ರೈಲ್ವೆ ಪ್ಲಾಟ್‍ಫಾರ್ಮ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2018-12-26 08:32 GMT

ಮುಂಬೈ, ಡಿ.26: ಕ್ರಿಸ್ಮಸ್ ಮುನ್ನಾ ದಿನದಂದು ಪುಣೆಗೆ ತೆರಳಲೆಂದು ತನ್ನ ಪತಿಯೊಂದಿಗೆ ದಾದರ್ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ತುಂಬು ಗರ್ಭಿಣಿ ಗೀತಾ ದೀಪಕ್ ವಗಾರೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ಆಕೆ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಮುಂಬೈ ಪೊಲೀಸರ ಸಹಾಯದಿಂದ ಮಗುವಿಗೆ ಜನ್ಮ ನೀಡಿದ್ದಾಳೆ.

ನಿಲ್ದಾಣದಲ್ಲಿ ಸಿಸಿಟಿವಿಯಲ್ಲಿ ಈ ಘಟನೆ ದಾಖಲಾಗಿದ್ದು ಮಹಿಳೆ ಪ್ಲಾಟ್ ಫಾರ್ಮ್ ನೆಲದಲ್ಲಿ ಮಲಗಿರುವುದು, ಆಕೆಯ ಪತಿ ಆಕೆಯ ಪಕ್ಕ ಕುಳಿತಿರುವುದು ಕಾಣಿಸುತ್ತದೆ. ಒಂದಿಬ್ಬರು ಪೊಲೀಸ್ ಸಿಬ್ಬಂದಿ ಹಾಗು ಕೆಲ ಇತರ ಮಂದಿ ಆಕೆಯ ಸುತ್ತ ನೆರೆದಿರುವುದು ಕಾಣಿಸುತ್ತದೆ. ಪೊಲೀಸರು ಹಾಗೂ ಸ್ಥಳದಲ್ಲಿ ನೆರೆದಿದ್ದವರು ಎರಡು ಬೆಡ್ ಶೀಟುಗಳನ್ನು ಅಡ್ಡಲಾಗಿ ಹಿಡಿದಿರುವುದೂ ಕಾಣಿಸುತ್ತದೆ.  ಗೀತಾ ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ  ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ತಾಯಿ, ಮಗು ಆರೋಗ್ಯದಿಂದಿದ್ದಾರೆಂದು ತಿಳಿದು ಬಂದಿದೆ.

ಇಂತಹುದೇ ಘಟನೆಯಲ್ಲಿ ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಭುಸವಾಲ್ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ನಲ್ಲಿ 27 ವರ್ಷದ ಮಹಿಳೆ ಸೆಪ್ಟೆಂಬರ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಜುಲೈ ತಿಂಗಳಲ್ಲಿ ಮುಂಬೈಯ ಕಲ್ಯಾಣ್ ರೈಲು ನಿಲ್ದಾಣದಲ್ಲಿ ರೈಲಿನೊಳಗಡೆಯೇ 30 ವರ್ಷದ ಮಹಿಳೆಯೊಬ್ಬರು ಅವಳಿ ಶಿಶುಗಳಿಗೆ ಜನ್ಮ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News