ಮಧ್ಯಪ್ರದೇಶ, ರಾಜಸ್ಥಾನ ಸರ್ಕಾರಗಳಿಗೆ ಮಾಯಾವತಿ ಎಚ್ಚರಿಕೆ

Update: 2019-01-01 04:02 GMT

ಲಕ್ನೋ, ಜ. 1: ಪರಿಶಿಷ್ಟ ಜಾತಿ/ ಪಂಗಡಗಳ ದೌರ್ಜನ್ಯ ಕಾಯ್ದೆ ದುರ್ಬಲಗೊಳಿಸುವ ಹುನ್ನಾರದ ವಿರುದ್ಧ ಕಳೆದ ಎಪ್ರಿಲ್ 2ರಂದು ಆಯೋಜಿಸಿದ್ದ ಭಾರತ್ ಬಂದ್ ವೇಳೆ ದಲಿತ ಹೋರಾಟಗಾರರ ವಿರುದ್ಧ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಕಾಂಗ್ರೆಸ್ ಸರ್ಕಾರಗಳನ್ನು ಒತ್ತಾಸಿದ್ದಾರೆ.

"ಈ ಪ್ರಕರಣಗಳನ್ನು ವಾಪಾಸು ಪಡೆಯದಿದ್ದರೆ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲನೆ ಮಾಡಬೇಕಾಗುತ್ತದೆ" ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಉಭಯ ರಾಜ್ಯಗಳಲ್ಲಿ ಬಿಎಸ್ಪಿ, ಕಾಂಗ್ರೆಸ್ ಸರ್ಕಾರಗಳಿಗೆ ಬಾಹ್ಯ ಬೆಂಬಲ ನೀಡುತ್ತಿದೆ. ಹೊಸ ವರ್ಷದ ಸಂದರ್ಭದಲ್ಲಿ ಮತ್ತು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನ ಭರವಸೆ ಈಡೇರಿಸುವಂತೆ ಎಚ್ಚರಿಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ಸಂದರ್ಭ ನೀಡಿದ ತನ್ನ ಆಶ್ವಾಸನೆಯಿಂದ ಹಿಂದಕ್ಕೆ ಸರಿಯುವಂತಿಲ್ಲ ಎಂದು ಮಾಯಾವತಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

"ಕೇವಲ ಆಶ್ವಾಸನೆಗಳಿಂದ ಜನ ತೃಪ್ತರಾಗುವುದಿಲ್ಲ. ಆಶ್ವಾಸನೆಗಳನ್ನು ನೀಡುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂಬ ಸಾಮಾನ್ಯ ಭಾವನೆ ಜನರಲ್ಲಿದೆ. ಈ ಮನೋಭಾವವನ್ನು ಬದಲಿಸಲು ಕಾಂಗ್ರೆಸ್ ಮುಂದಾಗುತ್ತದೆಯೇ ಎಂದು ಕಾದು ನೋಡಬೇಕಿದೆ" ಎಂದು ಮಾಯಾವತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News