ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ವಿರೋಧಿಸಿ ಐಎಎಸ್ ಅಧಿಕಾರಿ ಶಾ ಫೈಝಲ್ ರಾಜೀನಾಮೆ

Update: 2019-01-09 15:09 GMT

#“ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ”

ಹೊಸದಿಲ್ಲಿ, ಜ.9: ಕಾಶ್ಮೀರದಲ್ಲಿ ನಡೆಯುತ್ತಿರುವ ಅನಿಯಂತ್ರಿತ ಹತ್ಯೆಗಳನ್ನು ಖಂಡಿಸಿ ಆಡಳಿತಾತ್ಮಕ ಸೇವೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಐಎಎಸ್ ಅಧಿಕಾರಿ ಶಾ ಫೈಝಲ್ ಘೋಷಿಸಿದ್ದಾರೆ.

ಕಳೆದ ವಾರವಷ್ಟೇ ಕಾಶ್ಮೀರಕ್ಕೆ ಮರಳಿದ್ದ 2010ನೇ ಬ್ಯಾಚಿನ ಟಾಪರ್ ಆಗಿರುವ ಫೈಝಲ್ ತಮ್ಮ ನಿರ್ಧಾರವನ್ನು ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ಕಳೆದ ಜುಲೈ ತಿಂಗಳಲ್ಲಿ ರಾಜ್ಯ ಸರಕಾರ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

“ಕಾಶ್ಮೀರದಲ್ಲಿ ನಡೆಯುತ್ತಿರುವ ಅನಿಯಂತ್ರಿತ ಹತ್ಯೆಗಳು ಹಾಗೂ ಕೇಂದ್ರ ಸರಕಾರದಿಂದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಯತ್ನಗಳ ಕೊರತೆ, ಹಿಂದುತ್ವ ಪಡೆಗಳ ಕೈಯಲ್ಲಿ ನಲುಗಿರುವ 20 ಕೋಟಿ ಭಾರತೀಯ ಮುಸ್ಲಿಮರ ಕಡೆಗಣಿಸಿ ಅವರನ್ನು ಎರಡನೇ ದರ್ಜೆ ನಾಗರಿಕರಂತೆ ಕಾಣುತ್ತಿರುವುದನ್ನು ವಿರೋಧಿಸಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ಮೇಲಿನ ದಾಳಿ, ಹೆಚ್ಚುತ್ತಿರುವ ಅಸಹಿಷ್ಣುತೆಯ ಸಂಸ್ಕೃತಿ ಹಾಗೂ ರಾಷ್ಟ್ರ ಭಕ್ತಿಯ ಹೆಸರಿನಲ್ಲಿ ಹರಡಲಾಗುತ್ತಿರುವ ದ್ವೇಷವನ್ನು ವಿರೋಧಿಸಿ   ರಾಜೀನಾಮೆ'' ಎಂದು ಅವರು ಬರೆದಿದ್ದಾರೆ.

“ಸಾಂವಿಧಾನಿಕ ಸಂಸ್ಥೆಗಳಾದ ಆರ್‍ಬಿಐ, ಸಿಬಿಐ ಮತ್ತು ಎನ್‍ಐಎ ಇವುಗಳನ್ನು ತಮಗೆ ಬೇಕಾದಂತೆ ಬಳಸಿ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ನುಚ್ಚು ನೂರು ಮಾಡುವ ಯತ್ನಗಳು ನಿಲ್ಲಬೇಕಿದೆ. ತಾರ್ಕಿಕ ದನಿಗಳನ್ನು ಅಮುಕಲಾಗದು ಈ ದಿಗ್ಬಂಧನದ ವಾತಾವರಣ ಅಂತ್ಯವಾಗಿ ನಾವು ನೈಜ ಪ್ರಜಾಪ್ರಭುತ್ವಕ್ಕೆ ಪ್ರವೇಶಿಸಬೇಕು,'' ಎಂದು ಅವರು ಆಶಿಸಿದ್ದಾರೆ.

ಹಾರ್ವರ್ಡ್ ಕೆನ್ನಡಿ ಸ್ಕೂಲ್ ನಲ್ಲಿ ಫುಲ್ ಬ್ರೈಟ್ ಫೆಲ್ಲೋ ಆಗಿರುವ ಅವರು ನ್ಯಾಷನಲ್ ಕಾನ್ಫರೆನ್ಸ್ ಸೇರಿ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂಬ ಊಹಾಪೋಹಗಳಿವೆ. ಆವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಫೈಝಲ್ ಅವರು ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯವರಾಗಿದ್ದಾರೆ.

ನಾಗರಿಕ ಸೇವೆಗಳಿಗೆ ಸೇರಬಯಸುವ ಆಕಾಂಕ್ಷಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು ಇನ್ನು ಮುಂದೆ ತನ್ನ ಪ್ರಮುಖ ಕಾರ್ಯಗಳಲ್ಲೊಂದಾಗಲಿದೆ ಎಂದೂ ಅವರು ಹೇಳಿದ್ದಾರೆ. ಫೈಝಲ್ ತನ್ನ ಭವಿಷ್ಯದ ಯೋಜನೆಗಳನ್ನು ಬಹಿರಂಗಗೊಳಿಸಿಲ್ಲವಾದರೂ,ಅವರು ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಫೈಝಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತನ್ನ ಭವಿಷ್ಯದ ಯೋಜನೆಗಳನ್ನು ಹಂಚಿಕೊಳ್ಳಲಿದ್ದಾರೆ. ಸದ್ಯ ಅವರು ಹಾರ್ವರ್ಡ್ ಕೆನೆಡಿ ಸ್ಕೂಲ್‌ನಲ್ಲಿ ಫುಲ್‌ ಬ್ರೈಟ್ ಫೆಲೊ ಆಗಿದ್ದಾರೆ.

“ಆಡಳಿತಶಾಹಿಯ ನಷ್ಟವು ರಾಜಕೀಯದ ಲಾಭವಾಗಿದೆ. ರಾಜಕೀಯ ಕ್ಷೇತ್ರಕ್ಕೆ ಫೈಝಲ್ ಅವರಿಗೆ ಸ್ವಾಗತ” ಎಂದು ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ನಾಯಕ ಉಮರ್ ಅಬ್ದುಲ್ಲಾ ಟ್ವೀಟಿಸಿದ್ದಾರೆ.

ಫೈಝಲ್ ಶೀಘ್ರವೇ ಎನ್‌ಸಿ ಸೇರುವ ಸಾಧ್ಯತೆಯಿದ್ದು,ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News