ಬಣ್ಣ ಕರಗಿದ ತುತ್ತೂರಿ

Update: 2018-12-27 18:47 GMT

ಪಂಚ ರಾಜ್ಯಗಳ ಫಲಿತಾಂಶಗಳಿಂದ ನೀಲಿ ನರಿಯ ಬಣ್ಣ ಕರಗುತ್ತಿರುವಂತಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ವೈಫಲ್ಯಗಳ ಕುರಿತಂತೆ ಅವರ ಪಕ್ಷದ ನಾಯಕರೇ ಮಾತನಾಡಲು ಶುರುಹಚ್ಚಿದ್ದಾರೆ. ‘ನಮ್ಮ ನರಿ ಎಲ್ಲ ನರಿಗಳಂತಲ್ಲ, ಇದು ನೀಲಿ ನರಿ’ ಎಂದು ಜನರನ್ನು ನಂಬಿಸಿ, ಅವರ ಆಡಳಿತದ ಯಡವಟ್ಟುಗಳನ್ನೇ ಸಾಧನೆ ಎಂದು ಬಿಂಬಿಸುತ್ತಿದ್ದವರೆಲ್ಲ ಕಕ್ಕಾಬಿಕ್ಕಿಯಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯನ್ನು ಮೋದಿಯ ನೇತೃತ್ವದಲ್ಲಿ ಎದುರಿಸಬೇಕೇ ಬೇಡವೇ ಎನ್ನುವ ಸಂದಿಗ್ಧದಲ್ಲಿದೆ ಬಿಜೆಪಿ. ಒಂದು ವೇಳೆ ಮೋದಿಯನ್ನು ಬದಲಿಸಿದ್ದೇ ಆದರೆ, ಕಳೆದ ಅವಧಿಯಲ್ಲಿ ಸರಕಾರ ವಿಫಲವಾಗಿತ್ತು ಎನ್ನುವುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗುತ್ತದೆ. ಮೋದಿಯ ಸಾಧನೆಯನ್ನೇ ಮುಂದಿಟ್ಟು ಮತ ಯಾಚನೆ ಮಾಡಿದರೆ ಜನರು ಅದನ್ನು ನಂಬಿ ಮತ ಹಾಕುತ್ತಾರೆ ಎನ್ನುವ ವಿಶ್ವಾಸವೂ ಪಕ್ಷಕ್ಕಿಲ್ಲ. ಇಂತಹ ಸಂದರ್ಭದಲ್ಲಿ ನಿತಿನ್ ಗಡ್ಕರಿ ತನ್ನ ಧ್ವನಿಯನ್ನು ಎತ್ತರಿಸಿ ಮಾತನಾಡಿದ್ದಾರೆ.

ಈವರೆಗಿನ ಎಲ್ಲ ರಾಜ್ಯ ವಿಧಾನಸಭಾ ಚುನಾವಣೆಗಳ ಗೆಲುವನ್ನು ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಹೊತ್ತುಕೊಳ್ಳುತ್ತಿದ್ದರು. ಅಮಿತ್ ಶಾ ಅವರ ‘ಚಾಣಕ್ಯ ತಂತ್ರ’ಗಳನ್ನು ಮಾಧ್ಯಮಗಳು ವೈಭವೀಕರಿಸುತ್ತಿದ್ದವು. ಮೋದಿಯ ಆಡಳಿತದ ಸಾಧನೆಗಳಿಗಾಗಿ ಜನರು ಬಿಜೆಪಿಯನ್ನು ಗೆಲ್ಲಿಸಿದರು ಎಂದು ಬಣ್ಣಿಸಲಾಗುತ್ತಿತ್ತು. ಈ ಬಾರಿ ಪಂಚ ರಾಜ್ಯಗಳ ಚುನಾವಣೆಗಳಲ್ಲೂ ಮೋದಿ ಮತ್ತು ಅಮಿತ್ ಶಾ ಸಕ್ರಿಯವಾಗಿ ಭಾಗವಹಿಸಿದ್ದರು. ಪಂಚ ರಾಜ್ಯಗಳ ಸಾಧನೆ ಮುಂದಿನ ಲೋಕಸಭಾ ಚುನಾವಣೆಗೆ ಪೂರಕವಾಗಿರುತ್ತದೆ ಎನ್ನುವ ದೃಷ್ಟಿಯಿಂದ ಪ್ರಚಾರ ತಂತ್ರವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಬಿಜೆಪಿ ಹೀನಾಯ ಸೋಲನ್ನು ಕಂಡಿತು. ಗೆಲುವಿಗೆಲ್ಲ ನಾವೇ ವಾರಸುದಾರರು ಎಂದು ಬೀಗುತ್ತಿದ್ದ ಮೋದಿ ಮತ್ತು ಅಮಿತ್ ಶಾ ಮಾತ್ರ ಈ ಬಾರಿ ವೌನವಾಗಿದ್ದಾರೆ. ಸೋಲಿನ ಹೊಣೆಯಿಂದ ಜಾರಿಗೊಂಡಿದ್ದಾರೆ. ಅಷ್ಟೇ ಅಲ್ಲ, ಮೋದಿ ಕನಿಷ್ಠ ತನ್ನ ಆಡಳಿತದ ವೈಫಲ್ಯಗಳಲು ಇದು ನೆಪವಾಗಬೇಕಾಗಿತ್ತು. ಬದಲಿಗೆ ಮೋದಿಯವರು ದೇಶದ ಇಂದಿನ ಸ್ಥಿತಿಗೆ ನೆಹರೂ ಅವರನ್ನೇ ಹೊಣೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಜೊತೆಗೆ ನೋಟು ನಿಷೇಧದ ವೈಫಲ್ಯಗಳನ್ನು ಒಪ್ಪಿಕೊಳ್ಳದೆ ಅದನ್ನು ಸಾಧನೆಯೆಂದೇ ಜನರ ಮೇಲೆ ಹೇರಲು ಹೊರಟಿದ್ದಾರೆ. ನಿರುದ್ಯೋಗ, ನೋಟುಗಳ ಕೊರತೆ, ಹಣದುಬ್ಬರ, ತೈಲ ಬೆಲೆ ಏರಿಕೆ, ಗ್ರಾಮೀಣ ಉದ್ಯಮಗಳ ಮೇಲೆ ಮರ್ಮಾಘಾತ ಇವುಗಳ ಬಗ್ಗೆ ಕೇಳಿದರೆ, ಅದಕ್ಕೆ ಮೋದಿಯ ಬಳಿ ಇರುವ ಉತ್ತರ ‘ನೆಹರೂ’. ಬೃಹದೆತ್ತರದ ಪಟೇಲ್ ಪ್ರತಿಮೆ, ಶಿವಾಜಿ ಪಾರ್ಕ್, ಅಟಲ್ ಪ್ರತಿಮೆಗಳು ಈ ದೇಶದ ಜನಜೀವನವನ್ನು ಉದ್ಧರಿಸಲಾರವು ಎನ್ನುವುದು ಅವರಿಗಿನ್ನೂ ಮನವರಿಕೆಯಾದಂತಿಲ್ಲ. ಇಂತಹ ಹೊತ್ತಿನಲ್ಲೇ, ನಿತಿನ್ ಗಡ್ಕರಿ ‘‘ಬಿಜೆಪಿ ವೈಫಲ್ಯಕ್ಕೆ ಪಕ್ಷಾಧ್ಯಕ್ಷರೇ ಹೊಣೆ’’ ಎಂಬ ಮಾತುಗಳನ್ನು ಆಡಿದ್ದಾರೆ.

 ‘‘ಒಂದು ವೇಳೆ ನಾನು ಪಕ್ಷಾಧ್ಯಕ್ಷನಾಗಿದ್ದಲ್ಲಿ ಮತ್ತು ನನ್ನ ಪಕ್ಷದ ಶಾಸಕರು ಹಾಗೂ ಸಂಸದರು ಚೆನ್ನಾಗಿ ಕಾರ್ಯನಿರ್ವಹಿಸದೇ ಇದ್ದಲ್ಲಿ ಅದಕ್ಕೆ ನಾನು ಹೊಣೆಗಾರನಾಗುತ್ತೇನೆ. ಅವರಿಗೆ ಚೆನ್ನಾಗಿ ತರಬೇತಿ ನೀಡುವಲ್ಲಿ ನಾನು ವಿಫಲನಾಗಿದ್ದೇನೆ ಎಂದು ಅದರ ಅರ್ಥ’’ ಎಂದಿರುವ ನಿತಿನ್ ಗಡ್ಕರಿ ಈ ಮೂಲಕ, ಕಳೆದ ಪಂಚ ರಾಜ್ಯಗಳ ಚುನಾವಣೆಯ ವೈಫಲ್ಯಕ್ಕೆ ಅಮಿತ್ ಶಾ ಹೊಣೆಗಾರರು ಎಂದು ಹೇಳಿದ್ದಾರೆ. ಅಂದರೆ ಪಕ್ಷ ಸಂಘಟನೆಯಲ್ಲಿ ಅಮಿತ್ ಶಾ ವಿಫಲರಾಗಿದ್ದಾರೆ ಎನ್ನುವುದನ್ನು ಅವರ ಮಾತಿನ ನೇರ ಅರ್ಥ. ಅಮಿತ್ ಶಾ ಅವರ ಜೊತೆ ಜೊತೆಗೆ ಇದು ನರೇಂದ್ರಮೋದಿಗೆ ಮುಜುಗರ ತರುವ ಮಾತುಗಳಾಗಿವೆ. ಗಡ್ಕರಿ ಅವರು ಮೋದಿ ಮತ್ತು ಅಮಿತ್ ಶಾ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನುವುದನ್ನು ಈ ಹೇಳಿಕೆ ಸ್ಪಷ್ಟಪಡಿಸುತ್ತದೆ. ಅಂದರೆ ಮೊದಲ ಬಾರಿಗೆ ಬಿಜೆಪಿಯು, ಮೋದಿ ಪಕ್ಷಕ್ಕೆ ಅನಿವಾರ್ಯ ಎನ್ನುವ ಮನಸ್ಥಿತಿಯಿಂದ ಹೊರಬರುವ ಪ್ರಯತ್ನವನ್ನು ಮಾಡುತ್ತಿದೆ. ಮೋದಿ ಮತ್ತು ಅಮಿತ್ ಶಾ ವಿರುದ್ಧ ಮಾತನಾಡಲಾಗದೆ ಉಸಿರುಗಟ್ಟಿದಂತಹ ಸ್ಥಿತಿಯಲ್ಲಿರುವ ಹಲವು ಬಿಜೆಪಿ ನಾಯಕರಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಅವರೆಲ್ಲ ಗಡ್ಕರಿ ಜೊತೆಗೆ ಸೇರಿಕೊಳ್ಳುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ಬಿಜೆಪಿಯನ್ನು ಕಟ್ಟಿ ನಿಲ್ಲಿಸಿದ ಹಿರಿಯ ನಾಯಕರನ್ನು ಮೋದಿ ಮತ್ತು ಅಮಿತ್ ಶಾ ಅವಮಾನಿಸುತ್ತಿದ್ದಾರೆ ಎನ್ನುವ ಅಸಮಾಧಾನ ತಳಮಟ್ಟದ ಕಾರ್ಯಕರ್ತರಲ್ಲೂ ಭುಗಿಲೆದ್ದಿದೆ. ಇವೆಲ್ಲವೂ ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿಯನ್ನು ಬೃಹದಾಕಾರವಾಗಿ ಕಾಡಲಿದೆ.

ಬಿಜೆಪಿಯೊಳಗೆ ಮಾತ್ರವಲ್ಲ ಎನ್‌ಡಿಎಯೊಳಗೂ ಮೋದಿ ಮತ್ತು ಅಮಿತ್ ಶಾ ವಿರುದ್ಧ ಅಸಮಾಧಾನವೆದ್ದಿದೆ. ಹಲವು ಮಿತ್ರ ಪಕ್ಷಗಳು ಮೋದಿಗೆ ಬದಲಿ ನಾಯಕನ ನಿರೀಕ್ಷೆಯಲ್ಲಿವೆ. ಮೋದಿಯ ಜನವಿರೋಧಿ ಆಡಳಿತ ಮುಂದಿನ ಚುನಾವಣೆಯ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುವ ಬಗ್ಗೆ ಅವುಗಳು ಆತಂಕಗೊಂಡಿವೆ. ಮೋದಿಯ ವರ್ಚಸ್ಸು ದುರ್ಬಲಗೊಂಡಿರುವುದರಿಂದ ಮಿತ್ರ ಪಕ್ಷಗಳು, ಹೆಚ್ಚು ಸ್ಥಾನಗಳನ್ನು ತಮಗೆ ನೀಡಬೇಕು ಎಂದು ಪಟ್ಟು ಹಿಡಿದಿವೆ. ಮಹಾರಾಷ್ಟ್ರದಲ್ಲಂತೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆಯ ಜೊತೆಗೆ ಮೈತ್ರಿ ನಡೆಯುವುದೇ ಇಲ್ಲವೇನೋ ಎಂಬ ಮಟ್ಟಿಗೆ ಭಿನ್ನಾಭಿಪ್ರಾಯ ಬೆಳೆದಿದೆ. ಮೋದಿ ನಾಯಕತ್ವದ ವಿರುದ್ಧ ಆರಂಭದಿಂದಲೂ ಕತ್ತಿ ಮಸೆಯುತ್ತಿರುವ ಶಿವಸೇನೆ, ಪಂಚ ರಾಜ್ಯಗಳ ಬಿಜೆಪಿಯ ವೈಫಲ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಹೊರಟಿದೆ. ಮೋದಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಕುರಿತಂತೆ ಶಿವಸೇನೆಯೂ ಒಳಗಿಂದೊಳಗೆ ಒತ್ತಡಗಳನ್ನು ಹಾಕುತ್ತಿದೆ.

ಸದ್ಯಕ್ಕೆ ನಿತಿನ್ ಗಡ್ಕರಿಯವರು ಮೋದಿಗೆ ಪರ್ಯಾಯವಾಗಿ ಚಲಾವಣೆಯಲ್ಲಿದ್ದಾರೆ. ತನ್ನ ರಾಜಕೀಯ ಮುತ್ಸದ್ದಿತನದ ಕಾರಣದಿಂದ ರಾಜನಾಥ್ ಸಿಂಗ್ ಕೂಡ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಯೋಗ್ಯ ಆಯ್ಕೆಯಾಗಬಲ್ಲರು. ಗಡ್ಕರಿಯ ಮೇಲೆ ವ್ಯಾಪಕ ಭ್ರಷ್ಟಾಚಾರದ ಆರೋಪವಿದೆ. ಆ ಆರೋಪವೇ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿತ್ತು. ಇದೀಗ ಪ್ರಧಾನಮಂತ್ರಿ ಸ್ಥಾನಕ್ಕೆ ಅವರ ಹೆಸರು ಮುನ್ನೆಲೆಗೆ ಬಂದರೆ, ಅವರ ಮೇಲಿರುವ ಆರೋಪಗಳೂ ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ. ತನ್ನ ಮುಂದಿರುವ ಈ ಎಲ್ಲ ಸವಾಲುಗಳಿಂದ ಹತಾಶೆಗೊಂಡಂತಿರುವ ಮೋದಿ, ಇದೀಗ ತನ್ನ ಹಳೆಯ ತಂತ್ರವನ್ನು ಬಳಸಲು ಮುಂದಾಗಿರುವುದು ಸ್ಪಷ್ಟ. ಅದರ ಭಾಗವಾಗಿ, ಎನ್‌ಐಎ ಹತ್ತು ಉಗ್ರರನ್ನು ಬಂಧಿಸಿದೆ. ಮುಂದಿನ ದಿನಗಳಲ್ಲಿ ಮೋದಿಯನ್ನು ಹತ್ಯೆಗೈಯಲು ಹೊರಟ ಇನ್ನಷ್ಟು ಸಂಚುಗಳು ಎನ್‌ಐಎ ಬಯಲುಗೊಳಿಸಬಹುದು. ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ ಎನ್ನುವಷ್ಟರಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಸ್ಫೋಟಗಳು ನಡೆದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಈ ಬಾರಿಯೂ ಚುನಾವಣೆಯಲ್ಲಿ ‘ಎನ್‌ಐಎ’ ‘ಶಂಕಿತ ಉಗ್ರರು’ ಎಂಬಿತ್ಯಾದಿಗಳ ನೆರವನ್ನು ಪಡೆಯುವುದು ಮೋದಿಯವರಿಗೆ ಅನಿವಾರ್ಯವಾಗಿ ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News