ಕುಡಿಯುವ ನೀರಿನ ಶುದ್ಧೀಕರಣ ಘಟಕ: ಅವ್ಯವಹಾರ ನಡೆದಿದ್ದರೆ ಕ್ರಮ; ಸಚಿವ ಸಿ.ಎಸ್.ಶಿವಳ್ಳಿ

Update: 2019-01-03 12:56 GMT

ಬೆಂಗಳೂರು, ಜ. 3: ಕುಡಿಯುವ ನೀರಿನ ಶುದ್ದೀಕರಣ ಘಟಕ ಸ್ಥಾಪನೆಯ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಭರವಸೆ ನೀಡಿದ್ದಾರೆ.

ಗುರುವಾರ ವಿಧಾನಸೌಧದ 2ನೆ ಮಹಡಿಯ ಕೊಠಡಿ ಸಂಖ್ಯೆ 237ರ ನೂತನ ಕಚೇರಿಗೆ ಪೂಜೆ ಸಲ್ಲಿಸಿ ಕಾರ್ಯಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 58 ನಗರಸಭೆ, 113 ಪುರಸಭೆ, 90 ಪಟ್ಟಣ ಪಂಚಾಯತ್ ಪೌರಾಡಳಿತ ಇಲಾಖೆ ವ್ಯಾಪ್ತಿಗೆ ಬರುತ್ತವೆ.

ಕಾರ್ಯನಿರ್ವಹಿಸಲು ಇದು ಅತ್ಯಂತ ಒಳ್ಳೆಯ ಇಲಾಖೆ. ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ನಾನು ಹೊಸದಾಗಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದು, ಶೀಘ್ರವೇ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸಂಕ್ರಾಂತಿ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ನಾಲ್ಕು ಕಂದಾಯ ವಿಭಾಗಗಳಲ್ಲೂ ಸಭೆ ನಡೆಸುವೆ ಎಂದರು.

ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ಶೌಚಾಲಯ ನಿರ್ಮಾಣ ನಮ್ಮ ಮುಂದಿರುವ ಸವಾಲುಗಳು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಯೋಜನೆ ಅತ್ಯುತ್ತಮವಾದ ಕೆಲಸ. ಯಾವುದೇ ಭಾಗದಲ್ಲೂ ಘಟಕಗಳು ಸ್ಥಗಿತಗೊಳ್ಳಬಾರದು. ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಎಲ್ಲವೂ ಊಹಾಪೋಹ: ಮೈತ್ರಿ ಸರಕಾರ ಪತನಗೊಳ್ಳುತ್ತದೆ ಎಂಬುದು ಕೇವಲ ಊಹಾಪೋಹ. ಯಾರೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಣೆ ನೀಡಿದ ಶಿವಳ್ಳಿ, ರಾಜ್ಯದಲ್ಲಿನ ಮೈತ್ರಿ ಸರಕಾರಕ್ಕೆ ಐದು ವರ್ಷಕ್ಕೆ ಜನಾದೇಶ ಸಿಕ್ಕಿದೆ. ಹೀಗಾಗಿ ಸರಕಾರ ಸುಗಮವಾಗಿ ನಡೆಯಲಿದೆ ಎಂದರು.

ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲ ಶಾಸಕರು ಅಸಮಾಧಾನಗೊಂಡಿರುವುದು ಸಹಜ. ಆದರೆ, ಲೋಕಸಭೆ ಚುನಾವಣೆ ಬಳಿಕ ಎಲ್ಲರಿಗೂ ನ್ಯಾಯ ಸಿಗಲಿದೆ. ಪದೇ ಪದೇ ಚುನಾವಣೆ ನಡೆಸುವುದು ಮಕ್ಕಳಾಟವಲ್ಲ. ಒಂದು ವೇಳೆ ಶಾಸಕರು ರಾಜೀನಾಮೆ ನೀಡಿದರೂ ಮತ್ತೆ ಗೆಲ್ಲುವುದು ಕಷ್ಟ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News