ಬಾಲಿವುಡ್ ಮರೆತ ಖಾದರ್‌ಖಾನ್

Update: 2019-01-02 03:57 GMT

ಬಾಲಿವುಡ್‌ನ ಹಿರಿಯ ಜೀವ ಖಾದರ್‌ಖಾನ್ ಮರೆಯಾಗಿದ್ದಾರೆ. ಇಂದಿನ ತಲೆಮಾರು ಖಾದರ್ ಖಾನ್‌ರನ್ನು ಹೆಚ್ಚೆಂದರೆ ಒಬ್ಬ ಹಾಸ್ಯನಟನಾಗಿಯಷ್ಟೇ ಗುರುತಿಸುತ್ತದೆ. ನಟ ಗೋವಿಂದ ಮತ್ತು ಖಾದರ್ ಖಾನ್ ಜೋಡಿ ಒಂದು ಕಾಲದಲ್ಲಿ ಭಾರೀ ಜನಪ್ರಿಯವೂ ಆಗಿತ್ತು. ಒಂದು ರೀತಿಯಲ್ಲಿ, ಟಾಮ್ ಆ್ಯಂಡ್ ಜೆರ್ರಿ ಕಾರ್ಟೂನ್‌ಗಳಂತೆ ಇವರ ಪಾತ್ರಗಳನ್ನು ಹೆಣೆಯಲಾಗುತ್ತಿತ್ತು. ಮಾವ-ಅಳಿಯ, ತಂದೆ-ಮಗನಾಗಿ ಪರಸ್ಪರ ಸ್ಪರ್ಧೆಗಿಳಿಯುವ ಪಾತ್ರಗಳಾಗಿದ್ದವು ಅವು. ಇವರ ಜೊತೆಗೆ ಶಕ್ತಿ ಕಪೂರ್ ಕೂಡ ಸೇರಿಕೊಳ್ಳುತ್ತಿದ್ದರು. ಆದರೆ ಖಾದರ್ ಖಾನ್ ಎಂದರೆ ಕೇವಲ ಹಾಸ್ಯ ನಟನಷ್ಟೇ ಅಲ್ಲ. ಅದರಾಚೆಗೂ ಹತ್ತು ಹಲವು ಮುಖಗಳಿವೆ ಅವರಿಗೆ. ಕೆನಡಾದಲ್ಲಿ ಡಿಸೆಂಬರ್ 31ರಂದು ನಿಧನರಾದ ಬಾಲಿವುಡ್ ನಟ ಖಾದರ್‌ ಖಾನ್ 1990ರ ದಶಕದಲ್ಲಿ ಹಿಂದಿ ಸಿನೆಮಾ ಪ್ರೇಕ್ಷಕರ ಅಚ್ಚುಮೆಚ್ಚಿನ ನಟನೆನಿಸಿದ್ದರು. ಅಪ್ಪಟ ಕಾಮಿಡಿ ಚಿತ್ರಗಳಲ್ಲಿ ಶಕ್ತಿಕಪೂರ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಖಾದರ್‌ಖಾನ್, ಆ ಕಾಲದ ಜನಪ್ರಿಯ ನಟ ಗೋವಿಂದ ಅವರ ಚಿತ್ರಗಳಲ್ಲೂ ಹೆಚ್ಚಾಗಿ ನಟಿಸಿದ್ದರು.

ಸಿನೆಮಾಗಳಲ್ಲಿ ಖಾದರ್ ಖಾನ್-ಕಪೂರ್ ಜೋಡಿಯಿದ್ದರೆ, ಅಲ್ಲಿ ಎರಡು ಪಟ್ಟು ಅಧಿಕ ಹಾಸ್ಯ ಸನ್ನಿವೇಶಗಳ ರಸದೌತಣವಿರುವುದಂತೂ ಗ್ಯಾರಂಟಿ. ಬನಾರಸಿ ಬಾಬು, ಹೀರೋ ನಂ.1, ಹಸೀನಾ ಮಾನ್ ಜಾಯೇಗಿ ಸೇರಿದಂತೆ ಈ ಜೋಡಿ ನಟಿಸಿದ್ದ ಚಿತ್ರಗಳು ಸದಾ ನೆನಪಿನಲ್ಲಿ ಉಳಿಯುವಂತಿಲ್ಲವಾದರೂ, ಅವೆಲ್ಲವೂ ಆ ಕಾಲದಲ್ಲಿ ಸೂಪರ್‌ಹಿಟ್ ಆಗಿದ್ದವು. ಅವರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು ಮಾತ್ರವಲ್ಲ, 200ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಭಾಷಣೆಗಳನ್ನು ಬರೆದಿದ್ದರು. ಜಗತ್ತಿನ ಕ್ಲಾಸಿಕ್ ಸಾಹಿತ್ಯ ಕೃತಿಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದ ಅವರು ಅವುಗಳ ಕುರಿತಂತೆ ಗಂಭೀರ ಚರ್ಚೆ ನಡೆಸುವಷ್ಟು ಸೃಜನಶೀಲರಾಗಿದ್ದರು. ಬಹುಶಃ ಬಾಲಿವುಡ್‌ಗೆ ಖಾದರ್ ಖಾನ್ ಅವರ ಕಪಿಚೇಷ್ಟೆಗಳಷ್ಟೇ ಬೇಕಾಗಿತ್ತು. ಅವರೊಳಗಿದ್ದ ಅಪರೂಪದ ಸಾಹಿತಿ, ಸೃಜನಶೀಲತೆ ಅವರಿಗೆ ಅಗತ್ಯವಿದ್ದಿರಲಿಲ್ಲ. ಸಂಭಾಷಣೆಗಳನ್ನು ಬರೆಯುವ ಸಂದರ್ಭದಲ್ಲಿ ಸಾಹಿತ್ಯಕ ಸೊಗಡನ್ನು ಸೇರಿಸಿದರೆ ನಿರ್ಮಾಪಕರು ಅದನ್ನು ತಿರಸ್ಕರಿಸುತ್ತಿದ್ದರು. ಪಡ್ಡೆಹುಡುಗರು ಇಷ್ಟಪಡುವಂತಹ ಸಂಭಾಷಣೆಗಳನ್ನು ಬರೆಸುತ್ತಿದ್ದರು. ಈ ಬಗ್ಗೆ ಖಾದರ್‌ಖಾನ್ ನೋವು ತೋಡಿಕೊಂಡಿದ್ದಿದೆ.

1977ರ ಸೂಪರ್‌ಹಿಟ್ ಚಿತ್ರ ಅಮರ್ ಅಕ್ಬರ್ ಅಂಥೋನಿ ಚಿತ್ರಕ್ಕಾಗಿ ಬರೆದ ಸಂಭಾಷಣೆಯಲ್ಲಿ ಖಾದರ್ ಖಾನ್ ಅವರು ಅಮಿತಾಭ್‌ ಬಚ್ಚನ್ ನಟಿಸಿದ್ದ ಅಂಥೋನಿ ಗೊನ್ಸಾಲ್ವಿಸ್‌ನ ಪಾತ್ರಕ್ಕೆ ಮುಂಬೈನ ಬೀದಿಗಳ ಜನ ಮಾತನಾಡುವ ಓರಟುಭಾಷೆಯನ್ನು ಬಳಸಿಕೊಂಡಿದ್ದರು. ‘‘ ಹಿಂದಿ ಸಿನೆಮಾ ರಂಗಕ್ಕೆ ಆ ಬಗೆಯ ಭಾಷೆಯೊಂದನ್ನು ಪರಿಚಯಿಸಿದ್ದಕ್ಕಾಗಿ, ನನಗೆ ಈಗಲೂ ವಿಷಾದವಿದೆ’’ ಎಂದು ಖಾದರ್‌ಖಾನ್ ಹೇಳಿಕೊಂಡಿದ್ದರು. ಆದರೆ, ಅದೇ ಚಿತ್ರದಲ್ಲಿ ಅಕ್ಬರ್ ಪಾತ್ರಕ್ಕಾಗಿ ತಾನು ಬರೆದಿದ್ದ ಸಂಭಾಷಣೆಗಳ ಬಗ್ಗೆ ಅವರು ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಕವ್ವಾಲಿ ಗಾಯಕ ಅಕ್ಬರ್‌ನ ಪಾತ್ರದಲ್ಲಿ ರಿಶಿಕಪೂರ್ ನಟಿಸಿದ್ದರು. ಆದರೆ ಪಡ್ಡೆಹುಡುಗರು ಬಚ್ಚನ್ ಅವರ ಪಾತ್ರವನ್ನು ಬಹಳಷ್ಟು ಮೆಚ್ಚಿಕೊಂಡಿದ್ದರು.

‘‘ಐಸಾ ಆದ್ಮಿ ದೊಯಿಚ್ ಭರ್ ಭಾಗ್ತಾ ಹೈ. ಒಲಿಂಪಿಕ್ ಕಾ ರೇಸ್ ಹೋ ಯಾ ಪೊಲೀಸ್ ಕಾ ಕೇಸ್ ಹೋ’’ ಎಂದು ಅಮಿತಾಭ್ ಪಟಪಟನೆ ಉದುರಿಸಿದ್ದ ಡೈಲಾಗ್‌ಗಳು ಬಹಳ ಜನಪ್ರಿಯವಾಗಿದ್ದವು. ಅಂದಹಾಗೆ ಖಾದರ್ ಖಾನ್ ಬೆಳೆದಿದ್ದು ಮುಂಬೈನ ಕುಖ್ಯಾತ ಕೆಂಪುದೀಪ ಪ್ರದೇಶವಾದ ಕಾಮಾಟಿಪುರದಲ್ಲಿ. ಅಲ್ಲಿನ ಪರಿಸರದ ಕೆಟ್ಟಪ್ರಭಾವದಿಂದ ತನ್ನನ್ನು ಕುಟುಂಬವು ದೂರವಿರಿಸಿದ್ದನ್ನು ಅವರು ನೆನಪಿಸಿಕೊಂಡಿದ್ದರು. ‘‘ಒಂದು ಬೀದಿಯಲ್ಲಿ ವೇಶ್ಯೆಯರೇ ಇದ್ದರೆ, ಇನ್ನೊಂದರಲ್ಲಿ ಹಿಜಿಡಾಗಳ ಗುಂಪುಗಳಿದ್ದವು ಹಾಗೂ ಮೂರನೇ ರಸ್ತೆಯಲ್ಲಿ ಮದ್ಯ ಹಾಗೂ ಜುಗಾರಿ ಅಡ್ಡೆಗಳಿದ್ದವು. ಬೀದಿಯಲ್ಲಿ ವೇಶ್ಯೆಯರು ತಮ್ಮ ದಂಧೆ ನಡೆಸುತ್ತಿದ್ದುದನ್ನು ನಾನು ವೀಕ್ಷಿಸುತ್ತಿದ್ದೆ’’ ಎಂದವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹದಿಹರೆಯದ ಬಾಲಕನಾಗಿದ್ದಾಗ ಖಾದರ್‌ಖಾನ್ ರಶ್ಯದ ಹಾಗೂ ಭಾರತದ ಖ್ಯಾತ ಬರಹಗಾರರ ಕೃತಿಗಳಿಂದ ಆಕರ್ಷಿತರಾದರು.

ಸಾದತ್ ಹಸನ್ ಮಂಟೊ ಅವರ ಅಚ್ಚುಮೆಚ್ಚಿನ ಸಾಹಿತಿಯಾಗಿದ್ದರು. ಖಾದರ್ ಖಾನ್ ರಂಗಭೂಮಿಯಿಂದ ಬಂದವರು. ವೃತ್ತಿಯಲ್ಲಿ ಗಣಿತ ಅಧ್ಯಾಪಕರಾಗಿದ್ದವರು. ಆದರೆ ಪ್ರವೃತ್ತಿ ಮಾತ್ರ ನಟನೆಯಾಗಿತ್ತು. ದಿಲೀಪ್ ಕುಮಾರ್ ಮೂಲಕ ಅವರು ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟರು. ಯಶ್‌ಚೋಪ್ರಾ ಅವರ ದಾಗ್ (1973)ಚಿತ್ರದಲ್ಲಿ ಪುಟ್ಟದೊಂದು ಪಾತ್ರ ಮಾಡುವ ಅವಕಾಶ ಅವರಿಗೆ ದೊರೆಯಿತು. ಆದಾಗ್ಯೂ ಭಾರತೀಯ ಚಲನಚಿತ್ರಗಳ ದತ್ತಾಂಶ ಬ್ಯುರೋ (ಐಎಂಡಿಬಿ), 1974ರಲ್ಲಿ ತೆರೆಕಂಡ ‘ರೋಟಿ’ ಖಾದರ್‌ಖಾನ್‌ರ ಚೊಚ್ಚಲ ಚಿತ್ರವೆಂದು ಪಟ್ಟಿ ಮಾಡಿದೆ. 1970ರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ಸಂಭಾಷಣೆ-ಬರಹಗಾರರಾಗಿ ಸಲೀಂಜಾವೇದ್ ಅವರ ಪ್ರಾಬಲ್ಯವಿತ್ತು. ಆ ಕಾಲದಲ್ಲಿ ಸಲೀಂ-ಜಾವೇದ್ ಜೋಡಿ ನಿರ್ಮಾಪಕರಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಸಂಪೂರ್ಣ ಪ್ಯಾಕೇಜ್‌ನ ಕೊಡುಗೆ ನೀಡುತ್ತಿದ್ದರು.

ಹೀಗಾಗಿ ಖಾದರ್‌ಖಾನ್ ಅವರಿಗೆ ಆ ಕಾಲದಲ್ಲಿ ಕೆಲವೊಂದು ಚಿತ್ರಗಳಿಗಷ್ಟೇ ಸಂಭಾಷಣೆಗಳನ್ನು ಬರೆಯಲು ಸಾಧ್ಯವಾಗಿತ್ತು. ಆದರೆ ಅಮರ್ ಅಕ್ಬರ್ ಅಂಥೋನಿ ಚಿತ್ರವು ಖಾದರ್ ಖಾನ್ ಅದೃಷ್ಟದ ಬಾಗಿಲನ್ನು ತೆರೆದುಬಿಟ್ಟಿತು. ಖಾನ್ ಅವರು ದೇಸಾಯಿ ನಿರ್ದೇಶನದ ಪರ್ವರಿಶ್, ಧರ್ಮವೀರ್,ಸುಹಾಗ್, ನಸೀಬ್, ಕೂಲಿ ಹಾಗೂ ಇನ್ನೂ ಹಲವಾರು ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆದಿದ್ದರು. 1970 ಹಾಗೂ 80ರ ದಶಕದಲ್ಲಿ ಖಾದರ್‌ಖಾನ್ ಹಿಂದಿಚಿತ್ರರಂಗದ ಅತ್ಯಂತ ಬ್ಯುಸಿ ಸಾಹಿತಿ ಎನಿಸಿಬಿಟ್ಟರು. ದಶಕದ ಹಲವಾರು ಸೂಪರ್‌ಹಿಟ್ ಮಸಾಲಾ ಚಿತ್ರಗಳಿಗೆ ಕಥೆ,ಸಾಹಿತ್ಯವನ್ನು ಬರೆಯುವ ಜೊತೆಜೊತೆಗೆ ಖಳನಾಯಕ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು. ಗೋವಿಂದ ಬ್ರಾಂಡ್‌ನ ಚಿತ್ರಗಳ ಅಲೆ ತಗ್ಗಿದ ಬಳಿಕ ಖಾದರ್‌ಖಾನ್ ಕೂಡಾ ಹಿಂದಿಚಿತ್ರರಂಗದಲ್ಲಿ ಮಂಕಾಗತೊಡಗಿದರು. ಅತ್ಯಂತ ಮುಖ್ಯ ಅಂಶವೆಂದರೆ, ಈ ದೇಶದಲ್ಲಿ ನಿಧಾನಕ್ಕೆ ತಲೆಯೆತ್ತುತ್ತಿರುವ ಅಸಹಿಷ್ಣುತೆಯನ್ನು ಮೊತ್ತ ಮೊದಲು ಗುರುತಿಸಿದ ನಟ ಖಾದರ್ ಖಾನ್. ಇಸ್ಲಾಮ್ ಧರ್ಮದ ಕುರಿತಂತೆ ಉದ್ದೇಶಪೂರ್ವಕ ಅಪಪ್ರಚಾರ ನಡೆಸುತ್ತಾ, ಅದನ್ನು ಅಸಹಿಷ್ಣುತೆಗೆ ಬಳಸುವುದನ್ನು ಅವರು ಆಕ್ಷೇಪಿಸ ತೊಡಗಿದರು.

ಇಸ್ಲಾಂ ಧರ್ಮವು ಶಾಂತಿಯನ್ನು ಸಾರುವ ಧರ್ಮವೆಂಬ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅವರು ಪವಿತ್ರ ಕುರ್‌ಆನ್ ಬಗ್ಗೆ ಪುಸ್ತಕವೊಂದನ್ನು ಹೊರತಂದರು. 2012ರಲ್ಲಿ ನೀಡಿದ ಸಂದರ್ಶನದಲ್ಲಿ ಅವರು ರಾಜಕೀಯದ ಬಗ್ಗೆ ವ್ಯಾಪಕವಾಗಿ ಚರ್ಚಿಸದಿದ್ದರೂ, ಕೋಮುವಾದವು ಭಾರತವನ್ನು ಕಾಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದರು. ಇದಾದನಂತರ ಬಾಲಿವುಡ್ ಅವರ ಕುರಿತು ಆಸಕ್ತಿಯನ್ನು ಕಳೆದುಕೊಂಡಿತು. ಒಂದೆರಡು ಬಾರಿ ಮಾಧ್ಯಮಗಳು ಖಾದರ್ ಖಾನ್ ಅವರ ಸಾವಿನ ವದಂತಿಗಳನ್ನು ಹರಡಿದಾಗ, ಸ್ವತಃ ಖಾನ್ ಅವರೇ ‘‘ನಾನು ಸತ್ತಿಲ್ಲ’’ ಎಂದು ಸ್ಪಷ್ಟನೆ ನೀಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಇತ್ತೀಚಿನ ದಿನಗಳಲ್ಲಿ ಅವರು ಬಾಲಿವುಡ್ ನೆನಪುಗಳಿಂದ ಸಂಪೂರ್ಣ ಅಳಿಸಿ ಹೋಗಿದ್ದರು. ಖಾದರ್‌ಖಾನ್‌ರಂತಹ ವಿದ್ವತ್ ಹೊಂದಿರುವ, ಮುತ್ಸದ್ದಿಗಳು ಬಾಲಿವುಡ್‌ನ ಇಂದಿನ ಅಗತ್ಯವಾಗಿದೆ. ಅವರ ಅಗಲಿಕೆಯ ಮೂಲಕ ಬಾಲಿವುಡ್ ಬಹಳಷ್ಟನ್ನು ಕಳೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News