒಂದು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು.

* ತುಳು ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು.

* ರಾಜ್ಯದ ಅಧಿಕೃತ ಭಾಷೆಯೆಂದು ಮಾನ್ಯತೆ ನೀಡಬೇಕು.

* ತುಳು ಲಿಪಿ ಅಭಿವೃದ್ಧಿಗೆ ಪ್ರೋತ್ಸಾಹ ಮತ್ತು ಪ್ರಾಚೀನ ಗ್ರಂಥಗಳನ್ನು ಸಂರಕ್ಷಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News