ಬರೋಡಾ ಬ್ಯಾಂಕ್‌ಗೆ ಜ್ವರ; ವಿಜಯ ಬ್ಯಾಂಕಿಗೆ ಬರೆ

Update: 2019-01-05 04:58 GMT

 ಕರ್ನಾಟಕ ವ್ಯಾಪಾರಿಗಳ ನಾಡಲ್ಲ ನಿಜ. ಆದರೆ ಸಹಕಾರ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಅದು ತನ್ನದೇ ಕೊಡುಗೆಗಳನ್ನು ನೀಡಿದೆ. ಇಲ್ಲಿನ ಜನರ ಪ್ರಾಮಾಣಿಕತೆ, ಶ್ರಮ, ಬದ್ಧತೆಯ ತಳಹದಿಯ ಮೇಲೆ ಹಲವು ಬ್ಯಾಂಕುಗಳು ಹುಟ್ಟಿದವು ಮತ್ತು ಅಭಿವೃದ್ಧಿಗೊಂಡವು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಾರ್ಪೊರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್ ಜೊತೆ ಜೊತೆಗೇ ರೈತರೇ ಜೊತೆಗೂಡಿ ಕಟ್ಟಿ ನಿಲ್ಲಿಸಿದ ಸಹಕಾರಿ ಬ್ಯಾಂಕ್‌ಗಳ ಕೊಡುಗೆ ಇಲ್ಲಿನ ಸಾಮಾಜಿಕ, ಆರ್ಥಿಕ ಬದುಕಿನ ದಿಕ್ಕನ್ನು ಬದಲಾಯಿಸಿದವು. ಇಂದಿರಾಗಾಂಧಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ ಬಳಿಕ, ಸಾಮಾನ್ಯ ರೈತನೂ ಬ್ಯಾಂಕ್‌ಗಳ ಮೆಟ್ಟಿಲನ್ನು ಏರುವಂತಾಯಿತು. ಆದರೆ ಮೋದಿಯ ಆಡಳಿತದಲ್ಲಿ ಎಲ್ಲವೂ ತಿರುವು ಮುರುವಾಗುತ್ತಿವೆ. ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಮಾತುಗಳು ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಬೃಹತ್ ಕಾರ್ಪೊರೇಟ್ ಜನರನ್ನು ರಕ್ಷಿಸಲು ಬ್ಯಾಂಕ್‌ಗಳನ್ನು ಬಲಿಕೊಡುವ ಸಂಚುಗಳು ನಡೆಯುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರು, ವಿಶ್ವೇಶ್ವರಯ್ಯರ ಕಾಲದಲ್ಲಿ ಸ್ಥಾಪನೆಗೊಂಡ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಈಗಾಗಲೇ ವಿಲೀನದ ಹೆಸರಿನಲ್ಲಿ ಮುಚ್ಚಲಾಗಿದೆ. 

ಇದೀಗ ಕರಾವಳಿಯ ಜನರ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ವಿಜಯಬ್ಯಾಂಕ್‌ನ್ನು ಅಳಿಸಿ ಹಾಕಲು ಕೇಂದ್ರ ಸರಕಾರ ಮುಂದಾಗಿದೆ. ವಿಜಯ ಬ್ಯಾಂಕ್ ಕರಾವಳಿಯ ಬಂಟ ಸಮುದಾಯದ ಶ್ರಮದ ಫಲವಾಗಿ ಸ್ಥಾಪನೆಗೊಂಡು, ಅವರ ಪ್ರಾಮಾಣಿಕತೆ, ಶ್ರಮದ ಫಲವಾಗಿ ಈಗಲೂ ಲಾಭದಲ್ಲಿರುವ ಬ್ಯಾಂಕ್. 1931ರಲ್ಲಿ ಅತ್ತಾವರ ಬಾಲಕೃಷ್ಣ ಶೆಟ್ಟಿ ಸ್ಥಾಪಿಸಿರುವ ಈ ಬ್ಯಾಂಕ್‌ನ್ನು ದೇಶಾದ್ಯಂತ ವಿಸ್ತರಿಸಿದ ಹೆಗ್ಗಳಿಕೆ ಸುಂದರರಾಮ ಶೆಟ್ಟಿಯವರದು. ದೇಶಕ್ಕೆ ಬಂಟರು ನೀಡಿದ ಅತ್ಯಮೂಲ್ಯ ಕೊಡುಗೆಗಳಲ್ಲಿ ವಿಜಯ ಬ್ಯಾಂಕ್ ಒಂದು. ಇಂದು ಇದರ ಲಾಭವನ್ನು ಎಲ್ಲ ಜಾತಿ ಸಮುದಾಯಗಳು ತಮ್ಮದಾಗಿಸಿಕೊಳ್ಳುತ್ತಾ ಬಂದಿವೆ. ಬಂಟರ ಅಸ್ಮಿತೆ, ಆತ್ಮಗೌರವದ ಸಂಕೇತವಾಗಿರುವ ಈ ಬ್ಯಾಂಕ್‌ನ ಹೆಸರನ್ನೇ ನಾಮಾವಶೇಷ ಮಾಡಲು ಕೇಂದ್ರ ಸರಕಾರ ಹೊರಟಿದೆ. ಇಷ್ಟಕ್ಕೂ ವಿಜಯಬ್ಯಾಂಕ್‌ನ್ನು ಮುಗಿಸುವುದಕ್ಕೆ ಸರಕಾರದ ಬಳಿ ಸ್ಪಷ್ಟ ಕಾರಣವೇ ಇಲ್ಲ. ಯಾಕೆಂದರೆ ರಾಜ್ಯದ ಹಿಡಿತದಲ್ಲಿರುವ ಕೆಲವೇ ಕೆಲವು ಬ್ಯಾಂಕ್‌ಗಳಲ್ಲಿ ಲಾಭದಲ್ಲಿರುವ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ವಿಜಯ ಬ್ಯಾಂಕ್ ಹೊಂದಿದೆ. ವಿಪರ್ಯಾಸವೆಂದರೆ, ಗುಜರಾತಿನ ಬರೋಡಾ ಬ್ಯಾಂಕ್‌ನ್ನು ಉಳಿಸುವ ಒಂದೇ ಕಾರಣಕ್ಕಾಗಿ ವಿಜಯಬ್ಯಾಂಕ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗಿದೆ. 

ಬೃಹತ್ ವರ್ತಕರು ಸಾಲ ಮರುಪಾವತಿ ಮಾಡದೇ ಇರುವುದರಿಂದ ಗುಜರಾತಿನ ಬರೋಡಾ ಮತ್ತು ಮಹಾರಾಷ್ಟ್ರದ ದೇನಾ ಬ್ಯಾಂಕ್ ಮುಳುಗುವ ಹಂತದಲ್ಲಿದೆ. ಅದನ್ನು ರಕ್ಷಿಸುವುದಕ್ಕಾಗಿ ವಿಜಯ ಬ್ಯಾಂಕ್‌ನ್ನು ಬರೋಡಾ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲು ಸರಕಾರ ನಿರ್ಧರಿಸಿದೆ. 2018ರ ಮಾರ್ಚ್ 31ರಂದು ಕೊನೆಗೊಂಡ ವಿತ್ತವರ್ಷದಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳ ಒಟ್ಟು ನಷ್ಟದ ಮೊತ್ತವು 87,370 ಕೋಟಿ ರೂ. ತಲುಪಿದೆ. ವಂಚನೆ ಹಗರಣಗಳಿಂದ ತತ್ತರಿಸಿರುವ ಪಂಜಾಬ್ ರಾಷ್ಟ್ರೀಯ ಬ್ಯಾಂಕ್ ನಷ್ಟಕ್ಕೊಳಗಾದ ಬ್ಯಾಂಕುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. 2017-18ರ ವಿತ್ತ ವರ್ಷದಲ್ಲಿ ಸರಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳ ಪೈಕಿ ಕೇವಲ ಇಂಡಿಯನ್ ಬ್ಯಾಂಕ್ ಹಾಗೂ ವಿಜಯ ಬ್ಯಾಂಕ್ ಮಾತ್ರ ಲಾಭವನ್ನು ಗಳಿಸಿದ್ದವು. ವಿಜಯ ಬ್ಯಾಂಕ್ 727 ಕೋಟಿ ರೂ. ಲಾಭವನ್ನು ದಾಖಲಿಸಿದೆ. ಇದು ನಿಜಕ್ಕೂ ವಿಜಯಬ್ಯಾಂಕ್‌ನ ಹೆಮ್ಮೆಯಾಗಿದೆ. 

ಇತ್ತ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ 2017-18ರ ಸಾಲಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 3,102.34 ಕೋಟಿ ರೂ. ಒಟ್ಟು ನಷ್ಟ ಅನುಭವಿಸಿದೆ. ಗುಜರಾತ್‌ನ ಅಭಿವೃದ್ಧಿಯ ಹಿಂದಿರುವ ಕರಾಳಮುಖವನ್ನು ಇದು ಹೇಳುತ್ತದೆ. ಹೇಗೆ ಗುಜರಾತ್‌ನ ಬೃಹತ್ ಉದ್ಯಮಿಗಳು ಬ್ಯಾಂಕ್‌ಗಳನ್ನು ವಂಚಿಸಿದರು ಎನ್ನುವುದಕ್ಕೆ ಬರೋಡಾ ಬ್ಯಾಂಕ್ ಅತ್ಯುತ್ತಮ ಉದಾಹರಣೆಯಾಗಿದೆ. 2016-17ರ ಸಾಲಿನ ಕೆಟ್ಟ ಸಾಲಗಳಿಗಾಗಿನ ಮೀಸಲು ನಿಧಿಯ ಮೊತ್ತವು 2,425.07 ಕೋಟಿ ರೂ. ಆಗಿದ್ದರೆ, 2017-18ರ ಸಾಲಿನಲ್ಲಿ ಇದೇ ಅವಧಿಯಲ್ಲಿ ಕೆಟ್ಟ ಸಾಲಗಳಿಗಾಗಿನ ಮೀಸಲು ನಿಧಿಯ ಮೊತ್ತವು 7,052.53 ಕೋಟಿ ರೂ.ಗೆ ಜಿಗಿದಿದೆಯೆಂದು ಬರೋಡಾ ಬ್ಯಾಂಕ್ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. ದೇನಾ ಬ್ಯಾಂಕ್‌ನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. 2018 ಸೆಪ್ಟಂಬರ್‌ನಲ್ಲಿ ಕೊನೆಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 416.70 ಕೋಟಿ ರೂ.ಗಳ ಒಟ್ಟು ನಷ್ಟವುಂಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿದ್ದುದಕ್ಕಿಂತ ಎರಡು ಪಟ್ಟು ಹೆಚ್ಚಳವಾಗಿದೆಯೆಂದು ಸರಕಾರಿ ಸ್ವಾಮ್ಯದ ದೇನಾ ಬ್ಯಾಂಕ್ ಮಂಗಳವಾರ ಬಹಿರಂಗಪಡಿಸಿತ್ತು. ಕಳೆದ ವಿತ್ತ ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ ದೇನಾ ಬ್ಯಾಂಕ್, 185.02 ಕೋಟಿ ರೂ.ಗಳ ಒಟ್ಟು ನಷ್ಟವನ್ನು ದಾಖಲಿಸಿದೆ. ಇದೀಗ ಈ ಬರೋಡಾ ಮತ್ತು ದೇನಾ ಬ್ಯಾಂಕ್‌ಗಳು ಮಾಡಿರುವ ತಪ್ಪುಗಳಿಗೆ ಕರಾವಳಿಯ ವಿಜಯಬ್ಯಾಂಕ್ ಬೆಲೆ ತೆರಬೇಕಾಗಿದೆ.

ಒಂದು ದುರ್ಬಲ ಬ್ಯಾಂಕನ್ನು,ಇನ್ನೊಂದು ಬಲಿಷ್ಠ ಬ್ಯಾಂಕ್‌ನ ಜೊತೆ ವಿಲೀನಗೊಳಿಸುವುದು ಒಂದು ಕಾರ್ಯತಂತ್ರ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಸರಿ, ಒಪ್ಪಿಕೊಳ್ಳೋಣ. ಆದರೆ ವಿಜಯಬ್ಯಾಂಕ್ ಯಾಕೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬೇಕು. ಈ ವಿಲೀನದಲ್ಲಿ ಬಲಿಷ್ಠವಾಗಿರುವುದು ವಿಜಯಬ್ಯಾಂಕ್. ಹೀಗಿರುವಾಗ ಬರೋಡಾ ಮತ್ತು ದೇನಾ ಬ್ಯಾಂಕ್‌ನ್ನು ವಿಜಯ ಬ್ಯಾಂಕ್‌ನ ಜೊತೆಗೆ ವಿಲೀನ ಗೊಳಿಸಿ ಅದರ ಹೆಸರನ್ನು ಶಾಶ್ವತವಾಗಿ ಇಡಬೇಕು. ಆದರೆ ಇಂದು ನಡೆಯುತ್ತಿರುವುದೇ ಬೇರೆ. ವಿಜಯ ಬ್ಯಾಂಕ್ ಶಾಶ್ವತವಾಗಿ ಮುಚ್ಚಲಿದೆ. ವಿಜಯ ಬ್ಯಾಂಕ್‌ನ್ನು ಬಲಿ ತೆಗೆದುಕೊಂಡು ಬರೋಡಾ ಬ್ಯಾಂಕ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ. ಗುಜರಾತಿಗಳ ಲಾಬಿಯನ್ನು ಇದು ಎತ್ತಿ ಹಿಡಿಯುತ್ತದೆ. ಆರ್ಥಿಕವಾಗಿ ದಕ್ಷಿಣ ಭಾರತದ ಪ್ರಮುಖ ಹೆಜ್ಜೆಗಳು ಮೈಸೂರು ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಆಗಿತ್ತು. ಇದೀಗ ಆ ಹೆಜ್ಜೆಗಳ ಗುರುತುಗಳನ್ನೇ ಸರಕಾರ ಅಳಿಸಿ ಹಾಕಲು ಹೊರಟಿದೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಉತ್ತರ ಭಾರತದ ನಷ್ಟದಲ್ಲಿರುವ ಬ್ಯಾಂಕುಗಳೆಲ್ಲ ದಕ್ಷಿಣ ಭಾರತದ ರಾಜ್ಯದ ಅಧೀನದಲ್ಲಿರುವ ಬ್ಯಾಂಕುಗಳನ್ನು ಒಂದೊಂದಾಗಿ ಬಲಿ ಹಾಕಲಿವೆ. ಇದರಿಂದಾಗಿ ಬ್ಯಾಂಕುಗಳ ಹಿಡಿತ ಸಂಪೂರ್ಣವಾಗಿ ಉತ್ತರ ಭಾರತೀಯರ ಕೈ ಸೇರುತ್ತದೆ. 

ಈಗಾಗಲೇ ದಕ್ಷಿಣ ಭಾರತದ ಬ್ಯಾಂಕುಗಳಲ್ಲಿ ಉತ್ತರ ಭಾರತದ ಸಿಬ್ಬಂದಿಯೇ ತುಂಬಿಹೋಗಿದ್ದಾರೆ. ಯಾವುದೇ ಬ್ಯಾಂಕುಗಳಲ್ಲಿ ಹಿಂದಿ ಭಾಷೆ ಅರಿಯದವರು ವ್ಯವಹರಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಇದೀಗ ವಿಜಯ ಬ್ಯಾಂಕ್ ಬರೋಡಾ ಬ್ಯಾಂಕ್ ಆಗಿ ಪರಿವರ್ತನೆಗೊಂಡ ಬಳಿಕ, ಅದರ ನೇರ ಹಿಡಿತ ಗುಜರಾತಿಗಳ ಕೈ ಸೇರುತ್ತದೆ. ನಮ್ಮ ನೆಲದ ಮಕ್ಕಳು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ನಾವೇಕೆ ಗುಜರಾತ್‌ನ ಬನಿಯಾಗಳ ಕೈಗೆ ಒಪ್ಪಿಸಬೇಕು. ಕರಾವಳಿಯ ಜನರು ಮಾತ್ರವಲ್ಲ, ಕರ್ನಾಟಕದ ಜನತೆ ಒಕ್ಕೊರಲಲ್ಲಿ ಕೇಳಬೇಕಾದ ಪ್ರಶ್ನೆಯಿದು. ಹೀಗೆ ಆದಲ್ಲಿ ಕರಾವಳಿಯ ಒಂದೊಂದೇ ಬ್ಯಾಂಕುಗಳು, ಉತ್ತರ ಭಾರತೀಯರ ಹಿಡಿತದಲ್ಲಿರುವ ಮುಳುಗುತ್ತಿರುವ ಬ್ಯಾಂಕುಗಳನ್ನು ಮೇಲೆತ್ತುವುದಕ್ಕೆ ಬಲಿಯಾಗಬೇಕಾಗಬಹುದು. ಬರೋಡಾ ಮತ್ತು ದೇನಾ ಬ್ಯಾಂಕ್ ವಿಜಯ ಬ್ಯಾಂಕ್ ಜೊತೆಗೆ ವಿಲೀನವಾಗಲಿ. ಬ್ಯಾಂಕಿನ ಹೆಸರು ವಿಜಯ ಬ್ಯಾಂಕ್ ಎಂದೇ ಇರಲಿ. ದಕ್ಷಿಣ ಭಾರತದ ಬ್ಯಾಂಕುಗಳು ತಮ್ಮ ಒಡೆತನವನ್ನು ಉತ್ತರ ಭಾರತೀಯರಿಗೆ ಬಿಟ್ಟುಕೊಡಬಾರದು.ಇದಕ್ಕಾಗಿ ಧ್ವನಿಯೆತ್ತುವುದು ಕೇವಲ ಬಂಟರ ಹೊಣೆಗಾರಿಕೆ ಮಾತ್ರವಲ್ಲ, ಸರ್ವ ಕನ್ನಡಿಗರ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News