ಕಾಬೂಲ್ ಸರಕಾರಿ ಸಂಕೀರ್ಣದ ಮೇಲೆ ಗುಂಡಿನ ದಾಳಿ: 43 ಸಾವು

Update: 2018-12-25 15:26 GMT

ಕಾಬೂಲ್, ಡಿ. 25: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಸರಕಾರಿ ಸಂಕೀರ್ಣದಲ್ಲಿ ಗಂಟೆಗಳ ಕಾಲ ನಡೆದ ಗುಂಡಿನ ದಾಳಿ ಮತ್ತು ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಇದು ಈ ವರ್ಷ ಅಫ್ಘಾನಿಸ್ತಾನದಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ.

ಯಾವುದೇ ಭಯೋತ್ಪಾದಕ ಗುಂಪು ಈ ದಾಳಿಯ ಹೊಣೆ ಹೊತ್ತಿಲ್ಲ. ಈ ವರ್ಷ ಅಫ್ಘಾನಿಸ್ತಾನದಲ್ಲಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಭಾರೀ ಸಂಖ್ಯೆಯಲ್ಲಿ ಹತರಾಗಿದ್ದು, ರಕ್ತರಂಜಿತ ಘಟನೆಯೊಂದಿಗೆ ವರ್ಷ ಮುಕ್ತಾಯಗೊಳ್ಳುತ್ತಿದೆ.

ಲೋಕೋಪಯೋಗಿ ಸಚಿವಾಲಯ ಮತ್ತು ಇತರ ಕಚೇರಿಗಳು ಇದ್ದ ಸಂಕೀರ್ಣದ ಮೇಲೆ ಭಯೋತ್ಪಾದಕರು ಸೋಮವಾರ ನಡೆಸಿದ ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ.

ಮಹಡಿಯಿಂದ ಕೆಳಗೆ ಹಾರಿದ ಉದ್ಯೋಗಿಗಳು

ಬಂದೂಕುಧಾರಿಗಳು ಸೋಮವಾರ ಮಧ್ಯಾಹ್ನ ಸರಕಾರಿ ಕಚೇರಿಗಳ ಆವರಣದ ಪ್ರವೇಶ ದ್ವಾರದಲ್ಲಿ ಕಾರ್ ಬಾಂಬೊಂದನ್ನು ಸಿಡಿಸಿ ಒಳ ನುಗ್ಗಿದರು. ಆಗ ಭಯಗ್ರಸ್ತ ಸರಕಾರಿ ಉದ್ಯೋಗಿಗಳು ದಿಕ್ಕಾಪಾಲಾಗಿ ಓಡಿದರು. ಕೆಲವರು ಜೀವ ಉಳಿಸಿಕೊಳ್ಳುವುದಕ್ಕಾಗಿ ಹಲವು ಮಹಡಿಗಳ ಮೇಲಿನಿಂದ ಕೆಳಗೆ ಹಾರಿದರು.

ಶಸ್ತ್ರಸಜ್ಜಿತ ಭದ್ರತಾ ಪಡೆಗಳು ಕಟ್ಟಡವನ್ನು ಸುತ್ತುವರಿದು ಭಯೋತ್ಪಾದಕರೊಂದಿಗೆ ಹೋರಾಟ ಆರಂಭಿಸಿದಾಗ ನೂರಾರು ಜನರು ಕಟ್ಟಡದೊಳಗೆ ಸಿಕ್ಕಿಹಾಕಿಕೊಂಡರು.

ಆತ್ಮಹತ್ಯಾ ಬಾಂಬರ್ ಸೇರಿದಂತೆ ಕನಿಷ್ಠ ನಾಲ್ವರು ಉಗ್ರರು ಹತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News