ಬಿಎಂಟಿಸಿ ಅಧ್ಯಕ್ಷರಾಗಿ ಶಾಸಕ ಎನ್.ಎ.ಹಾರೀಸ್, ಬಿಡಿಎಗೆ ಶಾಸಕ ಎಸ್.ಟಿ.ಸೋಮಶೇಖರ್ ನೇಮಕ

Update: 2019-01-09 15:11 GMT

ಬೆಂಗಳೂರು, ಜ. 9: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಅಧ್ಯಕ್ಷರಾಗಿ ಶಾಸಕ ಎನ್.ಎ.ಹಾರೀಸ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧ್ಯಕ್ಷರಾಗಿ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ರಾಜ್ಯ ರೇಶ್ಮೆ ಕೈಗಾರಿಕಾ ಮಂಡಳಿ ಅಧ್ಯಕ್ಷರನ್ನಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರನ್ನು ನೇಮಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಹಿನ್ನೆಲೆಯಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಪಕ್ಷದಿಂದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ 19 ಮಂದಿ ಹಾಗೂ 9 ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಲು ಪಟ್ಟಿ ರವಾನಿಸಿದ್ದರು. ಮೊದಲಿಗೆ 14 ನಿಗಮ ಮಂಡಳಿ ಅಧ್ಯಕ್ಷರು ಹಾಗೂ 8 ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಲಾಗಿತ್ತು. ಇದೀಗ ಮತ್ತೆ ಮೂರು ಮಂದಿಯ ಹೆಸರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಬುಧವಾರ ಘೋಷಣೆ ಮಾಡಿದ್ದಾರೆ.

ಆದರೆ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ವೆಂಕಟರಮಣಯ್ಯ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಸೂಚಿಸಲಾಗಿದ್ದ ಶಾಸಕ ಡಾ. ಕೆ.ಸುಧಾಕರ್ ಹೆಸರನ್ನು ಸಿಎಂ ಕುಮಾರಸ್ವಾಮಿ ತಡೆ ಹಿಡಿದಿದ್ದಾರೆ. ಹೀಗಾಗಿ ಇಬ್ಬರು ಶಾಸಕರು, ಸಿಎಂ ಹಾಗೂ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಸಂಪುಟ ದರ್ಜೆ ಸ್ಥಾನ: ‘ಶಾಸಕ ಅಬ್ಬಯ್ಯ ಪ್ರಸಾದ್ ಅವರನ್ನು ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿ ಸಿಎಂ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News