2019ರಲ್ಲೂ ಟ್ರಂಪ್ ಜೊತೆ ಶೃಂಗ ಸಮ್ಮೇಳನ: ಉತ್ತರ ಕೊರಿಯ ನಾಯಕ ಕಿಮ್ ಘೋಷಣೆ

Update: 2019-01-01 16:01 GMT

ಸಿಯೋಲ್, ಜ. 1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಶೃಂಗ ಸಮ್ಮೇಳನವನ್ನು ನಾನು 2019ರಲ್ಲೂ ನಡೆಸುತ್ತೇನೆ ಎಂದು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಮಂಗಳವಾರ ಹೇಳಿದ್ದಾರೆ.

ಅದೇ ವೇಳೆ, ಆರ್ಥಿಕ ದಿಗ್ಬಂಧನಗಳು ಮತ್ತು ಒತ್ತಡಗಳ ಮೂಲಕ ಉತ್ತರ ಕೊರಿಯದ ತಾಳ್ಮೆ ಪರೀಕ್ಷಿಸದಂತೆ ಅವರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

‘‘ಅಂತಾರಾಷ್ಟ್ರೀಯ ಸಮುದಾಯ ಬಯಸುವ ಫಲಿತಾಂಶವೊಂದನ್ನು ಪಡೆಯುವುದಕ್ಕಾಗಿ ಟ್ರಂಪ್‌ ರನ್ನು ಭೇಟಿ ಮಾಡಲು ನಾನು ತಯಾರಾಗಿದ್ದೇನೆ’’ ಎಂದು ಹೊಸವರ್ಷದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಟೆಲಿವಿಶನ್ ಭಾಷಣದಲ್ಲಿ ಕಿಮ್ ಹೇಳಿದರು.

ಆದರೆ, ಅಮೆರಿಕವು ತನ್ನ ಭರವಸೆಗಳನ್ನು ಮುರಿಯುತ್ತಾ ಸಾಗಿದರೆ ಹಾಗೂ ಏಕಪಕ್ಷೀಯ ಬೇಡಿಕೆಗಳನ್ನು ಇಡುತ್ತಾ ಹಾಗೂ ದಿಗ್ಬಂಧನಗಳು ಮತ್ತು ಒತ್ತಡಗಳನ್ನು ಹೇರುತ್ತಾ ಸಾಗಿದರೆ, ಉತ್ತರ ಕೊರಿಯವು ಬೇರೆ ಮಾರ್ಗವನ್ನು ಆಯ್ಕೆ ಮಾಡುವ ಅನಿವಾರ್ಯತೆಗೆ ಒಳಗಾಗುತ್ತದೆ ಎಂದು ಅವರು ಎಚ್ಚರಿಸಿದರು.

ಅಮೆರಿಕವು ದಕ್ಷಿಣ ಕೊರಿಯದೊಂದಿಗೆ ನಡೆಸುವ ಜಂಟಿ ಸೇನಾಭ್ಯಾಸಗಳನ್ನು ನಿಲ್ಲಿಸಬೇಕು ಹಾಗೂ ದಕ್ಷಿಣ ಕೊರಿಯದಲ್ಲಿ ಆಯಕಟ್ಟಿನ ಸೇನಾ ಉಪಕರಣಗಳನ್ನು ನಿಯೋಜಿಸಬಾರದು ಎಂದರು.

ಕಿಮ್ ಮತ್ತು ಟ್ರಂಪ್ ನಡುವೆ ಜೂನ್ 12ರಂದು ಸಿಂಗಾಪುರದಲ್ಲಿ ಮೊದಲ ಶೃಂಗಸಮ್ಮೇಳನ ನಡೆದಿರುವುದನ್ನು ಸ್ಮರಿಸಬಹುದಾಗಿದೆ. ಇನ್ನೊಂದು ಶೃಂಗ ಸಮ್ಮೇಳನವನ್ನು ಏರ್ಪಡಿಸಲು ಪ್ರಯತ್ನಗಳು ಸಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News