ಬಿಜೆಪಿಯವರ ಡೆಡ್‌ಲೈನ್ ಸರಕಾರದ ಮೇಲೆ ಪರಿಣಾಮ ಬೀರಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-01-09 14:17 GMT

ಬೆಂಗಳೂರು, ಜ.9: ಬಿಜೆಪಿಯವರು ನೀಡುವ ಡೆಡ್‌ಲೈನ್‌ಗಳು ನಮ್ಮ ಮೈತ್ರಿ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನಾಯಕರು ಸಂಕ್ರಾಂತಿಗೆ ಒಂದು ಡೆಡ್‌ಲೈನ್, ಶಿವರಾತ್ರಿಗೆ ಒಂದು ಡೆಡ್‌ಲೈನ್, ಆಮೇಲೆ ಯುಗಾದಿಗೊಂದು ಡೆಡ್‌ಲೈನ್ ಕೊಡುತ್ತಲೇ ಇರುತ್ತಾರೆ. ಆದರೆ, ಮೈತ್ರಿ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.

ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಕಾಂಗ್ರೆಸ್ ಪಾಲಿನ ನಿಗಮ, ಮಂಡಳಿಗಳ ನೇಮಕವನ್ನು ತಡೆ ಹಿಡಿಯಲಾಗಿತ್ತು. ಯಾರಿಗೂ ಅಗೌರವ ತೋರಿಸುವ ಕೆಲಸವನ್ನು ಮಾಡಿಲ್ಲ. ಎಲ್ಲ ವಿಚಾರಗಳು ಸುಸೂತ್ರವಾಗಿ ಬಗೆಹರಿಯಲಿವೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲೆಯ ಮೀನುಗಾರರು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮೀನುಗಾರರ ಕುಟುಂಬದ ಸದಸ್ಯರು ಭಯಪಡುವ ಅಗತ್ಯವಿಲ್ಲ. ನಾಪತ್ತೆಯಾಗಿರುವವರನ್ನು ಹುಡುಕುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಜೊತೆ ಈ ವಿಚಾರದ ಕುರಿತು ಮಾತನಾಡಿದ್ದೇನೆ. ಸಮುದ್ರದಲ್ಲಿ ಭಯೋತ್ಪಾದಕರು ಏನಾದರೂ ಅವರನ್ನು ಅಪಹರಿಸಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ. ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ತಲಾ 1 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News