ಗಿರೀಶ್ ಕಾರ್ನಾಡ್ ಕನ್ನಡಕ್ಕಷ್ಟೇ ಸೀಮಿತಗೊಳ್ಳದ ಇಡೀ ಭಾರತದ ನಾಟಕಕಾರ: ಅಗ್ರಹಾರ ಕೃಷ್ಣಮೂರ್ತಿ

Update: 2018-12-28 16:00 GMT

ಬೆಂಗಳೂರು, ಡಿ.28: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ಕನ್ನಡಕಷ್ಟೇ ಸೀಮಿತಗೊಳ್ಳದೇ ಇಡೀ ಭಾರತದ ನಾಟಕಕಾರರಾಗಿ ಹೊರ ಹೊಮ್ಮಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ, ಲೇಖಕ ಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದಾರೆ.

ಶುಕ್ರವಾರ ನಗರದ ಕಸಾಪದಲ್ಲಿ ಸದ್ಭಾವನಾ ಪ್ರತಿಷ್ಠಾನದ ವತಿಯಿಂದ ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಸಂದ ಸುವರ್ಣ ಸಂಭ್ರಮದ ಅಂಗವಾಗಿ ‘ಡಾ.ಗಿರೀಶ್ ಕಾರ್ನಾಡ್‌ರ ನಾಟಕಗಳು ಮತ್ತು ಜೀವನ ಕುರಿತ ಚಿಂತನೆ’ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗಿರೀಶ್ ಕಾರ್ನಾಡ್ ನಾಟಕಗಳ ವಸ್ತುವಿನ ಬಗ್ಗೆ ಎಂದೂ ತಲೆಕೆಡಿಸಿಕೊಂಡವರಲ್ಲ. ಬದಲಿಗೆ, ನಾಟಕದ ಕಲೆಗೆ ಒತ್ತು ನೀಡಿದವರಾಗಿದ್ದಾರೆ. ಭಾರತದ ಇತರೆ ಭಾಷೆಗಳಲ್ಲಿ ಬರೆಯುವ ಹಲವು ನಾಟಕಕಾರರಿದ್ದರೂ, ಕಾರ್ನಾಡ್ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಭಾರತದ ನಾಟಕಕಾರ ಎನ್ನಬಹುದು ಎಂದು ಹೇಳಿದರು.

ಒಂದು ನಾಟಕದ ಸಾಹಿತ್ಯ ರಂಗಭೂಮಿಯಲ್ಲಿ ಪ್ರಯೋಗಗಳ ಮೂಲಕ ಅದರ ಯಶಸ್ಸನ್ನು ಅಳಿಯಲಾಗುತ್ತದೆ. ಹೀಗಾಗಿ, ಪ್ರೇಕ್ಷಕರನ್ನು ಹೇಗೆ ಪ್ರತಿಸ್ಪಂದಿಸಬೇಕು ಎಂಬುದು ಲೇಖಕರ ಮನಸ್ಸಿನಲ್ಲಿರಬೇಕು. ಕಾರ್ನಾಡ್‌ರ ನಾಟಕಗಳಲ್ಲಿ ಇಂತಹ ಸೂಕ್ಷ್ಮತೆಗಳನ್ನು ಒಳಗೊಂಡಿವೆ. ಸವಾಲುಗಳನ್ನು ಎದುರಿಸಿ ಸತತ ನಾಟಕ ಬರೆಯುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದರು ಎಂದು ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.

ಕಾದಂಬರಿಗಳನ್ನು ಎಂಟು ದಿನಗಳಿಂದ ಆರಂಭಗೊಂಡು ಆರು ತಿಂಗಳವರೆಗೂ ಸಮಾಧಾನದಿಂದ ಓದಬಹುದು. ಆದರೆ, ನಾಟಕದ ಕಥೆ ಎರಡು ಅಥವಾ ಒಂದೂವರೆ ಗಂಟೆಯೊಳಗೆ ಪ್ರೇಕ್ಷಕರ ಮನಸ್ಸಿಗೆ ತಲುಪಬೇಕು. ಎಲ್ಲವೂ ಕಥಾವಸ್ತುವಾಗದೇ ಯಾವ ವಿಷಯವನ್ನು ಜನರಿಗೆ ಮುಟ್ಟಿಸಬೇಕು ಎಂಬುದನ್ನು ಬರಹಗಾರರು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ನುಡಿದರು.

ಜೀವನದಲ್ಲಿ ಎಂದೂ ವಿವಾದಗಳಿಗೆ ದಾರಿ ಮಾಡಿಕೊಟ್ಟಿಲ್ಲ. ಹಿರಿಯ ನಾಟಕಕಾರ ನೈಪಾಲ್ ಮುಸ್ಲಿಮ್‌ರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದರು ಎಂಬ ಕಾರಣಕ್ಕೆ ಅವರನ್ನು ಬೈದಿದ್ದರು. ಟಿಪ್ಪು ವಿರುದ್ಧ ವಾದ-ವಿವಾದ ಸೃಷ್ಟಿಯಾದಾಗ ಟಿಪ್ಪು ಪರವಾಗಿ ನಿಂತು ನಾಟಕ ರಚಿಸಿದ್ದರು. ಇತ್ತೀಚಿಗೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ವರ್ಷದ ನೆನಪಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಅರ್ಬನ್ ನಕ್ಸಲ್ ಎಂಬ ಬೋರ್ಡ್ ಹಾಕಿಕೊಂಡಿದ್ದರು. ಹೀಗೆ ಜೀವಪರವಾಗಿ ಜೀವನ ನಡೆಸಿದವರು ಕಾರ್ನಾಡ್ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ನಲ್ಲೂರ್ ಪ್ರಸಾದ್, ಪ್ರಾಧ್ಯಾಪಕ ಡಾ.ಬಿ.ಸಿ.ನಾಗೇಂದ್ರಕುಮಾರ್, ತೇಜಸ್ವಿ ಕನ್ನಡ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಬಿ.ಎ.ಅನ್ನದಾನೇಶ್ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಉಪಸ್ಥಿತರಿದ್ದರು.

ಗಿರೀಶ್ ಕಾರ್ನಾಡ್‌ರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ನನಗಿಂತ ಮೊದಲು ಹಿರಿಯರಾದ ಲಂಕೇಶ್, ಕಂಬಾರರಿಗೆ ಜ್ಞಾನಪೀಠ ಸಿಗಬೇಕು ಎನ್ನುವ ಮೂಲಕ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ನಾಟಕಕಾರರಾಗಿ ಅಲ್ಲದೆ, ಜೀವನದಲ್ಲಿ ತಮ್ಮ ಪರಿಮಿತಿಯೊಳಗೆ ಯಶಸ್ಸು ಸಾಧಿಸುವುದು ಹೇಗೆ ಎಂಬುದನ್ನು ಕಾರ್ನಾಡ್ ಜೀವನದಲ್ಲಿ ಕಾಣಬಹುದು.

-ಅಗ್ರಹಾರ ಕೃಷ್ಣಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News