ಮೇಲ್ಜಾತಿಗೆ ಮೀಸಲಾತಿ ಎಂಬ ಮೋದಿಯ ಜುಮ್ಲಾ

Update: 2019-01-09 05:47 GMT

ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಪ್ರಧಾನಿ ಮೋದಿಯವರು ಇನ್ನೊಂದು ‘ಬುಲೆಟ್ ಟ್ರೈನ್’ನ್ನು ಆತುರಾತುರವಾಗಿ ಉದ್ಘಾಟಿಸಿದ್ದಾರೆ. ಮೇಲ್ಜಾತಿಗೆ ಶೇ. 10ರಷ್ಟು ಮೀಸಲಾತಿಯನ್ನು ನೀಡುವುದಾಗಿ ಅವರು ಘೋಷಿಸಿದ್ದಾರೆ. ಇದು ಜಾರಿಗೆ ಬಂದರೆ ಇನ್ನು ಮುಂದೆ ಬ್ರಾಹ್ಮಣರು, ಠಾಕೂರ್, ಜಾಟ್, ಮರಾಠಾ ಮತ್ತು ಬನಿಯಾಗಳು ಈ ಮೀಸಲಾತಿಯ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಹತ್ತು ಹಲವು ವಿರೋಧಾಭಾಸಗಳಿಂದ ಕೂಡಿರುವ ಈ ಘೋಷಣೆ ಮೋದಿಯವರ ಇನ್ನೊಂದು ಜುಮ್ಲಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಸರಕಾರ ಈ ಅವಧಿಯಲ್ಲಂತೂ ಇದನ್ನು ಜಾರಿಗೆ ತರುವುದಕ್ಕೆ ಸಾಧ್ಯವಿಲ್ಲ. ಸಂಸತ್ತಿನಲ್ಲಿ ಮಂಡಿಸಿದ ಬಳಿಕ ಅದು ರಾಜ್ಯಸಭೆಯಲ್ಲಿ ಚರ್ಚೆಯಾಗಿ ರಾಷ್ಟ್ರಪತಿಯ ಬಳಿ ಹೋಗುವಷ್ಟರಲ್ಲಿ ಮೋದಿಯ ಅಧಿಕಾರ ಮುಗಿದಿರುತ್ತದೆ. ನರೇಂದ್ರ ಮೋದಿಯವರು ತಮ್ಮ ಆಡಳಿತದ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಯಿಂದಾಗಿ ತಳಸ್ತರ ವರ್ಗದ ನಂಬಿಕೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಅತಿ ಕಡಿಮೆ ಮತಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಜೊತೆಗೆ ಜಾಟ್, ಮರಾಠಾ ಸಮುದಾಯಗಳೂ ಮೀಸಲಾತಿಗಾಗಿ ಬೀದಿಗಿಳಿದಿವೆ ಮತ್ತು ಮೋದಿಯ ವಿರುದ್ಧ ಅಸಮಾಧಾನವನ್ನು ಹೊಂದಿವೆ. ಮೇಲ್ಜಾತಿಯ ಮತಗಳನ್ನು ಒಲಿಸಿಕೊಳ್ಳುವ ಒಂದೇ ಒಂದು ಉದ್ದೇಶದಿಂದ ಮೋದಿ ಈ ಘೋಷಣೆಯನ್ನು ಮಾಡಿದ್ದಾರೆ. ಆದರೆ ಈ ಘೋಷಣೆ ದೇಶದಲ್ಲಿ ಮತ್ತೆ ಜಾತಿ ಪ್ರಜ್ಞೆಯನ್ನು ಎತ್ತಿ ಹಿಡಿದಿದೆ. ಈವರೆಗೆ ಜಾತಿ ಭೇದವಿಲ್ಲ, ಜಾತಿಯ ಹೆಸರಲ್ಲಿ ಮೀಸಲಾತಿ ಬೇಡ ಎನ್ನುತ್ತಿದ್ದ ಬಿಜೆಪಿಯೇ ಇದೀಗ ಮೇಲ್ಜಾ ತಿಯ ಪರವಾಗಿ ಮೀಸಲಾತಿಯನ್ನು ಜಾರಿಗೊಳಿಸಲು ಹೊರಟಿರುವುದು ಬಿಜೆಪಿಯ ಜೊತೆಗಿರುವ ಹಿಂದುಳಿದವರ್ಗಗಳ ಸಮುದಾಯವನ್ನು ಮುಜುಗರಕ್ಕೀಡು ಮಾಡಿದೆ. ಇದೇ ಸಂದರ್ಭದಲ್ಲಿ, ಮೀಸಲಾತಿಗಾಗಿ ಇರುವ ಮಾನದಂಡವೂ ಪ್ರಶ್ನಾರ್ಹವಾಗಿದೆ. ಮೇಲ್ಜಾತಿಯ ಅಶಕ್ತರು ಎಂದು ಹೇಳುವ ಬಿಜೆಪಿ ಅದಕ್ಕಿಟ್ಟ ಅರ್ಹತೆಯಾದರೂ ಏನು? ತಿಂಗಳಿಗೆ 60,000 ರೂ. ಆದಾಯವಿರುವ, 5 ಎಕರೆ ಭೂಮಿಯನ್ನು ಹೊಂದಿರುವ, ಒಂದು ಸಾವಿರ ಚದರ ಅಡಿ ಫ್ಲಾಟ್ ಹೊಂದಿರುವ ಮೇಲ್ಜಾತಿಯ ಜನರನ್ನು ಕೇಂದ್ರ ಸರಕಾರ ಬಡವರು ಎಂದು ಬಿಂಬಿಸಲು ಹೊರಟಿದೆ. ದಲಿತರ ಮೀಸಲಾತಿಯಲ್ಲಿ ಕೆನೆಪದರ ತರಲು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತಿಂಗಳಿಗೆ 60,000 ರೂ. ವೇತನವಿರುವ ಒಬ್ಬ ಮೇಲ್ಜಾತಿಯ ಸದಸ್ಯನನ್ನು ಬಡವನೆಂದು ಬಿಂಬಿಸುವುದು ಎಷ್ಟು ಸರಿ? ಕನಿಷ್ಠ ಇದರಿಂದಾಗಿ ಮೇಲ್ಜಾತಿಯ ನಿಜವಾದ ಬಡವರಿಗಾದರೂ ಎಷ್ಟರ ಮಟ್ಟಿಗೆ ಲಾಭವಾಗುತ್ತದೆ? ಇಂದಿಗೂ ಮೇಲ್ಜಾತಿ ಅದರಲ್ಲೂ ಬ್ರಾಹ್ಮಣ ವರ್ಗದಲ್ಲಿ ಕಷ್ಟದಿಂದ ಜೀವನ ಸಾಗಿಸುವವರಿದ್ದಾರೆ. ಮೋದಿಯ ಮೀಸಲಾತಿ ಆ ವರ್ಗವನ್ನು ತಲುಪುವುದಿಲ್ಲ. ಮೇಲ್ಜಾತಿಯಲ್ಲಿರುವ ಮೇಲ್ಮಧ್ಯಮ ವರ್ಗವನ್ನು ಮೆಚ್ಚಿಸುವ ಉದ್ದೇಶವನ್ನು ಇದು ಹೊಂದಿದೆ. ಸರಕಾರ ದೇಶದ ಬಡತನದ ಕುರಿತಂತೆ ಎಷ್ಟು ಅನಕ್ಷರಸ್ಥ ಎನ್ನುವುದನ್ನು ಇದು ಹೇಳುತ್ತಿದೆ.

  ಇಷ್ಟಕ್ಕೂ ಅಂಬೇಡ್ಕರ್ ಮೀಸಲಾತಿಯನ್ನು ಜಾರಿಗೆ ತಂದಿರುವುದು ಬಡವರನ್ನು ಶ್ರೀಮಂತರನ್ನಾಗಿ ಮಾಡುವುದಕ್ಕಲ್ಲ. ಈ ದೇಶದ ಎಲ್ಲ ಬಡವರಿಗಾಗಿ ಸಾಕಷ್ಟು ಯೋಜನೆಗಳಿವೆ. ಬಿಪಿಎಲ್ ಕಾರ್ಡ್, ಒಂದು ಕೆಜಿ ಅಕ್ಕಿ, ಸರಕಾರಿ ಶಾಲೆಯ ಯೋಜನೆಗಳು ಇವೆಲ್ಲವೂ ಎಲ್ಲ ಜಾತಿಯ ಬಡವರನ್ನು ಗುರಿಯಾಗಿಟ್ಟುಕೊಂಡಿದೆ. ಮೀಸಲಾತಿ ಜಾರಿಗೆ ಬಂದಿರುವುದು, ಜಾತಿಯ ಕಾರಣದಿಂದಾಗಿ ಶಿಕ್ಷಣ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜವನ್ನು ಮೇಲೆತ್ತುವುದಕ್ಕಾಗಿ. ಇಂದು ಬಡವನಾಗಿದ್ದ ಮೇಲ್ಜಾತಿಯ ವ್ಯಕ್ತಿ ನಾಳೆ ಶ್ರೀಮಂತನಾಗಬಹುದು. ಬಡವ ಶ್ರೀಮಂತನಾದಾಗ ಆತನ ಘನತೆ ಸಮಾಜದಲ್ಲಿ ಎತ್ತರಿಸಲ್ಪಡುತ್ತದೆ. ಆದರೆ ಇಂದು ದಲಿತನಾಗಿದ್ದವ ನಾಳೆ ಬ್ರಾಹ್ಮಣನಾಗಿ ಬದಲಾಗಿ ಘನತೆಯ ಬದುಕನ್ನು ಸಾಗಿಸಲು ಸಾಧ್ಯವಿಲ್ಲ. ಆತ ಎಷ್ಟೇ ಶ್ರೀಮಂತನಾಗಿದ್ದರೂ ದೇವಸ್ಥಾನದ ಹೊರಗೆ ನಿಲ್ಲಬೇಕಾಗುತ್ತದೆ. ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ರಾಷ್ಟ್ರಪತಿಗೆ ಆದ ಅವಮಾನವನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ದಲಿತ ಸಮುದಾಯದಿಂದ ಬಂದ ಒಬ್ಬ ರಾಷ್ಟ್ರಪತಿಯ ಸ್ಥಿತಿಯೇ ಹೀಗಿರುವಾಗ ಈ ದೇಶದ ಗ್ರಾಮೀಣ ಪ್ರದೇಶದಲ್ಲಿರುವ ದಲಿತ ಸಮುದಾಯದ ಸ್ಥಿತಿ ಹೇಗಿರಬಹುದು? ಮೇಲ್ಜಾತಿಯ ಒಬ್ಬ ನಕಲಿ ಆದಾಯ ಪತ್ರ ಸೃಷ್ಟಿಸಿ ಮೀಸಲಾತಿಯನ್ನು ಕಬಳಿಸುವ ಸಾಧ್ಯತೆಗಳಿರುತ್ತದೆ. ಆದರೆ ಒಬ್ಬ ದಲಿತ ತಾನು ಮೇಲ್ಜಾತಿ ಯವನೆಂದು ದಾಖಲೆ ಸೃಷ್ಟಿಸಿ ಸಮಾಜದಲ್ಲಿ ಘನತೆಯ ಬದುಕನ್ನು ಬದುಕಲು ಸಾಧ್ಯವಿಲ್ಲ.

    ಇಷ್ಟಕ್ಕೂ ಮೇಲ್ಜಾತಿಯಲ್ಲಿರುವ ಬಡವರ ಪ್ರಮಾಣ ಎಷ್ಟು ಎನ್ನುವ ಒಂದು ವರದಿಯನ್ನು ತರಿಸಿಕೊಂಡ ಬಳಿಕ ಮೀಸಲಾತಿಯ ಪ್ರಮಾಣವನ್ನು ಮತ್ತು ಅದಕ್ಕೆ ಬೇಕಾದ ಮಾನದಂಡವನ್ನು ಸೂಚಿಸುವ ಅವಕಾಶ ಸರಕಾರಕ್ಕಿತ್ತು. ಬ್ರಾಹ್ಮಣರು, ರಜಪೂತರು, ಜಾಟರು ಮತ್ತು ಮರಾಠರ ಆರ್ಥಿಕ ಹಿನ್ನೆಲೆ ಮತ್ತು ಈಗಾಗಲೇ ಕಳೆದ 50 ವರ್ಷಗಳಿಂದ ಮೀಸಲಾತಿಯನ್ನು ಪಡೆದುಕೊಂಡು ಬದುಕು ರೂಪಿಸಿಕೊಳ್ಳುತ್ತಿರುವ ಕೆಳಜಾತಿಯವರ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ತಾಳೆಗೊಳಪಡಿಸಿದಾಗ ಈ ದೇಶದಲ್ಲಿ ಮೀಸಲಾತಿ ಪ್ರಾಮಾಣಿಕವಾಗಿ ಅನುಷ್ಠಾನಗೊಂಡೇ ಇಲ್ಲ ಎನ್ನುವ ಸತ್ಯ ಬಹಿರಂಗವಾಗುತ್ತದೆ. ರಾಜಕೀಯವಾಗಿ ಬಹುಪಾಲು ಸ್ಥಾನಗಳನ್ನು ಮೇಲ್ಜಾತಿಯ ಜನರೇ ಹೊಂದಿದ್ದಾರೆ. ಆರ್ಥಿಕವಾಗಿಯೂ ಇವರೇ ದೇಶದಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಿರುವಾಗ ಮತ್ತೆ ಇವರನ್ನು ಮೇಲೆತ್ತಬೇಕಾದ ಅನಿವಾರ್ಯ ಏನಿದೆ? ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಈಗಾಗಲೇ ಸಬಲರಾಗಿರುವ ಮೇಲ್ಜಾತಿಗೆ ಇನ್ನಷ್ಟು ಮೀಸಲಾತಿ ನೀಡುವುದೆಂದರೆ, ಶೋಷಿತ ಸಮುದಾಯವನ್ನು ಇನ್ನಷ್ಟು ಕೆಳಮಟ್ಟಕ್ಕೆ ತಳ್ಳುವುದು ಎಂದೇ ಅರ್ಥ. ಒಂದು ರೀತಿಯಲ್ಲಿ ಇದು ಈಗಾಗಲೇ ಎರಡು ಕೋರೆ ಹಲ್ಲುಗಳನ್ನು ಹೊಂದಿರುವ ತೋಳಕ್ಕೆ ಇನ್ನೆರಡು ಹಲ್ಲುಗಳನ್ನು ಜೋಡಿಸಲು ಹೊರಟಂತೆ. ಹಾಗೆ ಹೇಳುವುದಾದರೆ ಮೇಲ್ಜಾತಿಯ ಶ್ರೀಮಂತರಿಗೆ ಸರಕಾರ ಈಗಾಗಲೇ ಮೀಸಲಾತಿಯನ್ನು ಸರಕಾರ ನೀಡಿದೆ. ‘ಪೇಮೆಂಟ್ ಸೀಟ್’ ಎನ್ನುವುದು ಹಣ ಇರುವವರಿಗಾಗಿಯೇ ಸರಕಾರ ನೀಡಿರುವ ವಿಶೇಷ ಮೀಸಲಾತಿಯಲ್ಲವೇ? ಯಾವುದೇ ಪ್ರತಿಭೆಯಿಲ್ಲದೇ ಇದ್ದರೂ, ಹಣ ಇರುವ ಒಂದೇ ಕಾರಣಕ್ಕಾಗಿ ಇವರು ಶಿಕ್ಷಣದಲ್ಲಿ ಮೀಸಲಾತಿಯನ್ನು ಪಡೆದುಕೊಳ್ಳುತ್ತಿಲ್ಲವೇ? ತಿಂಗಳಿಗೆ 60,000 ರೂ. ದುಡಿಯ ಬಲ್ಲವರು ತಮ್ಮ ಮಕ್ಕಳಿಗೆ ಯಾವ ಕೊರತೆಯೂ ಇಲ್ಲದೆ ಶಿಕ್ಷಣವನ್ನು ನೀಡಿ ಪ್ರತಿಭಾವಂತರನ್ನಾಗಿಸಬಲ್ಲರು. ಒಂದು ವೇಳೆ ಅವರು ಪ್ರತಿಭಾವಂತರಾಗದಿದ್ದರೆ ತಮ್ಮ ಹಣದ ಮೂಲಕ ಮೀಸಲಾತಿಯನ್ನು ಪಡೆಯಬಲ್ಲರು. ಭಾರತ ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ ಈ ದೇಶದ ಬಹುಸಂಖ್ಯಾತರಾಗಿರುವ ದಲಿತರು, ಶೂದ್ರರು ಮತ್ತು ಮುಸ್ಲಿಮರ ಬದುಕಿನಲ್ಲಿ ಬದಲಾವಣೆಗಳಾಗಬೇಕು. ಈ ಸಮುದಾಯದೊಳಗೆ ಮೀಸಲಾತಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೊಂಡಿದೆ, ಈ ಮೂಲಕ ಕೆಳಜಾತಿಗಳಲ್ಲಿ ತಿಂಗಳಿಗೆ 60,000 ರೂ. ವೇತನ ಪಡೆಯುವವರ ಸಂಖ್ಯೆಯೆಷ್ಟಿದೆ ಎನ್ನುವ ಗಣತಿಯೊಂದು ನಡೆಯಲಿ. 50 ವರ್ಷಗಳಿಂದ ಮೀಸಲಾತಿಯಿದ್ದರೂ ದಲಿತರ ಸ್ಥಿತಿ ಹಿಂದಿನಂತೆಯೇ ಇದೆಯೆಂದಾದರೆ ಅದಕ್ಕೆ ಕಾರಣರು ಯಾರು, ಮೀಸಲಾತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಜಾರಿಗೊಳಿಸಬಹುದು ಎನ್ನುವುದರ ಬಗ್ಗೆ ಸರಕಾರ ಯೋಚಿಸಬೇಕಾಗಿದೆ. ಇಂದು ಮೋದಿಯ ಬೆಂಬಲಕ್ಕೆ ನಿಂತ ದೊಡ್ಡ ಸಂಖ್ಯೆಯ ಕೆಳಜಾತಿಯ ಜನರಿದ್ದಾರೆ. ಆರೆಸ್ಸೆಸ್‌ನ ಕೋಮುಗಲಭೆಗಳ ತಂತ್ರಗಳಿಗೆ ಸಮಿತ್ತುಗಳು ಇವರು. ಕರಾವಳಿಯ ಕೋಮುಗಲಭೆಗಳಲ್ಲಿ ಪ್ರಕರಣಗಳನ್ನು ಜಡಿಸಿಕೊಂಡು ಜೈಲು ಸೇರಿರುವವರಲ್ಲಿ ಬಿಲ್ಲವರು, ಮೊಗವೀರರಂತಹ ಕೆಳಜಾತಿಯ ಜನರೇ ಅಧಿಕ. ಮೀಸಲಾತಿಯಿಂದ ಪ್ರತಿಭೆಗಳಿಗೆ ಅನ್ಯಾಯವಾಗುತ್ತದೆ ಎಂಬ ಸುಳ್ಳು ಹೇಳಿಕೆಗಳನ್ನು ಈ ಕೆಳಜಾತಿಯ ಹುಡುಗರ ತಲೆಗೆ ತುಂಬಿದ ಸರಕಾರವೇ ಇದೀಗ, ಮೇಲ್ಜಾತಿಗೆ ಮೀಸಲಾತಿಯನ್ನು ಕೊಡಲು ಹೊರಟಿದೆ. ಈ ಮೂಲಕ ತನ್ನನ್ನು ಮುಗ್ಧವಾಗಿ ನಂಬಿದ ಹಿಂದುಳಿದ ವರ್ಗಕ್ಕೆ ಬಿಜೆಪಿ ಬೆನ್ನಿಗೆ ಚೂರಿ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News