ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿಗೆ ಯಾರು ಕಾರಣ ಎಂಬುದರ ಬಗ್ಗೆ ಚರ್ಚೆಯಾಗಲಿ: ನ್ಯಾ.ಸಂತೋಷ್ ಹೆಗ್ಡೆ

Update: 2019-01-07 16:46 GMT

ಬೆಂಗಳೂರು, ಜ.7: ನ್ಯಾಯದಾನದಲ್ಲಿನ ವಿಳಂಬ, ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಉಳಿಯುವುದಕ್ಕೆ ವ್ಯವಸ್ಥೆ ಕಾರಣವೇ ಅಥವಾ ಸಮಾಜ ಹೊಣೆಯೇ ಎಂಬುದರ ಬಗ್ಗೆ ಚರ್ಚೆಗಳು ನಡೆದು ಕಾರಣಕರ್ತರು ಯಾರು ಎನ್ನುವುದು ಬಹಿರಂಗವಾಗಬೇಕು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಹೈಕೋರ್ಟ್ ಸಭಾಂಗಣ-1ರಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಪಿ.ಶಿವಣ್ಣನವರು ಬರೆದಿರುವ ನ್ಯಾಯಾಂಗದ ನಕ್ಷತ್ರಗಳು ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನ್ಯಾಯಾಲಯಗಳಲ್ಲಿ ಇರುವ ಕೇಸ್‌ಗಳು ಕೊನೆ ಹಂತಕ್ಕೆ ಬರುವಾಗ ಬಹಳಷ್ಟು ಸಮಯ ಆಗಿರುತ್ತದೆ. ದೇಶದ ವಿವಿಧ ಅಧೀನ ನ್ಯಾಯಾಲಯಗಳಲ್ಲಿ 164 ಪ್ರಕರಣಗಳು 60 ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಇವೆ ಎನ್ನುವ ಮಾಹಿತಿಯಿದೆ. ಅನೇಕ ಸಂದರ್ಭಗಳಲ್ಲಿ ಕೇಸ್ ಇತ್ಯರ್ಥಗೊಳ್ಳಲು 30-40 ವರ್ಷ ಸಮಯ ಹಿಡಿಯುತ್ತದೆ. ಇಷ್ಟೊಂದು ದೀರ್ಘ ಕಾಲದ ಬಳಿಕ ತೀರ್ಪು ಬಂದರೆ ಅದಕ್ಕೆ ಯಾವ ಬೆಲೆ ಬರುತ್ತದೆ. ಈ ಬಗ್ಗೆ ಚರ್ಚೆಗಳು ಆಗಬೇಕು. ಸಮಸ್ಯೆ ಎಲ್ಲಿದೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ಹೇಳಿದರು.

ಹೈಕೋರ್ಟ್‌ನಲ್ಲಿ 30 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ಹೀಗೆ ಹುದ್ದೆಗಳು ಖಾಲಿ ಇದ್ದಾಗ ತ್ವರಿತ ನ್ಯಾಯಾದಾನ ಹೇಗೆ ಸಾಧ್ಯ. ಈ ನ್ಯಾಯಾದಾನ ವಿಳಂಬಕ್ಕೆ ಬರೀ ನ್ಯಾಯಾಂಗವನ್ನಷ್ಟೇ ದೂಷಣೆ ಮಾಡುವುದು ಸರಿಯಲ್ಲ. ಸರಕಾರಗಳೂ ಸಹ ಇದಕ್ಕೆ ಕಾರಣ. ಅಲ್ಲದೆ, ಖಾಲಿ ಹುದ್ದೆಗಳ ಭರ್ತಿ ಕುರಿತು ಚರ್ಚೆ, ಸಂವಾದ ಏರ್ಪಟ್ಟಲ್ಲಿ ವಕೀಲರ ಸಮೂಹಕ್ಕೆ ನನ್ನ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ ಮಾತನಾಡಿ, ಹೈಕೋರ್ಟ್‌ನ 10 ನ್ಯಾಯಮೂರ್ತಿಗಳ ನೇಮಕ ಪ್ರಸ್ತಾವನೆ ಕಳೆದ 6 ತಿಂಗಳಿಂದ ಕೇಂದ್ರ ಸರಕಾರದಲ್ಲಿ ಬಾಕಿ ಉಳಿದಿದೆ. 300ಕ್ಕೂ ಹೆಚ್ಚು ಸರಕಾರಿ ಅಭಿಯೋಜಕರ ಹುದ್ದೆಗಳು ಖಾಲಿ ಇವೆ. ಒಬ್ಬ ಸರಕಾರಿ ಅಭಿಯೋಜಕರು ನಾಲ್ಕು ಕೋರ್ಟ್‌ಗಳನ್ನು ನೋಡಿಕೊಳ್ಳಬೇಕಾಗಿದೆ. ಹೀಗಾಗಿ, ನ್ಯಾಯಮೂರ್ತಿಗಳ ನೇಮಕ ಸೇರಿದಂತೆ ಹೈಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ತ್ವರಿತವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯಾಂಗದ ನಕ್ಷತ್ರಗಳು ಪುಸ್ತಕದ ಲೇಖಕ ಹಿರಿಯ ವಕೀಲ ಪಿ. ಶಿವಣ್ಣ, ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ಹೈಕೋರ್ಟ್ ವಿಭಾಗದ ಜಂಟಿ ಕಾರ್ಯದರ್ಶಿ ಡಿ.ಸಿ.ಪರಮೇಶ್ವರಯ್ಯ, ಉಪಾಧ್ಯಕ್ಷ ಆರ್.ಜಿ.ಹಾಲೇಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News