ವಿದ್ಯುತ್ ಸಂಪರ್ಕದ ಗುರಿಯಲ್ಲಿ ಮೋದಿ ಸರಕಾರ ವಿಫಲ: 10.5 ಲಕ್ಷ ಮನೆಗಳು ಇನ್ನೂ ಕತ್ತಲೆಯಲ್ಲಿ!

Update: 2019-01-03 08:14 GMT

ಹೊಸದಿಲ್ಲಿ, ಜ.3: ದೇಶದ ಪ್ರತಿಯೊಂದು ಮನೆಗೆ ವಿದ್ಯುತ್ ಸಂಪರ್ಕ ಒದಗಿಸುವ ಕುರಿತಂತೆ ತಾನೇ ನಿಗದಿಪಡಿಸಿದ ಗುರಿಯನ್ನು ತಲುಪಲು ಕೇಂದ್ರದ ನರೇಂದ್ರ ಮೋದಿ ಸರಕಾರ ವಿಫಲವಾಗಿದೆ.

ದೇಶದ 25 ರಾಜ್ಯಗಳಲ್ಲಿನ 2.39 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿದ ನಂತರ ಸರಕಾರ ನಾಲ್ಕು ರಾಜ್ಯಗಳ  10.5 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದಕ್ಕೆ ಇನ್ನೂ ಬಾಕಿಯಿದೆ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯುರೋ ಮಾಹಿತಿ ನೀಡಿದೆ.

ವಿದ್ಯುತ್ ಸಂಪರ್ಕ ಒದಗಿಸುವ ಕುರಿತಂತೆ ಸರಕಾರ ತನ್ನ ಡಿಸೆಂಬರ್ 31ರ ಗುರಿಯನ್ನು ತಲುಪಲಿದೆ ಎಂದು ವಿದ್ಯುತ್ ಸಚಿವ ಆರ್ ಕೆ ಸಿಂಗ್ ನವೆಂಬರ್ ತಿಂಗಳಲ್ಲಿ ತಿಳಿಸಿದ್ದರು. ಅದಾಗಲೇ ಗಡುವನ್ನು ಮೂರು ತಿಂಗಳಿಗೆ ವಿಸ್ತರಿಸಲಾಗಿತ್ತು.

ಮೋದಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಸರಕಾರ ಗ್ರಾಮೀಣ ವಿದ್ಯುತ್ತೀಕರಣಕ್ಕೆ ಸಂಬಂಧಿಸಿದಂತೆ ಗುರಿಗಳನ್ನು ಬದಲಿಸುತ್ತಲೇ ಇದೆ. ಮೇ 1, 2018ರೊಳಗೆ ದೇಶದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಹಾಗೂ ಡಿಸೆಂಬರ್ 31, 2018ರೊಳಗಾಗಿ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕವೊದಗಿಸುವ ಗುರಿ ನಿಗದಿ ಪಡಿಸಲಾಗಿತ್ತು. ಈ ಗುರಿ ತಲುಪಿದ ನಂತರ ಅಬಾಧಿತ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಮಾರ್ಚ್ 31, 2019ರ ಗುರಿ ನಿಗದಿಯಾಗಿತ್ತು.

ಸೆಪ್ಟೆಂಬರ್ 2017ರಂದು ಮೋದಿ ಸರಕಾರ 4  ಕೋಟಿ ಮನೆಗಳ ವಿದ್ಯುತ್ತೀಕರಣ ಯೋಜನೆಯನ್ನು ಕೈಗೆತ್ತಿಕೊಂಡಿತ್ತಾದರೂ ಗುರಿ ಕಡಿಮೆಯಾಗುತ್ತಾ ಬದಲಾಗುತ್ತಾ ಹೋಗಿತ್ತು. ಆರಂಭದಲ್ಲಿ 4 ಕೋಟಿ ಮನೆಗಳ ವಿದ್ಯುತ್ತೀಕರಣ ಗುರಿಯಿತ್ತಾದರೂ ಇದೀಗ ಈ ಗುರಿ 2.5 ಕೋಟಿಗೆ ಇಳಿದಿದೆ. ಗ್ರಾಮೀಣ ಭಾಗಗಳಿಂದ ನಗರಗಳಿಗೆ ವಲಸೆ ಹೋಗಿ ಹಲವು ಕುಟುಂಬಗಳು ಒಂದೇ ಸೂರಿನಡಿ ವಾಸವಾಗುವುದಿಂದ ಗುರಿ ಕಡಿಮೆ ಮಾಡಲಾಗಿದೆ ಎಂದು ಈ ಯೋಜನೆ ಜಾರಿ ಜವಾಬ್ದಾರಿ ಹೊತ್ತುಕೊಂಡಿರುವ ಆರ್‍ಇಸಿ ಅಧ್ಯಕ್ಷ ಪಿ ವಿ ರಮೇಶ್ ಹೇಳಿದ್ದಾರೆ.

ಸದ್ಯ ವಿದ್ಯುತ್ ಸಂಪರ್ಕ ಬಾಕಿಯಿರುವ ಮನೆಗಳು ಅಸ್ಸಾಂ, ರಾಜಸ್ಥಾನ, ಮೇಘಾಲಯ ಹಾಗೂ ಛತ್ತೀಸಗಢದಲ್ಲಿವೆ ಎಂದು ಪಿಐಬಿ ಹೇಳಿಕೆ ತಿಳಿಸಿದೆಯಾದರೂ ಡಿಸೆಂಬರ್ 31, 2018ರ ಗಡುವಿನ ಬಗ್ಗೆ ಏನನ್ನೂ ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News