ಬಿಜೆಪಿ ತೊರೆಯಲಿರುವ ಹಿರಿಯ ನಾಯಕ ಏಕನಾಥ್ ಖಡ್ಸೆ ?

Update: 2018-12-26 08:51 GMT

ಮುಂಬೈ, ಡಿ.26: ಹಿರಿಯ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಕಂದಾಯ ಸಚಿವ ಏಕನಾಥ್ ಖಡ್ಸೆ ತಮ್ಮ ತವರು ಕ್ಷೇತ್ರದಲ್ಲಿ ಬಿಜೆಪಿಯ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದು, ಪಕ್ಷವನ್ನು ಅವರು ತೊರೆಯಬಹುದೆನ್ನುವ ಸುಳಿವು ನೀಡಿದ್ದಾರೆ.

ಮಹಾರಾಷ್ಟ್ರದ ಭುಸವಲ್ ಎಂಬಲ್ಲಿ ಲೇವಾ ಪಾಟೀಲ್ ಸಮುದಾಯದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಯಾರು ಕೂಡಾ ಒಂದು ನಿರ್ದಿಷ್ಟ ಪಕ್ಷದಲ್ಲಿ ಖಾಯಂ ಆಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ‘‘ಸಮುದಾಯವನ್ನು ಬಲಪಡಿಸಲು ಎಲ್ಲರೂ ಅನ್ಯಾಯದ ವಿರುದ್ಧ ಹೋರಾಡಬೇಕಿದೆ, ಆಗ ಮಾತ್ರ ಅವರಿಗೆ ನಮ್ಮ ಶಕ್ತಿಯ ಅರಿವಾಗುವುದು’’ಎಂದೂ ಅವರು ಹೇಳಿದರು.

‘‘ಒಗ್ಗಟ್ಟಿಗೆ ಯಾವುದೇ ಪರ್ಯಾಯವಿಲ್ಲ. ರಾಜಕೀಯವನ್ನು ಬದಿಗಿರಿಸಿ ಹೋರಾಡಬೇಕಿದೆ. ಅದು ನನ್ನ ಪಕ್ಷ (ಬಿಜೆಪಿ) ಯಾ ಅವರ (ಕಾಂಗ್ರೆಸ್) ಪಕ್ಷವಾಗಿರಬಹುದು, ಯಾರು ಕೂಡ ಖಾಯಂ ಆಗಿ ಒಂದೇ ಪಕ್ಷದಲ್ಲಿರಲು ಸಾಧ್ಯವಿಲ್ಲ’’ ಎಂದು ಖಡ್ಸೆ ಅಭಿಪ್ರಾಯ ಪಟ್ಟರು.

ಎಂಐಡಿಸಿ ಭೂ ಹಗರಣದಲ್ಲಿ ಶಾಮೀಲಾತಿ ಆರೋಪದ ಹಿನ್ನೆಲೆಯಲ್ಲಿ 2016ರಲ್ಲಿ ಅವರು ತಮ್ಮ ಸಚಿವ ಹುದ್ದೆ ತೊರೆಯಬೇಕಾಗಿ ಬಂದಿತ್ತು.

ಭುಸವಲ್ ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಉಲ್ಲಾಸ್ ಪಾಟೀಲ್, ಖಡ್ಸೆ ಅವರಿಗೆ ಕಾಂಗ್ರೆಸ್ ಸೇರಲು ಆಹ್ವಾನವಿತ್ತರಲ್ಲದೆ ಅವರಿಗೆ ಇಲ್ಲಿಯ ತನಕ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವಾಣ್ ಈಗಾಗಲೇ ಕಾಂಗ್ರೆಸ್ ಸೇರಲು ಖಡ್ಸೆಗೆ ಆಹ್ವಾನ ನೀಡಿದ್ದಾರೆ.

ಖಡ್ಸೆ ಮತ್ತು ಬಿಜೆಪಿಯ ಸಂಬಂಧ ಅಷ್ಟಕ್ಕಷ್ಟೇ ಎಂಬುದನ್ನು ಅವರ ಮೇಲಿನ ಹೇಳಿಕೆ ಸ್ಪಷ್ಟಪಡಿಸಿದೆ. ಇತ್ತೀಚೆಗೆ ನಡೆದ ಮುನಿಸಿಪಲ್ ಚುನಾವಣೆಗಳಲ್ಲಿ ಅವರನ್ನು ಅವರ ತವರು ಕ್ಷೇತ್ರದ ಜಲಗಾಂವ್ ಹಾಗೂ ಧುಳೆಯಲ್ಲಿ ಕಡೆಗಣಿಸಲಾಗಿತ್ತೆನ್ನಲಾಗಿದೆ. ಖಡ್ಸೆ ಅವರ ಕ್ಷೇತ್ರದಲ್ಲಿ ಮಹಾರಾಷ್ಟ್ರ ನೀರಾವರಿ ಸಚಿವ ಗಿರೀಶ್ ಮಹಾಜನ್ ಅವರ ಪ್ರಭಾವ ಬೆಳೆಯುತ್ತಿದ್ದು ಮಹಾಜನ್ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆತ್ಮೀಯರೆಂದೂ ಹೇಳಲಾಗಿದೆ. ಮಹಾಜನ್ ಹಾಗೂ ಖಡ್ಸೆ ಸಂಬಂಧ ಕೂಡ ಅಷ್ಟೊಂದು ಸೌಹಾರ್ದಯುತವಾಗಿಲ್ಲ.
.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News