ಕೈದಿ ಬಳಿ ಹಣಕ್ಕೆ ಬೇಡಿಕೆ ಆರೋಪ: ಪೊಲೀಸರ ವಿರುದ್ಧ ಎಫ್‌ಐಆರ್

Update: 2018-12-24 18:36 GMT

ಬೆಂಗಳೂರು, ಡಿ.24: ಮೈಸೂರು ಕಾರಾಗೃಹದಿಂದ ಬೆಂಗಳೂರಿಗೆ ಕೈದಿ ಅನ್ನು ವಿಚಾರಣೆಗೆಂದು ಕರೆತರುವಾಗ ಮೈಸೂರು ನಗರ ಸಶಸ್ತ್ರ ಪೊಲೀಸರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

ಪೊಲೀಸರಾದ ಪಿ.ಸಿ.ಸತೀಶ್, ರಾಜೇಂದ್ರ ಹಾಗೂ ಶಿವಶಂಕರ್ ವಿರುದ್ಧ ಇಲ್ಲಿನ ಅಶೋಕ್ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿ.14 ರಂದು ವಿಚಾರಣೆ ಸಲುವಾಗಿ ನಗರದ ಮೆಯೋ ಹಾಲ್‌ನ ಸಿಟಿ ಸಿವಿಲ್ ಕೋರ್ಟ್‌ಗೆ ಯೂಸುಫ್ ಎಂಬುವರನ್ನು ಮೈಸೂರು ಕಾರಾಗೃಹದಿಂದ ಕರೆ ತರಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಆರೋಪಿ ಯೂಸುಫ್ ತನ್ನ ಸಹೋದರನಿಂದ 8 ಸಾವಿರ ಕೇಳಿ ಪೊಲೀಸರಿಗೆ ನೀಡಿದ್ದರು. ಆದರೂ, ಪೊಲೀಸ್ ಸಿಬ್ಬಂದಿ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟು ದೌರ್ಜನ್ಯವೆಸಗಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News