2017ರಲ್ಲಿ 1 ಮಿಲಿಯನ್ ನವಜಾತ ಶಿಶುಗಳ ಮೃತ್ಯು: ವಿಶ್ವಸಂಸ್ಥೆಯ ವರದಿ

Update: 2019-01-01 14:54 GMT

ಹೊಸದಿಲ್ಲಿ, ಜ.1: ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನವಜಾತ ಶಿಶುಗಳು ಸಾವನ್ನಪ್ಪುವ ಪ್ರಮಾಣ ಕಡಿಮೆಯಾಗಿದ್ದರೂ 2017ರಲ್ಲಿ ಸುಮಾರು 1 ಮಿಲಿಯನ್ ಶಿಶುಗಳು ಜನಿಸಿದ ದಿನದಂದೇ ಮೃತಪಟ್ಟಿವೆ. 2.5 ಮಿಲಿಯನ್ ಶಿಶುಗಳು ಜನಿಸಿದ ಒಂದು ತಿಂಗಳ ಒಳಗೆ ಕೊನೆಯುಸಿರೆಳೆದಿದೆ ಎಂದು ‘ಯುನಿಸೆಫ್’ ತಿಳಿಸಿದೆ.

2017ರಲ್ಲಿ ಪ್ರತೀ ದಿನ 7 ಸಾವಿರ ನವಜಾತ ಶಿಶುಗಳು ಮರಣಹೊಂದಿವೆ. ಇದರಲ್ಲಿ ಶೇ.47ರಷ್ಟು ಐದು ವರ್ಷದ ಒಳಗಿನ ಶಿಶುಗಳು. ಉತ್ತರಪ್ರದೇಶದಲ್ಲಿ 1,65,000 ಮಕ್ಕಳು ಹುಟ್ಟಿದ ಒಂದು ತಿಂಗಳೊಳಗೆ ಮೃತಪಟ್ಟಿವೆ. ಇವುಗಳಲ್ಲಿ ಬಹುತೇಕ ಮರಣಗಳು ಅವಧಿಪೂರ್ವ ಹೆರಿಗೆ, ಹೆರಿಗೆಯ ಸಂದರ್ಭ ಸಮಸ್ಯೆ, ನ್ಯುಮೋನಿಯಾ ರೀತಿಯ ಸೋಂಕು ಮತ್ತಿತರ ತಡೆಗಟ್ಟಬಹುದಾದ ಕಾರಣದಿಂದ ಸಂಭವಿಸಿವೆ ಎಂದು ‘ಯುನಿಸೆಫ್’(ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ನಿಧಿ)ನ ಭಾರತ ಪ್ರತಿನಿಧಿ ಯಾಸ್ಮಿನ್ ಅಲಿ ತಿಳಿಸಿದ್ದಾರೆ. ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ಉತ್ತಮ ತರಬೇತಿ ಮತ್ತು ಆಧುನಿಕ ಸಾಧನಗಳನ್ನು ಒದಗಿಸುವ ಮೂಲಕ ಮಿಲಿಯಾಂತರ ಶಿಶುಗಳನ್ನು ರಕ್ಷಿಸಬಹುದು ಎಂದು ಯುನಿಸೆಫ್‌ನ ಉತ್ತರಪ್ರದೇಶ ಕ್ಷೇತ್ರ ಕಚೇರಿಯ ಮುಖ್ಯಸ್ಥೆ ರುಥ್ ಲಿಯಾನೊ ಹೇಳಿದ್ದಾರೆ.

ಮಕ್ಕಳ ಹಕ್ಕಿನ ಕುರಿತ ನಿರ್ಣಯ ಕೈಗೊಂಡಿದ್ದ ಸಭೆಯ 30ನೇ ವಾರ್ಷಿಕೋತ್ಸವ 2019ರಲ್ಲಿ ನಡೆಯಲಿದ್ದು, ಈ ಪ್ರಯುಕ್ತ ವಿಶ್ವದಾದ್ಯಂತ ಯುನಿಸೆಫ್ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ನಿರ್ಣಯದ ಪ್ರಕಾರ ಸರಕಾರಗಳು ಉತ್ತಮವಾದ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಪ್ರತಿಯೊಂದು ಮಗುವನ್ನೂ ರಕ್ಷಿಸಲು ಬದ್ಧವಾಗಬೇಕಿದೆ. ಲಭ್ಯ ಮಾಹಿತಿಯ ಪ್ರಕಾರ ಕಳೆದ ಮೂರು ದಶಕಗಳಲ್ಲಿ ಶಿಶುಗಳ ಬದುಕುಳಿಯುವಿಕೆಯ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಐದು ವರ್ಷದೊಳಗೆ ಸಾಯುವ ಮಕ್ಕಳ ಸಂಖ್ಯೆ ಅರ್ಧಾಂಶದಷ್ಟು ಕಡಿಮೆಯಾಗಿದೆ.

ಆದರೆ ನವಜಾತ ಶಿಶುಗಳ ಮರಣದ ವಿಷಯದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಈ ನಿಟ್ಟಿನಲ್ಲಿ ಯುನಿಸೆಫ್ ‘ಎಲ್ಲಾ ಮಕ್ಕಳನ್ನೂ ರಕ್ಷಿಸಿ’ ಎಂಬ ಅಭಿಯಾನವನ್ನು ಆರಂಭಿಸಿದೆ. ಆರೋಗ್ಯ ಕೇಂದ್ರಗಳಿಗೆ ನಿರಂತರ ಮತ್ತು ಸಮರ್ಪಕ ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಸುವುದು, ಹೆರಿಗೆಯ ಸಂದರ್ಭ ಪರಿಣತ ಹೆರಿಗೆ ತಜ್ಞರ ನಿಯೋಜನೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ನವಜಾತ ಶಿಶುಗಳಿಗೆ ಗುಣಮಟ್ಟದ ಔಷಧಿ ಪೂರೈಸುವುದು, ಹದಿ ಹರೆಯದ ಬಾಲಕಿಯರಿಗೆ ಆರೋಗ್ಯ ಶಿಕ್ಷಣ ಮತ್ತು ನೆರವು ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುನಿಸೆಫ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News