ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಜಿಎಲ್‌ಡಬ್ಲೂಎ ಆಗ್ರಹ

Update: 2018-12-22 16:32 GMT

ಬೆಂಗಳೂರು, ಡಿ.22: ಅತಿಥಿ ಉಪನ್ಯಾಸಕರನ್ನು ಖಾಯಂ ಅಥವಾ ಗುತ್ತಿಗೆ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಎಸ್.ಸಂತೋಷ್, ಕರ್ನಾಟಕ ಲೋಕ ಸೇವಾ ಆಯೋಗವು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಖಾಲಿಯಿರುವ ಕಿರಿಯ ತರಬೇತಿ ಅಧಿಕಾರಿ (ಜೆ.ಟಿ.ಓ) ಹುದ್ದೆಗಳಿಗೆ ಇದೇ 27ರಂದು ಪರೀಕ್ಷೆ ನಡೆಸುತ್ತಿದೆ. ಇದರಿಂದ ಆ ಸಂಸ್ಥೆಗಳಲ್ಲಿ ಅತಿಥಿ ಬೋಧಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಅನ್ಯಾಯವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಸದಸ್ಯ ಮೊಹಮ್ಮದ್ ಜಬೀಉಲ್ಲಾ ಮಾತನಾಡಿ, ಹದಿನೈದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಪರಿಗಣಿಸದೆ, ಏಕಾಏಕಿ ಈಗ ಖಾಲಿಯಿರುವ ಹುದ್ದೆಗಳ ಭರ್ತಿಗೆ ಮುಂದಾಗಿರುವುದು ಖಂಡನೀಯ. ಆ ಹುದ್ದೆಗಳಿಗೆ ಅನುಭವ ಹೊಂದಿರುವ ನಮ್ಮನ್ನೇಕೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೃಪಾಂಕ ಹಾಗೂ ಸೇವಾ ದೃಢೀಕರಣ ಪತ್ರ ನೀಡಿ, ಅದರ ಮೂಲಕ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಬರುವ ವೇತನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಸೇವಾ ಭದ್ರತೆ ಒದಗಿಸಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಅಡ್ಡಿಯಾಗುತ್ತಿದೆ. ಸರಕಾರಗಳು ಉರುಳುತ್ತಲೇ ಇರುತ್ತಿವೆ. ಆದರೆ, ನಮಗೆ ಮಾತ್ರ ನ್ಯಾಯ ದೊರೆಯುತ್ತಿಲ್ಲ. ಈ ಕುರಿತು ಮುಖ್ಯಮಂತ್ರಿಗಳಿಗೂ ಮನವಿ ಕೊಟ್ಟಿದ್ದೇನೆ. ಸರಕಾರ ಅನ್ಯಾಯ ಆಗಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಮಾನ್ಯತೆ ಕೊಡಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News