ರೈಲ್ವೆ ಹಳಿಯಲ್ಲಿ 5 ಸಜೀವ ಬಾಂಬ್ ಗಳು ಪತ್ತೆ

Update: 2019-01-09 14:04 GMT

ಕೋಲ್ಕತಾ, ಜ.9: ಇಲ್ಲಿನ ಉತ್ತರ 24 ಪರಗಣ ಜಿಲ್ಲೆಯ ಹಾಬ್ರಾ ನಿಲ್ದಾಣದ ಹಳಿಯಲ್ಲಿ ಐದು ಸಜೀವ ಕಚ್ಛಾ ಬಾಂಬ್‌ಗಳು ಪತ್ತೆಯಾದ ಬಳಿಕ ಮುಂಜಾಗರೂಕತಾ ಕ್ರಮವಾಗಿ ಈ ಮಾರ್ಗದ ರೈಲು ಸಂಚಾರವನ್ನು ಕೆಲ ಸಮಯ ಅಧಿಕಾರಿಗಳು ರದ್ದುಗೊಳಿಸಿದ ಘಟನೆ ನಡೆದಿದೆ.

ಇದರಿಂದ ನಿಬಿಡ ರೈಲು ಸಂಚಾರವಿರುವ ಸೀಲ್ದಾ-ಬೊಂಗಾನ್ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಪ್ರಯಾಣಕ್ಕೆ ತೊಡಕಾಗಿದೆ. ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಆಗಮಿಸಿ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ ಬಳಿಕ ರೈಲುಗಳ ಸಂಚಾರ ಆರಂಭವಾಗಿದೆ. ಅಲ್ಲದೆ ಹೌರಾದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಕಲ್ಲೆಸೆದ ಪರಿಣಾಮ ಇಬ್ಬರು ಶಾಲಾ ಮಕ್ಕಳು ಗಾಯಗೊಂಡಿದ್ದಾರೆ. ದಕ್ಷಿಣ ಕೋಲ್ಕತಾದಲ್ಲಿ ಸಿಪಿಐ(ಎಂ) ಮುಖಂಡ , ಶಾಸಕ ಸುಜನ್ ಚಕ್ರವರ್ತಿಯನ್ನು ಮತ್ತೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಮಂಗಳವಾರ ಬೆಳಿಗ್ಗೆ ಸುಜನ್‌ರನ್ನು ಬಂಧಿಸಿದ್ದ ಪೊಲೀಸರು ರಾತ್ರಿ ಬಿಡುಗಡೆಗೊಳಿಸಿದ್ದರು. ಕಿಡಿಗೇಡಿಗಳು ರೈಲ್ವೇ ಹಳಿಯ ಮೇಲಿನ ವಿದ್ಯುತ್ ವಯರ್‌ಗೆ ಮರದ ಕೊಂಬೆಗಳನ್ನು ಎಸೆದರಲ್ಲದೆ ರೈಲ್ವೇ ಹಳಿಯ ಮೇಲೆ ಮರಗಳ ಕೊಂಬೆಗಳನ್ನು ಉರುಳಿಸಿದ ಕಾರಣ ದಕ್ಷಿಣ ಕೋಲ್ಕತಾದ ದಕ್ಷಿಣ ಬರಾಸತ್, ಮಾಥುರ್‌ಪುರ, ಡೈಮಂಡ್ ಹಾರ್ಬರ್ ಮತ್ತು ಕಾಕ್‌ದ್ವೀಪ ಪ್ರದೇಶಗಳಲ್ಲಿ ರೈಲು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News