ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಎಚ್.ಡಿ.ದೇವೇಗೌಡ

Update: 2019-01-05 12:39 GMT

ಬೆಂಗಳೂರು, ಜ.5: ಜನಪರ ಹೋರಾಟ ಹಾಗೂ ಅಭಿವೃದ್ಧಿ ಮೂಲಕವೇ ನಾನು ಈ ದೇಶದ ಪ್ರಧಾನಿಯಾಗಿದ್ದೆ. ಹಲವು ಬಾರಿ ಸೋಲು ಗೆಲುವುಗಳನ್ನು ಕಂಡಿದ್ದೇನೆ. ಇನ್ನು ಮುಂದೆ ಪಕ್ಷ ಸಂಘಟನೆ ಹಾಗೂ ಯುವ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸುವುದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಶನಿವಾರ ನಗರದ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿನ ಎಲ್ಲ ಪ್ರಾದೇಶಿಕ ಪಕ್ಷಗಳು ಒಗ್ಗೂಡುತ್ತಿದ್ದು, ಈ ಪಕ್ಷಗಳಿಂದಲೇ ಅಭಿವೃದ್ಧಿ ಸಾಧ್ಯ ಎನ್ನುವ ಮಟ್ಟಿಗೆ ಬೆಳೆದಿವೆ. ನಾನು ಜೆಡಿಎಸ್ ಪಕ್ಷವನ್ನು ಕಟ್ಟಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಇನ್ನು ಮುಂದೆ ಅಧಿಕಾರದಿಂದ ದೂರವಿದ್ದು ಪಕ್ಷದ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಲು ಹಾಗೂ ಪಕ್ಷವನ್ನು ಬೇರು ಮಟ್ಟದಿಂದ ಸದೃಢಗೊಳಿಸಲು ಹೋರಾಟ ನಡೆಸುತ್ತೇನೆ. ಹಾಗೆಯೇ ಇನ್ನು ಮುಂದೆ ಲೋಕಸಭಾ ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ರಫೇಲ್ ಡೀಲ್ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಉತ್ತರ ನೀಡಬೇಕಾಗಿತ್ತು. ಆದರೆ, ಯಾಕೆ ಉತ್ತರ ನೀಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ನುಡಿದರು. ಪ್ರಧಾನಿ ಮೋದಿ ಅವರು ಪ್ರತಿ ವಿಚಾರದ ಬಗ್ಗೆಯೂ ದೇಶದ ಜನತೆಗೆ ಸ್ಪಷ್ಟನೆ ನೀಡುವ ಅವಶ್ಯಕತೆ ಇರುತ್ತದೆ. ನಾನು ಪ್ರಧಾನಿ ಆಗಿದ್ದಾಗ ಸರಕಾರ ಕೈಗೊಂಡ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News