ಮೋದಿಯನ್ನು ಟ್ರಂಪ್ ಟೀಕಿಸಿದ್ದೇಕೆ ಗೊತ್ತೇ?

Update: 2019-01-03 03:55 GMT

ವಾಷಿಂಗ್ಟನ್, ಜ.3: ಅಪ್ಘಾನಿಸ್ತಾನದಲ್ಲಿ ಅತ್ಯಾಧುನಿಕ ಗ್ರಂಥಾಲಯ ನಿರ್ಮಾಣಕ್ಕೆ ನೆರವು ನೀಡಲು ಮುಂದಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. ಇದರಿಂದ ಯಾವ ಪ್ರಯೋಜನವೂ ಆಗದು ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತದ ನೆರವಿನ ಪ್ರಸ್ತಾಪ ಮಾಡಿದ ಟ್ರಂಪ್, ಸಾಗರೋತ್ತರ ದೇಶಗಳಲ್ಲಿ ಕಡಿಮೆ ಹೂಡಿಕೆ ಮಾಡುವ ಅಮೆರಿಕದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು.

"ಮೋದಿ ನನ್ನ ಜತೆಗಿದ್ದಾಗ, ಅಪ್ಘಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಿಸುವ ಬಗ್ಗೆ ಸತತವಾಗಿ ಹೇಳುತ್ತಿದ್ದರು. ಬಹುಶಃ ಇದಕ್ಕೆ ನಾವು ಕೃತಜ್ಞತೆ ಹೇಳಬೇಕು. ಆದರೆ ಅಪ್ಘಾನಿಸ್ತಾನದಲ್ಲಿ ಇದನ್ನು ಯಾರು ಬಳಸುತ್ತಾರೆ" ಎಂದು ಟ್ರಂಪ್ ವ್ಯಂಗ್ಯವಾಡಿದರು.

ಆದರೆ ಭಾರತದ ಯಾವ ಯೋಜನೆ ಬಗ್ಗೆ ಟ್ರಂಪ್ ಪ್ರಸ್ತಾವಿಸಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿಲ್ಲ. 2001ರ ಸೆಪ್ಟೆಂಬರ್ 11ರ ದಾಳಿ ಘಟನೆ ಬಳಿಕ ಅಮೆರಿಕನ್ ಮಿತ್ರಪಡೆ ತಾಲಿಬಾನ್ ಸರ್ಕಾರವನ್ನು ಕಿತ್ತೊಗೆದ ಬಳಿಕ ಭಾರತ ಅಪ್ಘಾನಿಸ್ತಾನಕ್ಕೆ 300 ಕೋಟಿ ಡಾಲರ್ ನೆರವು ನೀಡಲು ಮುಂದಾಗಿದ್ದು, ಇದಕ್ಕೆ ತಾನು ಬದ್ಧ ಎಂದು ಭಾರತ ಸ್ಪಷ್ಟಪಡಿಸಿತ್ತು.

ಈ ಯೋಜನೆಯಡಿ ಕಾಬೂಲ್‌ನಲ್ಲಿ ಉತ್ತಮ ಹೈಸ್ಕೂಲ್ ನಿರ್ಮಾಣ ಮತ್ತು ಪ್ರತಿ ವರ್ಷ 100 ಅಪ್ಘಾನ್ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಉದ್ದೇಶಿಸಲಾಗಿತ್ತು. 2015ರಲ್ಲಿ ಭಾರತದ ನೆರವಿನಡಿ ನಿರ್ಮಿಸಿದ ಅಪ್ಘಾನ್ ಪಾರ್ಲಿಮೆಂಟ್ ಕಟ್ಟಡ ಉದ್ಘಾಟಿಸುವ ವೇಳೆ ಮೋದಿ, "ಅಫ್ಘಾನ್ ಯುವಕರಿಗೆ ಅತ್ಯಾಧುನಿಕ ಶಿಕ್ಷಣ ಹಾಗೂ ವೃತ್ತಿಪರ ಕೌಶಲ ಒದಗಿಸುವ ಮೂಲಕ ಸಬಲೀಕರಿಸಲು ಭಾರತ ನೆರವಾಗಲಿದೆ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News