ಪ್ರತಿ ಜಿಲ್ಲೆಯಲ್ಲೂ ವಿಜ್ಞಾನ ಕೇಂದ್ರ ಸ್ಥಾಪನೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

Update: 2019-01-07 13:42 GMT

ಬೆಂಗಳೂರು, ಜ.7: ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವಿಜ್ಞಾನ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ನಗರದ ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೋತ್ಸಾಹಿಸಲು ಪ್ರತಿ ಜಿಲ್ಲೆಯಲ್ಲೂ ವಿಜ್ಞಾನ ಕೇಂದ್ರ ತೆರೆಯುವ ಕಾರ್ಯಪ್ರಗತಿಯಲ್ಲಿದೆ ಎಂದರು. ನಮ್ಮ ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಜ್ಞಾನಿ ಅಲ್ಲದಿದ್ದರೂ ಪಠ್ಯಗಳಲ್ಲಿ ವಿಜ್ಞಾನದ ವಿಷಯವನ್ನು ಪರಿಣಾಮಕಾರಿಯಾಗಿ ಅಳವಡಿಸಿದ್ದಾರೆ. ಅವರು ಆರ್ಥಿಕ ತಜ್ಞರಾಗಿದ್ದರೂ ವಿಜ್ಞಾನದ ಬಗ್ಗೆ ದೂರದೃಷ್ಟಿ ಹೊಂದಿದ್ದರು ಎಂದು ಪರಮೇಶ್ವರ್ ಸ್ಮರಿಸಿದರು.

ರಾಜ್ಯದಲ್ಲಿ ವಿಜ್ಞಾನಕ್ಕೆ ಹೆಚ್ಚು ಆದ್ಯತೆ ಸಿಕ್ಕಿದ್ದು ಮೈಸೂರು ರಾಜರ ಕಾಲದಲ್ಲಿ. ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ತೆರೆಯಲು 500 ಎಕರೆ ಜಾಗ ನೀಡದೇ ಇದಿದ್ದರೆ ಇಂಥ ದೊಡ್ಡ ಸಂಸ್ಥೆಯನ್ನು ನಾವು ತೆರೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.

ಕರ್ನಾಟಕದಿಂದ ಸಾಕಷ್ಟು ವಿಜ್ಞಾನಿಗಳು ಹೊರಬಂದಿದ್ದಾರೆ. ಭಾರತರತ್ನ ಡಾ.ಸಿಎನ್‌ಆರ್ ರಾವ್ ಅವರು 38 ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ ಎಂದ ಅವರು, ನಗರದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಿಜ್ಞಾನ ಮೇಳ ಆಯೋಜನೆ ಮಾಡಿರುವುದು ಶ್ಲಾಘನೀಯ. ರಾಜ್ಯ, ಅಂತರ್‌ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳದಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಲು ಸಹಕರಿಸಿದಂತಾಗಲಿದೆ. ಇಂಥ ಮೇಳಗಳು ಇನ್ನಷ್ಟು ಹೆಚ್ಚಾಗಬೇಕು ಎಂದು ಡಾ.ಜಿ.ಪರಮೇಶ್ವರ್ ಇದೇ ಸಂದರ್ಭದಲ್ಲಿ ಆಶಯವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News