ಸೊಹ್ರಾಬುದ್ದೀನ್ ಪ್ರಕರಣದಲ್ಲಿ ರಾಜಕೀಯ-ಪೊಲೀಸ್ ಸಂಬಂಧ ಸಾಬೀತಾಗಿಲ್ಲ: ನ್ಯಾಯಾಲಯ

Update: 2019-01-01 16:53 GMT

ಮುಂಬೈ,ಜ.1: ಸರಕಾರಿ ಅಭಿಯೋಜಕರು ಬಹಳಷ್ಟು ಪ್ರಯತ್ನಿಸಿದರೂ ಸೊಹ್ರಾಬುದ್ದೀನ್, ಅವರ ಪತ್ನಿ ಕೌಸರ್ ಬಿ ಮತ್ತು ಸಹಚರ ತುಲಸಿರಾಮ್ ಪ್ರಜಾಪತಿಯ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ರಾಜಕೀಯ ಮತ್ತು ಪೊಲೀಸ್ ಮಧ್ಯೆ ಸಂಬಂಧವನ್ನು ಸಾಬೀತುಪಡಿಸಲು ವಿಫಲವಾಗಿದ್ದಾರೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ತಿಳಿಸಿದೆ.

ಡಿಸೆಂಬರ್ 21ರಂದು ಪ್ರಕರಣದ 22 ಆರೋಪಿಗಳನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಲು ಆದೇಶ ನೀಡಿದ ವೇಳೆ ನ್ಯಾಯಾಧೀಶ ಎಸ್.ಜೆ ಶರ್ಮಾ ಈ ಹೇಳಿಕೆಯನ್ನು ನೀಡಿದ್ದಾರೆ. ನ್ಯಾಯಾಲಯಕ್ಕೆ ಒಪ್ಪಿಸಲಾಗಿರುವ ಸಾಕ್ಷಿಗಳನ್ನು ವಿವರವಾಗಿ ಪರಿಶೀಲಿಸಲಾಗಿದ್ದು, ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರು ಬಹಳಷ್ಟು ಪ್ರಯತ್ನಿಸಿದರೂ ರಾಜಕೀಯ ಮತ್ತು ಪೊಲೀಸ್ ನಡುವಿನ ಸಂಬಂಧವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ ಎಂದು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳಬಲ್ಲೆ ಎಂದು ನ್ಯಾಯಾಧೀಶರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ರಾಜಕೀಯ ನಾಯಕರನ್ನು ಸಿಲುಕಿಸಲು ಸಿಬಿಐ ತನಿಖೆಯನ್ನು ಪೂರ್ವಗ್ರಹಿತ ಮತ್ತು ಪೂರ್ವಯೋಜಿತ ರೀತಿಯಲ್ಲಿ ನಡೆಸಿತ್ತು ಎಂದು ನ್ಯಾಯಾಲಯ ತಿಳಿಸಿದೆ. ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ದೋಷಮುಕ್ತಿಗೊಂಡ 22 ಆರೋಪಿಗಳಲ್ಲಿ 21 ಮಂದಿ ಗುಜರಾತ್ ಮತ್ತು ರಾಜಸ್ಥಾನದ ಪೊಲೀಸ್ ಇಲಾಖೆಗಳ ಕಿರಿಯ ಮಟ್ಟದ ಅಧಿಕಾರಿಗಳಾಗಿದ್ದಾರೆ. ಸಿಬಿಐ ಪ್ರಕಾರ, ಆರೋಪಿ ಪೊಲೀಸ್ ಅಧಿಕಾರಿಗಳು ಸೊಹ್ರಾಬುದ್ದೀನ್ ಶೇಕ್, ಕೌಸರ್ ಬಿ ಮತ್ತು ತುಲಸಿರಾಮ್ ಪ್ರಜಾಪತಿಯನ್ನು ಅಪಹರಿಸಿ ಹತ್ಯೆ ಮಾಡಿದ ತಂಡದ ಸದಸ್ಯರಾಗಿದ್ದರು. ಆದರೆ, ಆರೋಪಿ ಪೊಲೀಸರ ಸೇವಾ ಶಸ್ತ್ರಗಳನ್ನು ಈ ಹತ್ಯೆಗಳಲ್ಲಿ ಬಳಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News