ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ 1 ಲಕ್ಷ ರೂ. ವಿತರಣೆಗೆ ಕ್ರಮ: ಸಿಎಂ ಕುಮಾರಸ್ವಾಮಿ

Update: 2019-01-09 12:09 GMT

ಬೆಂಗಳೂರು, ಜ. 9: ಉಡುಪಿಯಲ್ಲಿ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ತಲಾ 1 ಲಕ್ಷ ರೂ.ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾಪತ್ತೆಯಾಗಿರುವ ಮೀನುಗಾರರ ಕುಟುಂಬದವರಿಗೆ 1 ಲಕ್ಷ ರೂ. ಚೆಕ್ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಮೀನುಗಾರರ ನಾಪತ್ತೆ ಬಗ್ಗೆ ರಾಜ್ಯ ಸರಕಾರ ಯಾವುದೇ ರೀತಿಯಲ್ಲಿಯೂ ನಿರ್ಲಕ್ಷ್ಯ ವಹಿಸಿಲ್ಲ ಎಂದು ಹೇಳಿದರು.

ನಾಪತ್ತೆಯಾಗಿರುವ ಮೀನುಗಾರರ ನೋವಿಗೆ ರಾಜ್ಯ ಸರಕಾರ ಸ್ಪಂದಿಸುತ್ತಿದೆ. ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಈಗಾಗಲೇ ಉಡುಪಿಯಲ್ಲಿದ್ದಾರೆ. ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಆದರೆ, ಮೀನುಗಾರರ ನೋವಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮೀನುಗಾರರು ನಾಪತ್ತೆಯಾಗಿರುವ ಮಾಹಿತಿ ದೊರೆತ ತಕ್ಷಣ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಕೇಂದ್ರ ರಕ್ಷಣಾ ಸಚಿವರು, ವಿದೇಶಾಂಗ ಸಚಿವರ ಗಮನಕ್ಕೆ ತರಲಾಗಿದೆ. ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಕೇಂದ್ರ ಸರಕಾರಕ್ಕೂ ಈಗಾಗಲೇ ಪತ್ರ ಬರೆಯಲಾಗಿದೆ. ಕರಾವಳಿ ಪಡೆಯೂ ನಮ್ಮ ಮನವಿಗೆ ಸ್ಪಂದಿಸಿದೆ. ರಾಜ್ಯ ಸರಕಾರ ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡಿದೆ. ನಾಪತ್ತೆಯಾಗಿರುವ ಮೀನುಗಾರರ ಶೋಧ ಕಾರ್ಯ ಮುಂದುವರೆಸಲಾಗುತ್ತಿದೆ ಎಂದರು.

ಈಗಾಗಲೇ ಇರಾನ್‌ನಲ್ಲಿ ಬಂಧನವಾಗಿದ್ದ 15 ಮಂದಿ ಮೀನುಗಾರರು ಬಿಡುಗಡೆಯಾಗಿದ್ದಾರೆ. ಉಗ್ರರು ಎಲ್ಲಿಯಾದರೂ ಅಪಹರಿಸಿದ್ದಾರೆಯೇ ಎಂಬ ಬಗ್ಗೆಯೂ ಗಮನಹರಿಸಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News