ಹರಪ್ಪನ್ ಕಾಲದ ಗೋರಿಯಲ್ಲಿ ಮಹಿಳೆ-ಪುರುಷ ಜೋಡಿ ಅಸ್ಥಿಪಂಜರ ಪತ್ತೆ

Update: 2019-01-09 10:39 GMT

ಪುಣೆ, ಜ.9: ಪುಣೆಯ ಡೆಕ್ಕನ್ ಕಾಲೇಜ್ ಡೀಮ್ಡ್ ವಿಶ್ವವಿದ್ಯಾಲಯದ ಪುರಾತತ್ವ ಶಾಸ್ತ್ರಜ್ಞರು ಯುವ ಜೋಡಿಯದ್ದೆಂದು ತಿಳಿಯಲಾದ ಎರಡು  ಅಸ್ಥಿಪಂಜರಗಳನ್ನು ಪತ್ತೆ ಹಚ್ಚಿದ್ದು, ಎರಡೂ  ಶವಗಳನ್ನು ಒಂದೇ ಸಮಯ ಒಂದೇ ಗೋರಿಯಲ್ಲಿರಿಸಲಾಗಿದೆಯೆಂದು ನಂಬಲಾಗಿದೆ.

ಪುರುಷನ ಮುಖ ಮಹಿಳೆಯತ್ತ ತಿರುಗಿದ ಸ್ಥಿತಿಯಲ್ಲಿದೆ. ಹರ್ಯಾಣಾದ ರಾಖಿಗರ್ಹಿ ಎಂಬಲ್ಲಿ ಉತ್ಖನನ ಮಾಡಲಾದ ಹರಪ್ಪನ್ ಯುಗದ ದಫನ ಭೂಮಿಯಲ್ಲಿ ಈ ಜೋಡಿಯ ಶವ ಪತ್ತೆಯಾಗಿದೆ. 

ಇಲ್ಲಿನ ಉತ್ಖನನ ವೇಳೆ ಹಲವಾರು ದಫನ ಭೂಮಿಗಳು ಹಾಗೂ ವಾಸ ಸ್ಥಳಗಳು ಪತ್ತೆಯಾಗಿದ್ದರೂ ಜೋಡಿಯೊಂದನ್ನು ಜತೆಯಾಗಿಯೇ ದಫನ ಮಾಡಿದ್ದು ಪತ್ತೆಯಾಗಿದ್ದು ಇದೇ ಮೊದಲ ಬಾರಿಯಾಗಿದೆ. ಎರಡೂ ಅಸ್ಥಿಪಂಜರಗಳ ಮುಖ ಮೇಲಿದ್ದರೆ ಕಾಲುಗಳು ಅಗಲವಾಗಿ ಹರಡಿಕೊಂಡಿದ್ದವು. ಗೋರಿಯಲ್ಲಿ ಒಂದು ಮಡಕೆ ಹಾಗೂ ಮಣಿಗಳ ಒಂದು ಸರದಂತಹ ವಸ್ತು ಮಹಿಳೆಯ ಅಸ್ಥಿಪಂಜರದ ಕುತ್ತಿಗೆ ಸಮೀಪವಿತ್ತು.

ಎರಡೂ ಅಸ್ಥಿಪಂಜರಗಳನ್ನು ಡೆಕ್ಕನ್ ಕಾಲೇಜ್ ಫಾರ್ ಅನಾಲಿಸಿಸ್‍ಗೆ ತಂದು ಅಲ್ಲಿ ಪರೀಕ್ಷೆ ನಡೆಸಿ ಅವುಗಳ ಲಿಂಗ ಯಾವುದೆಂದು ಪತ್ತೆ ಹಚ್ಚಲಾಯಿತು. ಇಬ್ಬರ ವಯುಸ್ಸು 21ರಿಂದ 35ರೊಳಗಿರಬಹುದೆಂದು ಅಂದಾಜಿಸಲಾಗಿದ್ದು, ಪುರುಷ 5 ಅಡಿ 6 ಇಂಚು ಉದ್ದವಿದ್ದರೆ ಮಹಿಳೆ 5 ಅಡಿ 2 ಇಂಚು ಉದ್ದವಿದ್ದಳೆಂದು ಅಂದಾಜಿಸಲಾಗಿದೆ. ರಾಖಿಗರ್ಹಿಯಲ್ಲಿ ಇಲ್ಲಿಯ ತನಕ 62 ಗೋರಿಗಳನ್ನು ಪತ್ತೆ ಹಚ್ಚಲಾಗಿದ್ದು ಇದೊಂದನ್ನು ಬಿಟ್ಟರೆ  ಬೇರೆ ಯಾವುದೇ ಗೋರಿಗಳಲ್ಲಿ ಜೋಡಿ ಅಸ್ಥಿಪಂಜರ ಪತ್ತೆಯಾಗಿರಲಿಲ್ಲ.

ಈ ಜೋಡಿ ಅಸ್ಥಿಪಂಜರಗಳ ಉತ್ಖನನದ ಮಾಹಿತಿ ಅಂತಾರಾಷ್ಟ್ರೀಯ ಮಟ್ಟದ ಎಸಿಬಿ ಜರ್ನಲ್ ಆಫ್ ಅನಾಟೆಮಿ ಆ್ಯಂಡ್ ಸೆಲ್ ಬಯಾಲಜಿ. ಇದರಲ್ಲಿ ಪ್ರಕಟವಾಗಿದೆ. ವಿಶ್ವವಿದ್ಯಾಲಯದ ಪುರಾತತ್ವ ವಿಭಾಗ, ವಿಧಿವಿಜ್ಞಾನ ಸಂಸ್ಥೆ ಹಾಗೂ ಸಿಯೋಲ್ ನ್ಯಾಷನಲ್ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್ ಇಲ್ಲಿ ತಜ್ಞರು ಈ ಉತ್ಖನನದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News