ಕೋರೆಗಾಂವ್ ವಿಜಯ: ಸರಕಾರಕ್ಕೇಕೆ ಭಯ?

Update: 2019-01-01 05:27 GMT

ಇಂದು ಕೋರೆಗಾಂವ್ ವಿಜಯೋತ್ಸವ ದಿನ. ಎಂದಿನಂತೆಯೇ ಈ ದೇಶದ ಸಹಸ್ರಾರು ದಲಿತರು ಕೋರೆಗಾಂವ್ ವೀರ ಸ್ತಂಭಕ್ಕೆ ತಮ್ಮ ಗೌರವವನ್ನು ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಕೋರೆಗಾಂವ್ ಸುತ್ತ ಪೊಲೀಸರು ನೆರೆದಿದ್ದಾರೆ. ಕೋರೆಗಾಂವ್ ವಿಜಯೋತ್ಸವವನ್ನು ತಡೆದೇ ಸಿದ್ಧ ಎಂದು ಸರಕಾರ ಹಟ ತೊಟ್ಟಂತಿದೆ. ಕಳೆದ ವರ್ಷ ಸಂಘಪರಿವಾರ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕೋರೆಗಾಂವ್ ದಿನಾಚರಣೆಗೆ ಹೊರಟ ದಲಿತರ ಮೇಲೆ ಎರಗಿತ್ತು. ಜೊತೆಗೆ ಈ ಆಚರಣೆಯಲ್ಲಿ ಭಾಗವಹಿಸಿದ ನಾಯಕರ ಮೇಲೆ ಸರಕಾರ ವಿವಿಧ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ತಳ್ಳಿದೆ. ಈ ವರ್ಷ ಕೋರೆಗಾಂವ್ ಸುತ್ತ ಪೊಲೀಸರ ಕೋಟೆಯನ್ನೇ ನಿರ್ಮಿಸಿದೆ. ದಲಿತರು ಈ ಕೋಟೆಯನ್ನು ಮೀರಿ ತಮ್ಮ ಆತ್ಮಾಭಿಮಾನದ ಸಂಕೇತವಾಗಿರುವ ಕೋರೆಗಾಂವ್ ಸ್ತಂಭವನ್ನು ತಲುಪಲು ಯಶಸ್ವಿಯಾಗುತ್ತಾರೆಯೇ ಎನ್ನುವುದು ಕುತೂಹಕರವಾಗಿದೆ.

ಕೋರೆಗಾಂವ್ ವೀರಸ್ತಂಭಕ್ಕೆ ಗೌರವ ಸಲ್ಲಿಸುವ ಪರಿಪಾಠವನ್ನು ಜನವರಿ 1, 1927ರಲ್ಲಿ ಅಂಬೇಡ್ಕರ್ ಆರಂಭಿಸಿದರು. ಮೊದಲ ಬಾರಿಗೆ ಅವರು ತನ್ನ ಅನುಯಾಯಿಗಳ ಜೊತೆಗೆ ಭೀಮಾ ಕೋರೆಗಾಂವ್‌ಗೆ ತೆರಳಿ ಸಣ್ಣ ಸಮಾವೇಶದ ಮೂಲಕ ಹುತಾತ್ಮರಾಗಿರುವ ದಲಿತ ಮಹಾರ್ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದರು. ಈ ದೇಶದ ದಲಿತರ ಪಾಲಿಗೆ ಕೋರೆಗಾಂವ್ ವಿಜಯ ಆತ್ಮಾಭಿಮಾನದ ಸಂಕೇತ ಎನ್ನುವುದನ್ನು ತಿಳಿಸಿಕೊಟ್ಟವರೇ ಅಂಬೇಡ್ಕರ್. ಕೇವಲ 500 ಮಂದಿ ಮಹಾರ್ ದಲಿತರು 20 ಸಾವಿರಕ್ಕೂ ಅಧಿಕವಿದ್ದ ಪೇಶ್ವೆ ಎರಡನೇ ಬಾಜೀರಾಯನ ಸೇನೆಯನ್ನು ಸೋಲಿಸಿದ ದಿನ ಅದು. ಅಸ್ಪಶ್ಯರೆಂದು ಗುರುತಿಸಿಕೊಂಡ ಜನರು ಈ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪೇಶ್ವೆಗಳ ಜಾತೀಯತೆಯ ವಿರುದ್ಧ ಪಡೆದ ಗೆಲುವಾಗಿದೆ ಕೋರೆಗಾಂವ್ ದಿನ. ಆದರೆ ಈ ವಿಜಯದಿನದ ಮೇಲೆ ಸರಕಾರದ ಕೆಂಗಣ್ಣು ಬಿದ್ದಿದೆ. ಸಂಘಪರಿವಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಈ ಕೋರೆಗಾಂವ್ ವಿಜಯ ದಿನ ಯಾಕೆ ಅಪಥ್ಯವಾಗಿದೆ ಎನ್ನುವುದು ಇತಿಹಾಸ ಅರಿತ ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಆರೆಸ್ಸೆಸ್ ಮತ್ತು ಸಂಘಪರಿವಾರ ಯಾವ ಚಿಂತನೆಯನ್ನು ದೇಶದ ಮೇಲೆ ಹೇರಲು ಹವಣಿಸುತ್ತಿದೆಯೋ ಆ ಚಿಂತನೆಯ ವಿರುದ್ಧ ದಲಿತರು ವಿಜಯ ಸಾಧಿಸಿದ ದಿನ ಇದಾಗಿರುವುದು ಎನ್ನುವ ಕಾರಣಕ್ಕೇ ಇದರ ಆಚರಣೆಯನ್ನು ಸರ್ವ ರೀತಿಯಲ್ಲಿ ಸರಕಾರ ತಡೆಯಲು ಹವಣಿಸುತ್ತಿದೆ. ಕೋರೆಗಾಂವ್ ಇತಿಹಾಸ ಮನುವಾದಿಗಳ ಪಾಲಿಗೆ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡವಾಗಿದೆ. ಆದುದರಿಂದ, ಆ ಇತಿಹಾಸದ ಸ್ಮರಣೆಯನ್ನೇ ಜನರ ನಡುವಿನಿಂದ ಇಲ್ಲವಾಗಿಸುವ ಪ್ರಯತ್ನ್ನ ಸರಕಾರದ ಪ್ರಾಯೋಜಕತ್ವದಲ್ಲಿ ನಡೆಯುತ್ತಿದೆ.

 ಭಾರತದ ಇತಿಹಾಸದಲ್ಲಿ ಆಗಿ ಹೋಗಿರುವ ಮಹಾನ್ ರಾಜರಲ್ಲಿ ಶಿವಾಜಿಯೂ ಒಬ್ಬ. ಇಂದು ಈ ಶಿವಾಜಿಯನ್ನು ಮುಂದಿಟ್ಟುಕೊಂಡು ಸಂಘಪರಿವಾರ ಹಿಂದುತ್ವದ ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಿದೆ. ಶಿವಾಜಿ ಎಂಬ ನಾಯಕನನ್ನು ಮುಂದಿಟ್ಟು ಮೊಗಲರ ವಿರುದ್ಧ ಹೋರಾಡಿದವರು ಈ ದೇಶದ ಮುಸ್ಲಿಮರು ಮತ್ತು ದಲಿತರು ಎನ್ನುವ ಕಟು ಸತ್ಯವನ್ನು ಅಳಿಸಿ ಹಾಕುವ ಪ್ರಯತ್ನದಲ್ಲಿ ಆರೆಸ್ಸೆಸ್ ಭಾಗಶಃ ಯಶಸ್ವಿಯಾಗಿದೆ. ಶಿವಾಜಿಯ ಮುಖವನ್ನು ಮುಂದಿಟ್ಟುಕೊಂಡು ಸಂಘಪರಿವಾರ ಜಾರಿಗೆ ತರಲು ಹೊರಟಿರುವುದು ಪೇಶ್ವೆಗಳ ರಾಷ್ಟ್ರೀಯತೆಯನ್ನು ಎನ್ನುವ ಅಂಶವನ್ನು ನಾವಿಂದು ಅರಿತುಕೊಳ್ಳುವುದು ಈ ಹಿನ್ನೆಲೆಯಲ್ಲಿ ಅತ್ಯಗತ್ಯವಾಗಿದೆ. ಒಂದು ಕಾಲದಲ್ಲಿ ಶಿವಾಜಿಯ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಪೇಶ್ವೆಗಳು ಬಳಿಕ ಅವನ ವಂಶಸ್ಥರ ಕೈಯಿಂದ ಸಾಮ್ರಾಜ್ಯವನ್ನು ಕಿತ್ತು, ತಾವೇ ರಾಜ್ಯಭಾರ ನಡೆಸಿದರು. ದೇಶಾದ್ಯಂತ ಲೂಟಿ, ಹಿಂಸೆ ಕ್ರೌರ್ಯಗಳಿಗೆ ಪೇಶ್ವೆಗಳು ಕುಖ್ಯಾತರಾಗಿದ್ದರು. ಮಠ ಮಂದಿರಗಳನ್ನೂ ಬಿಡದೆ ಇವರ ಸೇನೆ ಲೂಟಿ ಮಾಡಿತು. ಕರ್ನಾಟಕದಲ್ಲಿ ಶೃಂಗೇರಿ ಮಠದ ಮೇಲೆ ನಡೆದ ದಾಳಿ, ಪಶ್ಚಿಮಬಂಗಾಳದಲ್ಲಿ ಪೇಶ್ವೆಗಳು ನಡೆಸಿದ ಕ್ರೌರ್ಯ ಕುಖ್ಯಾತವಾಗಿದೆ. ಮೊಗಲರ ವಿರುದ್ಧ ಶಿವಾಜಿ ಸೇನೆ ಕಟ್ಟಿದಾಗ ಆತನ ಜೊತೆಗೆ ಬಲವಾಗಿ ನಿಂತವರು ದಲಿತರು ಮತ್ತು ಮುಸ್ಲಿಮರೇ ಆಗಿದ್ದಾರೆ. ಶಿವಾಜಿ ಮರಾಠಾ ಸಮುದಾಯದವನಲ್ಲ. ಭೋಸಲೆ ಎನ್ನುವ ಕೆಳ ಸಮುದಾಯಕ್ಕೆ ಸೇರಿದ ಶಿವಾಜಿ ತನ್ನ ಸೇನೆಯಲ್ಲಿ ಮುಸ್ಲಿಮರು, ಕೋಳಿ, ಭಂಡಾರಿ, ಮಹಾರ್, ಶೆಣವಿ ಸೇರಿದಂತೆ 56 ಬಗೆಯ ಕೆಳಜಾತಿಗಳ ಜನರನ್ನು ಸೇರಿಸಿಕೊಂಡಿದ್ದ. ಆತನ ಪ್ರಮುಖ ಹನ್ನೊಂದು ದಂಡನಾಯಕರೂ ಮುಸ್ಲಿಮರೇ ಆಗಿದ್ದರು. 1672ರಲ್ಲಿ ಬ್ರಿಟಿಷ್ ರಾಣಿಗೆ ಇಂಗ್ಲಿಷ್ ಅಧಿಕಾರಿ ಜಾನ್‌ಫೈರ್ ಬರೆದ ಪತ್ರದಲ್ಲಿ, ಶಿವಾಜಿಯ ಸೇನೆಯಲ್ಲಿ 66 ಸಾವಿರ ಮುಸ್ಲಿಮ್ ಸೈನಿಕರಿರುವುದನ್ನು ಉಲ್ಲೇಖಿಸಿದ್ದಾರೆ.

ಶಿವಾಜಿಯ ಖಾಸಾ ಅಂಗರಕ್ಷಕರಲ್ಲಿ ಹನ್ನೊಂದು ಜನ ಮುಸ್ಲಿಮರಿದ್ದರು ಎನ್ನುವುದೇ ಆತ ಮೊಗಲರ ವಿರುದ್ಧದ ಯುದ್ಧದಲ್ಲಿ ಯಾರನ್ನು ನಂಬಿದ್ದ ಎನ್ನುವುದನ್ನು ಹೇಳುತ್ತದೆ. ಅಫ್ಝಲ್ ಖಾನ್‌ನನ್ನು ಭೇಟಿಯಾಗಲು ಹೊರಟಾಗ ಆತನ ಅಂಗರಕ್ಷಕರಾಗಿದ್ದವರಲ್ಲಿ ಒಬ್ಬ ಮುಸ್ಲಿಮನಾಗಿದ್ದರೆ ಇನ್ನೊಬ್ಬ ದಲಿತ. ಅಫ್ಝಲ್‌ಖಾನ್‌ನ ಅಂಗರಕ್ಷಕರಲ್ಲಿ ಒಬ್ಬಾತ ಕುಲಕರ್ಣಿ. ಈತ ಹಿಂದಿನಿಂದ ಶಿವಾಜಿಯ ಮೇಲೆ ಎರಗಲು ಹೊರಟಾಗ ಆತನನ್ನು ಕೊಂದವನು ಶಿವಾ ಎಂಬ ದಲಿತ ಅಂಗರಕ್ಷಕ. ಸಂತ ತುಕಾರಾಮರು ಇದಕ್ಕಾಗಿಯೇ ತಮ್ಮ ಅಭಂಗದಲ್ಲಿ ಹೇಳುತ್ತಾರೆ, ‘ಶಿವಾ ಇಲ್ಲದಿದ್ದರೆ ಶಿವಾಜಿ ಎಲ್ಲಿರುತ್ತಿದ್ದ?’. ಇದೇ ಸಂದರ್ಭದಲ್ಲಿ ಶಿವಾಜಿಗೆ ವಿರುದ್ಧವಾಗಿ ಮೊಗಲರ ಪರವಾಗಿ ಯುದ್ಧ ಮಾಡಿದವರು ಯಾರು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಮೊಗಲರ ಜೊತೆಗೆ ರಜಪೂತರು ಮತ್ತು ಬ್ರಾಹ್ಮಣರು ಬಹಿರಂಗವಾಗಿಯೇ ಕೈಜೋಡಿಸಿದ್ದರು. ಮೊಗಲರ ಸೇನಾಪತಿ ರಾಜಾಜಯಸಿಂಹ ರಜಪೂತನಾಗಿದ್ದ. ಈತ ಮೊಗಲರ ಪರವಾಗಿ ಶಿವಾಜಿಯ ವಿರುದ್ಧ ಯುದ್ಧ ಮಾಡಿದಾಗ, ಮೊಗಲರ ಗೆಲುವಿಗಾಗಿ ಕೋಟಿ ಚಂಡಿ ಹವನವನ್ನು ಮಾಡಿದ್ದ. 400 ಬ್ರಾಹ್ಮಣರು ಈ ಯಾಗದಲ್ಲಿ ಭಾಗವಹಿಸಿದ್ದರು. ಸುಮಾರು ಎರಡು ಕೋಟಿ ರೂಪಾಯಿಯನ್ನು ಜಯಸಿಂಹ ಇದಕ್ಕಾಗಿ ಸುರಿದಿದ್ದನಂತೆ. ಇದೇ ಯುದ್ಧದಲ್ಲಿ ಶಿವಾಜಿ ಮತ್ತು ಆತನ ಮಗ ಸಂಬಾಜಿ ಜಯಸಿಂಹನಿಗೆ ಸೆರೆಸಿಕ್ಕರು. ಬಳಿಕ ಮುಸ್ಲಿಮ್ ಯೋಧನೊಬ್ಬ ತನ್ನ ಪ್ರಾಣವನ್ನು ಕೊಟ್ಟು ಶಿವಾಜಿಯನ್ನು ಸೆರೆಯಿಂದ ಬಿಡಿಸಿದ. ಅಷ್ಟೆಲ್ಲ ಹೋರಾಟಗಳ ಬಳಿಕ ಶಿವಾಜಿಯ ಪಟ್ಟಾಭಿಷೇಕಕ್ಕೂ ಬ್ರಾಹ್ಮಣರು ತಡೆಯಾದರು.

ಆತ ಕೆಳಜಾತಿಯವನು ಎನ್ನುವ ಒಂದೇ ಕಾರಣಕ್ಕಾಗಿ ಆತನ ಪಟ್ಟಾಭಿಷೇಕಕ್ಕೆ ಬ್ರಾಹ್ಮಣರು ಸಿದ್ಧರಿರಲಿಲ್ಲ. ಆಗ ಕಾಶಿಯಿಂದ ಬಂದ ಗಾಗಾಭಟ್ಟ ಎಂಬಾತನಿಗೆ ಅಪಾರ ಚಿನ್ನದ ವರಹಗಳ ಆಮಿಷ ಒಡ್ಡಿ ಕರೆತರಲಾಯಿತು. ಈತ ಶಿವಾಜಿಗೆ ತಿಲಕವಿಡುವ ಸಂದರ್ಭದಲ್ಲಿ ಕೈಯನ್ನು ಬಳಸುವ ಬದಲು ತನ್ನ ಎಡಗಾಲಿನ ಹೆಬ್ಬೆಟ್ಟಿನಲ್ಲಿ ಶಿವಾಜಿಗೆ ತಿಲಕವಿಟ್ಟ ಕಪ್ಪು ಇತಿಹಾಸವನ್ನು ಜ್ಯೋತಿಬಾ ಫುಲೆ ವಿವರಿಸುತ್ತಾರೆ. ಶಿವಾಜಿಯು ದಲಿತರು ಮತ್ತು ಮುಸ್ಲಿಮರನ್ನು ಒಟ್ಟಾಗಿಸಿ ಸೇನೆ ಕಟ್ಟಿ, ಮೊಗಲರನ್ನು ಎದುರಿಸಿದ ಮತ್ತು ಅದರಲ್ಲಿ ಯಶಸ್ವಿಯಾದ. ಶಿವಾಜಿಯನಂತರ ಪೇಶ್ವೆಗಳು ಶಿವಾಜಿಯ ವಂಶಸ್ಥರಿಂದ ಸಾಮ್ರಾಜ್ಯವನ್ನು ಕಸಿದುಕೊಂಡರು. ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪೇಶ್ವೆಗಳ ಮೂಲಕ ಜಾತೀಯತೆ ಮತ್ತೆ ಮುನ್ನೆಲೆಗೆ ಬಂತು. ದಲಿತರ ಸ್ಥಿತಿ ಅತ್ಯಂತ ಹೀನಾಯವಾಯಿತು. ಸೇನೆಯಲ್ಲಿದ್ದ ದಲಿತರು ಅವಮಾನಕ್ಕೀಡಾಗತೊಡಗಿದರು. ಎರಡನೇ ಬಾಜೀರಾಯನ ಕಾಲದಲ್ಲಿ ಇದು ತಾರಕಕ್ಕೇರಿತು. ಇದೇ ಸಂದರ್ಭದಲ್ಲಿ ಬ್ರಿಟಿಷರು ಬಾಜೀರಾಯನ ವಿರುದ್ಧ ಯುದ್ಧ ಹೂಡಿದರು. ತಮಗಾದ ಅವಮಾನದ ಸೇಡು ತೀರಿಸಲು ಮಹಾರರ ತಂಡ ಬ್ರಿಟಿಷರ ಜೊತೆಗೆ ಸೇರಿತು. ಬಾಜೀರಾಯನ 20,000ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಸೇನೆಯನ್ನು ಬರೇ 500ರಷ್ಟಿದ್ದ ಮಹಾರ್ ತಂಡ ಎದುರಿಸಿ ಗೆದ್ದಿತು. ಮಹಾರರ ಶೌರ್ಯವನ್ನು ಮೆಚ್ಚಿದ ಬ್ರಿಟಿಷರು ಕೋರೆಗಾಂವ್‌ನಲ್ಲಿ ಹುತಾತ್ಮರ ಸ್ತೂಪವೊಂದನ್ನು ನಿಲ್ಲಿಸಿದರು.

ಶಿವಾಜಿ ಎಲ್ಲರನ್ನೂ ಒಂದಾಗಿ ಬೃಹತ್ ಸಾಮ್ರಾಜ್ಯವೊಂದನ್ನು ಕಟ್ಟಿದರೆ, ಪೇಶ್ವೆಗಳು ಜಾತೀಯತೆಯ ಕಂದಕ ನಿರ್ಮಿಸಿ ಆ ಸ್ರಾಮ್ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದರು. ದಲಿತರ ಈ ಗೆಲುವಿನ ಬಳಿಕ ಬ್ರಿಟಿಷರ ಸೇನೆಯಲ್ಲಿ ಮಹಾರ್ ರೆಜಿಮೆಂಟ್ ಆರಂಭವಾಯಿತು. ಈ ಕಾರಣದಿಂದಲೇ ಕೋರೆಗಾಂವ್ ಸ್ಮರಣೆ ದಲಿತರ ಪಾಲಿನ ಜೀವನ ಮರಣದ ಪ್ರಶ್ನೆಯಾಗಿದೆ. ಆ ಆಚರಣೆಯನ್ನು ತಡೆಯಲು ಮುಂದಾಗುವುದೆಂದರೆ, ದಲಿತರ ಸ್ವಾಭಿಮಾನವನ್ನು ಕೆಣಕುವುದೆಂದೇ ಅರ್ಥ. ಈ ದೇಶಕ್ಕೆ ಬೇಕಾಗಿರುವುದು ಪೇಶ್ವೆಗಳ ಹಿಂದುತ್ವವಲ್ಲ, ಶಿವಾಜಿಯ ಹಿಂದುತ್ವ. ಶಿವಾಜಿಯ ಹೆಸರಿನಲ್ಲಿ ಪೇಶ್ವೆಗಳ ಚಿಂತನೆಗಳನ್ನು ಜಾರಿಗೆ ತರುವ ಹುನ್ನಾರ ತಡೆಯಬೇಕಾದರೆ ಕೋರೆಗಾಂವ್ ವಿಜಯ ಈ ದೇಶದ ದಲಿತರಲ್ಲಿ ಮಾತ್ರವಲ್ಲ, ಪ್ರತಿ ಭಾರತೀಯನಲ್ಲಿ ಜಾಗೃತವಾಗಿರಬೇಕು. ಈ ನಿಟ್ಟಿನಲ್ಲಿ ಸರಕಾರ ಕೋರೆಗಾಂವ್ ಆಚರಣೆಯನ್ನು ಪೊಲೀಸ್ ಬಲದಿಂದ ತಡೆಯಲು ಹೊರಟರೆ ಅದು ಹಿಂಸೆಗೆ ಕಾರಣವಾಗಬಹುದು. ಕೋರೆಗಾಂವ್ ವಿಜಯೋತ್ಸವವನ್ನು ತಡೆಯುವ ಮೂಲಕ ಸರಕಾರ ಅಂಬೇಡ್ಕರ್ ಆಶಯವನ್ನು ಪೊಲೀಸರ ಬಲದ ಮೂಲಕ ಬಗ್ಗು ಬಡಿಯಲು ಹೊರಡುವುದು ಖಂಡನೀಯವಾಗಿದೆ. ವಿಜಯೋತ್ಸವ ಯಶಸ್ವಿಯಾಗಿ ಆಚರಣೆಯಾಗಲು ಎಲ್ಲ ರೀತಿಯ ಭದ್ರತೆಯನ್ನು ನೀಡುವುದು ಸರಕಾರದ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News