ಪಶು ವೈದ್ಯಕೀಯ ಕಾಲೇಜು ಸಹ ಪ್ರಾಧ್ಯಾಪಕಿ ಡಾ.ವೀಣಾ ನಿಧನ

Update: 2019-01-09 16:29 GMT

ಬೆಂಗಳೂರು, ಜ. 9: ಮೂತ್ರಪಿಂಡ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ಟಿ. ವೀಣಾ(58) ಎಂಬವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಪತಿ ಖ್ಯಾತ ಕಾದಂಬರಿಕಾರ ಹಾಗೂ ವಿಜ್ಞಾನಿ ಡಾ.ಕೆ.ಎನ್.ಗಣೇಶಯ್ಯ, ಪುತ್ರಿ ಪುಣ್ಯಕೋಟಿ ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ. ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಲ್ಲಿ 1984ರಿಂದ 2018ರ ವರೆಗೆ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಾಚೀನ ಈಜಿಪ್ಟಿನ ಪರೀಕ್ಷೆಯೊಂದನ್ನು ಆಧರಿಸಿ ಜಾನುವಾರುಗಳಲ್ಲಿ ಗರ್ಭ ತಪಾಸಣೆ ವಿಧಾನವನ್ನು ಕಂಡುಹಿಡಿದಿದ್ದಕ್ಕಾಗಿ ವೀಣಾರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನಿಂದ ಸರ್ ಸಿ.ವಿ.ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ಲಭಿಸಿತ್ತು. ಪ್ರಾಣಿಗಳ ವರ್ತನೆ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಅವರು, ಮೈನಾ ಹಕ್ಕಿಗಳ ಆಹಾರ ಕ್ರಮಗಳ ಕುರಿತು ಸಂಶೋಧನೆ ನಡೆಸಿ ಮಧುರೈ ಕಾಮರಾಜ್ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದರು.

ಮೃತರ ಅಂತ್ಯಸಂಸ್ಕಾರವನ್ನು ನಾಳೆ(ಜ. 10) ಮಧ್ಯಾಹ್ನ 12ರ ಸುಮಾರಿಗೆ ಕೋಲಾರ ಜಿಲ್ಲೆಯ ಕೋಟಿಗಾನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News